ಅವರಗುಪ್ಪದ ವಸಂತ ಜಟ್ಯಾ ನಾಯ್ಕ(43) ಕೊಲೆಯಾದವರು. ಅವರ ಸಹೋದರ ಮಹೇಶ ನಾಯ್ಕ (37)ಹಾಗೂ ಜಗಳ ಬಿಡಿಸಲು ಬಂದ ಪಕ್ಕದ ಮನೆಯ ಕುಮಾರ ನಾರಾಯಣ ನಾಯ್ಕ(35) ಅವರಿಗೂ ಚಾಕುವಿನಿಂದ ಇರಿಯಲಾಗಿದ್ದು, ಇಬ್ಬರಿಗೂ ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಎಸ್‌ಪಿ ದೀಪನ್ ಎಂ.ಎನ್., ಎಎಸ್‌ಪಿ ಜಗದೀಶ್ ಎನ್. ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ನಡೆಸಲು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.
ಅವರಗುಪ್ಪದ ಮಹೇಶ ನಾಯ್ಕ ಕಳೆದ 20 ವರ್ಷಗಳ ಹಿಂದೆ ಪಟ್ಟಣದ ಹೊಸೂರಿನ ಸುಚಿತ್ರಾ ನಾಯ್ಕ ಎನ್ನುವಳನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದೆ ಅವರ ದಾಂಪತ್ಯದಲ್ಲಿ ವೈಮನಸ್ಯ ಮೂಡಿ, ಇಬ್ಬರೂ ಬೇರಾಗಿದ್ದರು. ಮಹೇಶ ನಾಯ್ಕ ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಸುಚಿತ್ರಾ ಕೆಲವು ದಿನಗಳ ಹಿಂದೆ ಇಬ್ಬರು ಹೆಣ್ಣುಮಕ್ಕಳೊಂದಿಗೆ ಶಿವಮೊಗ್ಗದ ಕಮಲಾಕರ ಗುರೂಜಿ ಮನೆಯಲ್ಲಿ ವಾಸಮಾಡುತ್ತಿದ್ದಳು.
ಇತ್ತೀಚೆಗೆ ಬೆಂಗಳೂರಿನಿಂದ ಮರಳಿದ್ದ ಮಹೇಶ ನಾಯ್ಕ ಬಳ್ಳಟ್ಟೆ ಸಮೀಪ ಸ್ವಂತ ಮನೆ ಕಟ್ಟಿಕೊಂಡಿದ್ದರೂ ಒಬ್ಬನೇ ಇರಬೇಕು ಎಂಬ ಕಾರಣಕ್ಕೆ ಅವರಗುಪ್ಪದ ತನ್ನ ಅಣ್ಣನ ಮನೆಯಲ್ಲಿರುತ್ತಿದ್ದರು. ಶಿವಮೊಗ್ಗದಲ್ಲಿ ಸುಚಿತ್ರಾ ಜತೆಗಿದ್ದ ಪುತ್ರಿ ಸುಮಶ್ರೀ ಇತ್ತೀಚೆಗೆ ತಂದೆ ಮಹೇಶನಿಗೆ ಮೊಬೈಲ್ ಸಂದೇಶ ಕಳಿಸಿ, `ತಾಯಿ ಸುಚಿತ್ರಾ ಕಿರುಕುಳ ನೀಡುತ್ತಿದ್ದು, ತನ್ನನ್ನು ಕರೆದುಕೊಂಡು ಹೋಗು' ಎಂದು ಮನವಿ ಮಾಡಿದ್ದರು. ಆತನ ಸೂಚನೆಯಂತೆ ಸುನಶ್ರೀ ಶಿವಮೊಗ್ಗ ಬಿಟ್ಟು ಸಿದ್ದಾಪುರಕ್ಕೆ ಬಂದಿದ್ದಳು. ತಂದೆ ಮಹೇಶ ನಾಯ್ಕ ಜತೆ ಸಿದ್ದಾಪುರ ಠಾಣೆಗೆ ತೆರಳಿ, ತಾಯಿಯ ಕಿರುಕುಳದ ಬಗ್ಗೆ ದೂರು ನೀಡಿದ್ದಳು. ಪೊಲೀಸರ ಸೂಚನೆಯ ಮೇರೆಗೆ ಮಹೇಶ ನಾಯ್ಕ ಸುಮಶ್ರೀಯನ್ನು ಶಿರಸಿಯ ಮಕ್ಕಳ ಕಲ್ಯಾಣ ಅಽಕಾರಿ ಬಳಿ ಸೋಮವಾರ ಕರೆದುಕೊಂಡು ಹೋಗಿದ್ದರು. ಮೂರು ದಿನ ಬಿಟ್ಟು ಬಂದು ಹಾಜರಾಗುವಂತೆ ಮಕ್ಕಳ ರಕ್ಷಣಾಽಕಾರಿ ಕಚೇರಿಯಲ್ಲಿ ಸೂಚಿಸಿದ್ದರಿಂದ ಅಪ್ಪ ಮಗಳು ಅಣ್ಣ ವಸಂತ ನಾಯ್ಕ ಮನೆಗೆ ವಾಪಸಾಗಿದ್ದರು. ಆದರೆ, ಸೋಮವಾರ ರಾತ್ರಿಯೇ ಸುಚಿತ್ರಾ ತಂಡ ಕಟ್ಟಿಕೊಂಡು ಬಂದು ಗಲಾಟೆ ಮಾಡಿದ್ದಾಳೆ.