Mosquitoes ಸೊಳ್ಳೆಗಳ ಉತ್ಪಾದನಾ ಕೇಂದ್ರವಾದ ‘ಚರಂಡಿ’

ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಮದ ಗಟಾರವೊಂದರಲ್ಲಿ ಕೊಳಚೆ ನೀರು ಹಾಗೂ ತ್ಯಾಜ್ಯ ವಸ್ತುಗಳು ತುಂಬಿಕೊಂಡಿರುವುದು.
ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಮದ ಗಟಾರವೊಂದರಲ್ಲಿ ಕೊಳಚೆ ನೀರು ಹಾಗೂ ತ್ಯಾಜ್ಯ ವಸ್ತುಗಳು ತುಂಬಿಕೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲಕ್ಕೆ ಸಿದ್ಧಗೊಳ್ಳದ ಗ್ರಾಪಂಗಳು
  • ಗ್ರಾಮೀಣ ಭಾಗದ ಹಲವೆಡೆ ದುಸ್ಥಿತಿ
ಸಿದ್ದಾಪುರ: ಒಂದೆರಡು ಮುಂಗಾರು ಮಳೆ ಸುರಿದ ಪರಿಣಾಮ ಚರಂಡಿಗಳಲ್ಲಿ ಕೆಸರು, ಕೊಳಚೆ ನೀರು, ಕಸಕಡ್ಡಿಗಳು ರಾಶಿ ರಾಶಿಯಾಗಿ ತುಂಬಿಕೊಂಡಿವೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚಿದೆ.
ಗ್ರಾಮೀಣ ಭಾಗದ ಯಾವುದೇ ಕಡೆ ಹೋದರೂ ಚರಂಡಿಗಳಲ್ಲಿ ಕೆಸರಿನ ರಾಶಿ, ಕೊಳಚೆ ನೀರು, ತ್ಯಾಜ್ಯ ಹಾಗೂ ಕೊಳೆತ ವಸ್ತುಗಳು ಗೋಚರಿಸುತ್ತವೆ. ಈ ಎಲ್ಲ ಸ್ಥಳಗಳು ಈಗ ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ರೂಪುಗೊಂಡಿವೆ.
ಗ್ರಾಮೀಣ ಭಾಗದಲ್ಲಿನ ಚರಂಡಿಗಳು ಪ್ರಾರಂಭದ ಒಂದೆರಡು ಮಳೆಗೆ ತನ್ನ ಒಡಲೊಳಗೆ ಎಲ್ಲ ವಸ್ತುಗಳನ್ನು ತುಂಬಿಕೊಂಡು ದುರ್ನಾತ ಬೀರುತ್ತಿರುವುದರಿಂದ ರಸ್ತೆಗಳಲ್ಲಿ ಓಡಾಡದಂತಾಗಿದೆ. ಇನ್ನು ಇಂತಹ ಚರಂಡಿಗಳ ಸುತ್ತಮುತ್ತ ವಾಸ್ತವ್ಯದ ಮನೆ, ಅಂಗಡಿ-ಮುಂಗಟ್ಟುಗಳಿರುವ ಜನರ ಸ್ಥಿತಿ ಅಯೋಮಯವಾಗಿದೆ. ಮುಖ್ಯವಾಗಿ ಅಂಗನವಾಡಿ ಮಕ್ಕಳು, ಶಾಲಾ ವಿದ್ಯಾರ್ಥಿಗಳು ಮತ್ತು ಹಿರಿಯರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ.
ತಾಲೂಕಿನ ಬಹುತೇಕ ಗ್ರಾಪಂಗಳು ಮಳೆಗಾಲದ ಪೂರ್ವ ತಯಾರಿ ಮಾಡಿಕೊಂಡಿಲ್ಲ. ಗ್ರಾಪಂ ನಿರ್ವಹಿಸುವ ಪಕ್ಕಾ ಹಾಗೂ ಕಚ್ಚಾ ಗಟಾರಗಳಲ್ಲಿ ತಾಜ್ಯ ಸಂಗ್ರಹಗೊಂಡಿದ್ದಲ್ಲದೆ, ಗಿಡಗಂಟಿಗಳು ಬೆಳೆದಿದ್ದು, ಮಳೆಗಾಲದ ನೀರು ಚರಂಡಿಯಲ್ಲಿ ಹರಿಯುವ ಬದಲು ರಸ್ತೆಯ ಮೇಲೆ ಹರಿಯುವಂತಾಗಿದೆ. ಇದರಿಂದ ಪಾದಚಾರಿಗಳು ಸಂಕಟ ಮತ್ತು ಕಿರಿಕಿರಿ ಅನುಭವಿಸುವಂತಾಗಿದೆ.
ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಸುರಿದ್ದರಿಂದ ಎಲ್ಲ ಚರಂಡಿಗಳಲ್ಲಿ ಕಸಕಡ್ಡಿಗಳು-ಕೊಳೆತ ವಸ್ತುಗಳು ಹಾಗೆಯೇ ಇರುವುದನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ತೆರವುಗೊಳಿಸಿ ರಸ್ತೆ ಮೇಲೆ ಹರಿಯುವ ನೀರು ಹರಿಯುವುದನ್ನು ನಿಲ್ಲಿಸಬೇಕು. ಅಲ್ಲದೆ, ಸೊಳ್ಳೆಗಳ ನಿಯಂತ್ರಣ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಪಂ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಮುಂದಾಗಬೇಕಿದೆ.
ಈಗಾಗಲೇ ಬಿದ್ದ ಮಳೆ ಹಾಗೂ ಬಿಸಿಲು-ಮೋಡ ವಾತಾವರಣದಿಂದಾಗಿ ತಾಲೂಕಿನ ಗ್ರಾಮೀಣ ಭಾಗದ ಅನೇಕ ಜನರು ಜ್ವರ, ತಂಡಿ, ಕೆಮ್ಮು, ನೆಗಡೆಯಿಂದ ಬಳಲುತ್ತಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆ ಈ ಕುರಿತು ಗ್ರಾಪಂ ಮಟ್ಟದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ನಡೆಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ.

ತಾಲೂಕಿನ ಎಲ್ಲ ಗ್ರಾಪಂನ ಪಿಡಿಒಗಳಿಗೆ ಈಗಾಗಲೇ ಮೌಖಿಕವಾಗಿ ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಗಟಾರಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಸ್ವಚ್ಛ ಮಾಡದೆ ಇರುವ ಗ್ರಾಪಂಗಳಿಗೆ ಮತ್ತೊಮ್ಮೆ ಸೂಚನೆ ನೀಡಲಾಗುತ್ತಿದೆ. ಗಟಾರದ ಅವ್ಯವಸ್ಥೆಯಿಂದ ಕಸಕಡ್ಡಿ, ಕೊಳಚೆ ನೀರು ನಿಂತು ಸೊಳ್ಳೆಗಳು ಹೆಚ್ಚಾಗುತ್ತಿರುವುದರಿಂದ ಜನರ ಆರೋಗ್ಯದ ದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು.

— ದೇವರಾಜ ಹಿತ್ತಲಕೊಪ್ಪ. ತಾಪಂ ಇಒ ಸಿದ್ದಾಪುರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net