ಹೊರ ರಾಜ್ಯಗಳಿಗೆ ತೆರಳುವ ಬಸ್‌ಗಳಿಗಿಗೇಕಿಲ್ಲ ಶಕ್ತಿ ಪ್ರಯೋಜನ ..?

ಎನ್‌ಡಬ್ಲುಕೆಆರ್‌ಟಿಸಿ ಬಸ್‌
ಎನ್‌ಡಬ್ಲುಕೆಆರ್‌ಟಿಸಿ ಬಸ್‌
Published on
ಕಾರವಾರ: ಹೊರ ರಾಜ್ಯಕ್ಕೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಲವು ಬಸ್‌ಗಳಲ್ಲಿ ಶಕ್ತಿ ಯೋಜನೆಯ ಗ್ಯಾರಂಟಿ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಬಸ್‌ಗಳಿಗೆ ನಿರೀಕ್ಷಿತ ಪ್ರಯಾಣಿಕರು ಹತ್ತುತ್ತಿಲ್ಲ ಎನ್ನಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಎನ್‌ಡಬ್ಲುಕೆಆರ್‌ಟಿಸಿ) ತನ್ನ ವ್ಯಾಪ್ತಿಯಲ್ಲಿರುವ ವಿವಿಧ ನಿಲ್ದಾಣಗಳಿಂದ 260 ಮಾರ್ಗಗಳಲ್ಲಿ 537 ಬಸ್‌ಗಳನ್ನು ನಿತ್ಯ ಹೊರ ರಾಜ್ಯಗಳಿಗೆ ಓಡಿಸುತ್ತಿದೆ. ಈ ಬಸ್‌ಗಳು ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ಗೋವಾಕ್ಕೆ ಅತಿ ಹೆಚ್ಚು ಬಸ್‌ಗಳು ಹೋಗಿ ಬರುತ್ತವೆ. ಕಾರವಾರ, ಶಿರಸಿ, ಹಾವೇರಿ, ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ, ಹುಬ್ಬಳ್ಳಿ ಹೀಗೆ ವಿವಿಧ ನಿಲ್ದಾಣಗಳಿಂದ ಪುಣೆ, ಥಾಣೆ, ಕೊಲ್ಹಾಪುರ, ಮುಂಬೈ, ಪಣಜಿ, ಮಡಗಾಂವ, ಹೈದ್ರಾಬಾದ್ ಹೀಗೆ ವಿವಿಧ ಪ್ರಮುಖ ನಗರಗಳಿಗೆ ಬಸ್‌ಗಳು ಓಡಾಟ ನಡೆಸುತ್ತವೆ.
ಆ ಬಸ್‌ಗಳು ರಾಜ್ಯದ ಒಳಗೆ ಸುಮಾರು 1.73 ಲಕ್ಷ ಕಿಮೀ ಸಂಚರಿಸಿದರೆ, 59399 ರಾಜ್ಯದ ಹೊರಗೆ ಓಡಾಟ ನಡೆಸುತ್ತವೆ. ಎಂದರೆ ಆ ಬಸ್‌ಗಳ ಓಡಾಟದ ಶೇ. 35 ರಷ್ಟನ್ನು ಮಾತ್ರ ಅವು ಹೊರ ರಾಜ್ಯದಲ್ಲಿ ಸಂಚರಿಸುತ್ತವೆ. ಆದರೆ ರಾಜ್ಯದ ಒಳಗೂ ಅವುಗಳಿಗೆ ಶಕ್ತಿ ಯೋಜನೆಯ ಪ್ರಯೋಜನ ನೀಡದೇ ಇರುವುದು ಸರಿಯಲ್ಲ ಎಂಬ ಆರೊಪ ಕೇಳಿ ಬಂದಿದೆ.
ಉಚಿತ ಪ್ರಯಾಣ ಇಲ್ಲದ ಬಸ್‌ಗಳಿಗೆ ಮಹಿಳೆಯರು ಹತ್ತುತ್ತಿಲ್ಲ. ಇದರಿಂದ ಕುಟುಂಬದ ಜತೆ ಸಂಚರಿಸುವ ಪುರುಷ ಪ್ರಯಾಣಿಕರೂ ಈ ಬಸ್‌ಗಳಿಗೆ ಹತ್ತದ ಕಾರಣ ಹೊರ ರಾಜ್ಯಕ್ಕೆ ಸಂಚರಿಸುವ ಸಾರಿಗೆ ಬಸ್‌ಗಳಿಗೆ ಈ ಮೊದಲಿನಷ್ಟು ಪ್ರಯಾಣಿಕರು ಹೋಗುತ್ತಿಲ್ಲ. ನಿರೀಕ್ಷಿತ ಸ್ಪಂದನೆ ದೊರೆಯದ ಕಾರಣ ಕೆಲವು ಬಸ್ ಮಾರ್ಗಗಳನ್ನು ಬಂದ್ ಮಾಡಲಾಗಿದೆ ಎಂದು ಸಾರಿಗೆ ಸಂಸ್ಥೆಯ ಅಽಕಾರಿಯೊಬ್ಬರು ವಿವರಿಸಿದರು.
ಕೆಲವು ಬಸ್‌ಗಳಿಗೆ ಮಾತ್ರ ಇದೆ
ಎನ್‌ಡಬ್ಲುಕೆಆರ್‌ಟಿಸಿಯ ಡಿಪೋಗಳಿಂದ ಹೊರ ರಾಜ್ಯಕ್ಕೆ ಸಂಚರಿಸುವ ಕೆಲವು ಬಸ್‌ಗಳಿಗೆ ಮಾತ್ರ ರಾಜ್ಯದ ಒಳಗೆ ಶಕ್ತಿಯ ಪ್ರಯೋಜನ ದೊರೆಯುತ್ತದೆ. ಎಂದರೆ ಗೋಕರ್ಣ-ಕೊಲ್ಹಾಪುರ ಬಸ್‌ಗೆ ಗೋಕರ್ಣದಿಂದ ನಿಪ್ಪಾಣಿವರೆಗೆ ರಾಜ್ಯದ ವಿಳಾಸ ಹೊಂದಿರುವ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟçಕ್ಕೆ ಸಂಚರಿಸುವ ಕೆಲವೇ ಕೆಲವು ಬಸ್‌ಗಳಿಗೆ ಈ ಸೌಲಭ್ಯ ನೀಡಲಾಗಿದೆ. ಇದೇ ರೀತಿ ಇತರ ಬಸ್‌ಗಳಿಗೂ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
"

ರಾಜ್ಯದ ಹೊರಗೆ 20 ಕಿಮೀವರೆಗೆ ಸಂಚರಿಸಲು ಬಸ್‌ಗಳಿಗೆ ಬೇರೆ ಪರವಾನಗಿಯ ಅವಶ್ಯಕತೆ ಇಲ್ಲ. ಹಾಗೆ ರಾಜ್ಯದ ಗಡಿಯಲ್ಲಿರುವ ಕೆಲವು ಸ್ಥಳಗಳಿಗೆ ಹೋಗುವ ಬಸ್‌ಗಳಿಗೆ ಮಾತ್ರ ಶಕ್ತಿ ಸೌಲಭ್ಯ ನೀಡಲಾಗಿದೆ. ಅಂತಾರಾಜ್ಯ ಪರವಾನಗಿ ಹೊಂದಿರುವ ಯಾವುದೇ ಬಸ್‌ಗಳಿಗೆ ಶಕ್ತಿ ಯೋಜನೆಯ ಸೌಲಭ್ಯ ನೀಡಿಲ್ಲ. ಅದು ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕಿದೆ.

ಬಸವರಾಜ ಅಮ್ಮನವರ್ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net