3800 ಕಿಮೀ ಕ್ರಮಿಸಿ ಕಾರವಾರ ತೀರಕ್ಕೆ ಬಂದ ಕಡಲಾಮೆ

ಕಡಲಾಮೆ ಧವಳ ಲಕ್ಷ್ಮೀ ಹಾಗೂ ಅದು  ಸಂಚರಿಸಿದ ದಾರಿ
ಕಡಲಾಮೆ ಧವಳ ಲಕ್ಷ್ಮೀ ಹಾಗೂ ಅದು ಸಂಚರಿಸಿದ ದಾರಿ
Published on
ಕಾರವಾರ: ಆಮೆ ಎಂದರೆ ಬಲು ನಿಧಾನವಾಗಿ ಚಲಿಸುವುದು ಎಂದೇ ಪ್ರಸಿದ್ಧವಾಗಿದೆ. ಅದರ ಹೆಸರಿನಲ್ಲಿಯೇ ಕಥೆಗಳೂ ಜನಜನಿತವಾಗಿವೆ. ಆದರೆ, ನಿಧಾನವಾಗಿಯೂ ಆಮೆಗಳು ಸಾವಿರಾರು ಕಿಮೀ ಕ್ರಮಿಸುತ್ತವೆ ಎಂಬುದು ಸಾಬೀತಾಗಿದೆ.
ಮಹಾರಾಷ್ಟ್ರದ ಕಡಲ ತೀರದಲ್ಲಿ ಬಿಟ್ಟ ಆಮೆಯೊಂದು ಅರಬ್ಬಿ ಸಮುದ್ರದಲ್ಲಿ 3500 ಕಿಮೀ ಕ್ರಮಿಸಿ ಕಾರವಾರ ತೀರದ ಹೊರ ವಲಯದಲ್ಲಿ 10 ದಿನಗಳಿಂದ ಓಡಾಡುತ್ತಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
2025 ರ ನವೆಂಬರ್‌ನಲ್ಲಿ ಮಹಾರಾಷ್ಟ್ರದ ದಹಾನು ಕರಾವಳಿಯಲ್ಲಿ ಮೀನುಗಾರರ ಬಲೆಗೆ ಬಿದ್ದ ಆಲಿವ್ ರೆಡ್ಲಿ ಪ್ರಭೇದದ ಹೆಣ್ಣು ಆಮೆಯನ್ನು ರಕ್ಷಿಸಿ ಅದಕ್ಕೆ `ಧವಳ ಲಕ್ಷ್ಮೀ' ಎಂದು ಹೆಸರಿಡಲಾಗಿತ್ತು. ಅದಕ್ಕೆ ವೈಲ್ಡ್ಲೈಪ್ ಇನ್ಸ್ಟ್ಯೂಟ್ ಆಫ್ ಇಂಡಿಯಾ (ಡಬ್ಲುಐಐ) ವಿಜ್ಞಾನಿ ಸುರೇಶ ಹಾಗೂ ಮಹಾರಾಷ್ಟ್ರ ಮ್ಯಾಂಗ್ರೋವ್ ಫೌಂಡೇಶನ್ ತಂತ್ರಜ್ಞರು ಸೆಟಲೈಟ್ ಡಿವೈಸ್ ಅಳವಡಿಸಿ ಸಮುದ್ರಕ್ಕೆ ಬಿಟ್ಟಿದ್ದರು.
ಆಮೆ ಓಡಾಟದ ಮಾರ್ಗವನ್ನು ಮ್ಯಾಂಗ್ರೋವ್ ಫೌಂಡೇಶನ್ ಆಫ್ ಮಹಾರಾಷ್ಟ್ರ ನಿರಂತರವಾಗಿ ಅನುಸರಿಸಿ ಅದರ ವರದಿಯನ್ನು ನೀಡುತ್ತಿದೆ. `ಧವಳ ಲಕ್ಷ್ಮೀ ಮಹಾರಾಷ್ಟ್ರ ಕರಾವಳಿಯಿಂದ ಪಶ್ಚಿಮಕ್ಕೆ ಆಳ ಸಮುದ್ರ ದಾಟಿ ಓಮನ್ ಸಮೀಪದ ಮಸೀರಾ ದ್ವೀಪದವರೆಗೂ ತಲುಪಿತ್ತು. ನಂತರ ವಾಪಸ್ ಬಂದಿದ್ದು, ಈಗ ಕಾರವಾರ ಕಾಂಟಿನೆಂಟ್ ಶೆಲ್ ಬ್ರೇಕರ್ ಪ್ರದೇಶದಲ್ಲಿ (ತೀರದಿಂದ ಸುಮಾರು 25 ಕಿಮೀ ದೂರದ ಆಳ ಸಮುದ್ರ ಕಣಿವೆ) ಓಡಾಡುತ್ತಿದೆ ಎಂದು ವರದಿ ನೀಡಿದೆ.
ಡಬ್ಲುಐಐ ಹಾಗೂ ಮಹಾರಾಷ್ಟ್ರ ಸಂಸ್ಥೆಗಳು ಈ ಹಿಂದೆಯೂ ಸಾಕಷ್ಟು ಆಮೆಗಳಿಗೆ ಡಿವೈಸ್ ಅಳವಡಿಸಿ ಅದನ್ನು ಟ್ರಾಕ್ ಮಾಡಿವೆ. ಅದು, ಕೇರಳ, ಮುರ್ಡೇಶ್ವರ ಹೀಗೆ ವಿವಿಧ ಪ್ರದೇಶಗಳಿಗೆ ಓಡಾಡುವುದನ್ನು ಖಚಿತ ಮಾಡಿದೆ. ಹೀಗೆ ಆಮೆಗಳ ಓಡಾಟವನ್ನು ಹಿಂಬಾಲಿಸಿ ಅಧ್ಯಯನ ಮಾಡಿದ ವರದಿಗಳು ದಾಖಲಾಗಿವೆ. ಎಂದು ಕಾರವಾರ ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಡಲ ಜೀವ ಸ್ತ್ರಜ್ಞ ಡಾ.ಶಿವಕುಮಾರ್ ಹರಗಿ ಮಾಹಿತಿ ನೀಡಿದ್ದಾರೆ.
ಆಹಾರವನ್ನು ಹುಡುಕಿ ಆಮೆಗಳು ಓಡಾಟ ನಡೆಸುತ್ತಿರತ್ತವೆ. ಕೆಲವು ಆಮೆಗಳು ಒಂದು ವರ್ಷದಲ್ಲಿ ಹತ್ತಾರು ಸಾವಿರ ಕಿಮೀ ಸಂಚರಿಸಿದ ಉದಾಹರಣೆಗಳಿವೆ. ವಿಶೇಷ ಎಂದರೆ ಅವರು ಮತ್ತೆ ಮೂಲ ಸ್ಥಾನಕ್ಕೆ ಬರುತ್ತವೆ ಎನ್ನುತ್ತಾರೆ ಸಾಗರ ವಿಜ್ಞಾನಿ ಡಾ.ಶಿವಕುಮಾರ ಹರಗಿ ಹೇಳುತ್ತಾರೆ.

ಟೆಡ್ ಅಳವಡಿಕೆ

ಆಲಿವ್ ರೆಡ್ಲಿ ಎಂಬುದು ಪಶ್ವಿಮ ಕರಾವಳಿಯ ಸಾಮಾನ್ಯ ಪ್ರಭೇದದ ಆಮೆ. ಕಾರವಾರದಿಂದ ಹೊನ್ನಾವರವರೆಗೆ ವಿವಿಧ ಕಡಲ ತೀರದಲ್ಲಿ ಪ್ರತಿ ವರ್ಷ ನೂರಾರು ಆಮೆಗಳು ಬಂದು ಮೊಟ್ಟೆಯನ್ನಿಟ್ಟು ಸಂತಾನೋತ್ಪತ್ತಿ ಮಾಡಿಕೊಂಡು ಹೋಗುತ್ತವೆ. ಅರಣ್ಯ ಇಲಾಖೆಯ ಮರೈನ್ ಆ್ಯಂಡ್ ಇಕೋ ಸೆಲ್‌ನ ವಿಭಾಗವು ಮೊಟ್ಟೆಗಳನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ.
ಆಮೆಗಳು ಸಮುದ್ರದಲ್ಲಿ ಅದರದ್ದೇ ಆದ ಮಾರ್ಗದಲ್ಲಿ ಪ್ರತಿ ವರ್ಷ ಸಾವಿರಾರು ಕಿಮೀ ಸಂಚರಿಸುತ್ತದೆ. ಅವುಗಳಿಗೆ ಯಾವ ಕಾಲದಲ್ಲಿ ಎಲ್ಲಿ ಆಹಾರ ಸಿಗುತ್ತದೆ ಎಂಬ ಮಾಹಿತಿ ಇರುತ್ತದೆ. ಆಲಿವ್ ರೆಡ್ಲಿ ಜೆಲ್ಲಿ ಮೀನು ಹಾಗೂ ಇತರ ಮೀನುಗಳನ್ನು ತಿಂದು ಬದುಕುತ್ತವೆ. 10 ದಿನದಿಂದ ಇಲ್ಲಿದೆ ಎಂದರೆ ಈ ಪ್ರದೇಶದಲ್ಲಿ ಅದಕ್ಕೆ ಬೇಕಾದ ಸಮೃದ್ಧ ಆಹಾರ ಸಿಗುತ್ತದೆ ಎಂದರ್ಥ. ಡಾ.ಶಿವಕುಮಾರ ಹರಗಿ ಸಾಗರ ಜೀವ ಶಾಸ್ತ್ರಜ್ಞ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net