ಅಂಗನವಾಡಿ ಕಾರ್ಯಕರ್ತೆಯರಿಗೆ ಹರಿದ ಸೀರೆ ವಿತರಣೆ

ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಿದ ಸೀರೆಗಳು
ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಿದ ಸೀರೆಗಳು
Published on

ಪ್ರಮುಖ ಮುಖ್ಯಾಂಶಗಳು

  • ಬರುವ ಗೌರವಧನವೆಲ್ಲ ಮೊಟ್ಟೆಗೇ ಖಾಲಿ
  • ಎಸ್‌ಐಆರ್‌, ಜಾತಿ ಪ್ರಮಾಣ ಪತ್ರಕ್ಕೆ ಅಂಗನವಾಡಿ ಕಾರ್ಯಕರ್ತೆಯರ ನೇಮಕ
ಕಾರವಾರ:

ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಿದ ಸೀರೆಗಳ ಗುಣಮಟ್ಟ ಅಸಮರ್ಪಕವಾಗಿರುವ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಕೆಲವು ಸೀರೆಗಳು ಹರಿದೂ ಹೋಗಿದ್ದು, ಅವುಗಳನ್ನು ಉಡಲು ಬಾರವು ಎಂದು ಕಾರ್ಯಕರ್ತೆಯರು ಹಾಗೂ ಸಹಾಯಕರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರೀಯ ಭಂಡಾರದಿAದ ತಲಾ 400 ರೂ. ವೆಚ್ಚದಲ್ಲಿ ಸೀರೆಗಳನ್ನು ಖರೀದಿ ಮಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜ್ಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತಲಾ ಎರಡು ಸೀರೆಗಳನ್ನು ಉಚಿತವಾಗಿ ಎರಡು ತಿಂಗಳ ಹಿಂದೆ ವಿತರಿಸಿದೆ.
ಕೆಲವರ ಸೀರೆಗಳು ವಿತರಿಸುವಾಗಲೇ ಹರಿದು ಹೋಗಿರುವುದು ಕಂಡು ಬಂದಿದೆ. ಸೀರೆ ತೆಳುವಾಗಿದ್ದು, ಒಂದೆರಡು ಬಾರಿ ತೊಳೆಯುವಾಗಲೇ ಹರಿದು ಹೋಗುತ್ತಿದೆ ಎಂದು ಕಾರ್ಯಕರ್ತೆಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಹಳಿಯಾಳದಲ್ಲಿ ವಿತರಿಸಿದ ಸೀರೆಯ ಅಗಲ ಕಡಿಮೆ ಇದೆ ಎಂದು ಅಲ್ಲಿನ ಸಿಡಿಪಿಒ ಅವರೇ ವರದಿ ನೀಡಿದ್ದಾರೆ. ಎಲ್ಲವೂ ನೈಲಾನ್ ಸೀರೆಗಳಾಗಿದ್ದು, ಬೇಸಿಗೆಯಲ್ಲಿ ಉಡಲು ಕಷ್ಟವಾಗುತ್ತಿದೆ ಎಂಬುದು ಕಾರ್ಯಕರ್ತೆಯರ ಇನ್ನೊಂದು ಗೋಳು.

ಗೌರವಧನವೆಲ್ಲ ಮೊಟ್ಟೆಗೇ ಖಾಲಿ !!

ನಮಗೆ ನೀಡುವ ಗೌರವಧನವು ಮೊಟ್ಟೆಯ ಹಣದ ವ್ಯತ್ಯಾಸ ಭರಿಸಲು ಖಾಲಿಯಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘದ ಜಿಲ್ಲಾ ಅಧ್ಯಕ್ಷೆ ಅನಿತಾ ಶೇಟ್ ಶೇಟ್ ಆರೋಪಿಸಿದರು.
ಜಿಲ್ಲಾಽಕಾರಿ ಅವರಿಗೆ ಮನವಿ ಸಲ್ಲಿಸುವ ಪೂರ್ವದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಯ ಬೆಲೆ 9 ರೂ. ಇದೆ. ಆದರೆ, ಪ್ರತಿ ಮೊಟ್ಟೆಗೆ 6 ರೂ.ಮಾತ್ರ ಕೊಡಲಾಗುತ್ತದೆ. ಒಂದು ಮೊಟ್ಟೆಯ ಮೇಲೆ 2.5 ರಿಂದ 3 ರೂ. ನಮ್ಮ ಕೈಯ್ಯಿಂದ ಬೀಳುತ್ತಿದೆ. ಮೇಲಿಂದ ಸಾಗಣೆ ವೆಚ್ಚವನ್ನೂ ನಮ್ಮ ಗೌರವಧನದಿಂದಲೇ ಭರಿಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಅಂಗನವಾಡಿಗಳಿಗೆ ನೇರವಾಗಿ ಸಿಲಿಂಡರ್ ಪೂರೈಕೆ ಮಾಡುವುದಿಲ್ಲ. ಸಿಡಿಪಿಒ ಅವರ ಸಹಿ ಪಡೆದು, ನಂತರ ಏಜೆನ್ಸಿಗಳಿಗೆ ಹೋಗಿ ಸಿಲಿಂಡರ್ ಪಡೆದು ನಂತರ ಬಿಲ್‌ನ್ನು ಸಿಡಿಪಿಒ ಕಚೇರಿಗೆ ಸಲ್ಲಿಸಿ ಓಡಾಟ ಮಾಡಬೇಕಿದೆ. ಆಟಿಕೆ ಸಾಮಗ್ರಿಗಳನ್ನು ಅಂಗನವಾಡಿಗಳಿಗೆ ನೇರವಾಗಿ ಪೂರೈಸುವುದಿಲ್ಲ. ಅವುಗಳನ್ನು ತಾಲೂಕು ಕಚೇರಿಗಳಿಂದ ನಾವೇ ಕೊಂಡೊಯ್ಯಬೇಕು. ಸಹಾಯಕಿಯರಿಗೆ ಮೊಬೈಲ್ ನೀಡಲಾಗಿದೆ. ಆದರೆ, ಸಿಮ್ ನೀಡಿಲ್ಲ. ಈಗ ಪ್ರತಿ ತಿಂಗಳು 340 ರೂ. ರಿಚಾರ್ಜ್ ಮಾಡಿಸಬೇಕು. ಆದರೆ, ಇಲಾಖೆಯಿಂದ ಕೇವಲ 160 ರೂ. ನೀಡಲಾಗುತ್ತದೆ. ಹಲವರ ಮೊಬೈಲ್ ಹಾಳಾಗಿದೆ. ಇದರಿಂದ ಕಾರ್ಯಕರ್ತೆಯರು ಪೋಶಣ್ ಟ್ರಾಕರ್ ಸೇರಿ ವಿವಿಧ ಕಾರ್ಯಗಳನ್ನು ತಮ್ಮ ಸ್ವಂತ ಮೊಬೈಲ್‌ನಿಂದ ಮಾಡುವ ಪರಿಸ್ಥಿತಿ ಬಂದಿದೆ ಎಂದರು. ಪ್ರತಿ ಅಂಗನವಾಡಿಗೆ ತಲಾ 2 ಸಾವಿರ ರೂ. ಸಾದಿಲ್ವಾರು ವೆಚ್ಚ ಬರುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಅದೂ ಬರುತ್ತಿಲ್ಲ. ಓಡಾಟ ಮಾಡಿದ್ದಕ್ಕೆ ಓಡಾಟ ಭತ್ಯೆಯನ್ನೂ ಇಲಾಖೆಯಿಂದ ಸರಿಯಾಗಿ ನೀಡುತ್ತಿಲ್ಲ. ಒಟ್ಟಿನಲ್ಲಿ ಸಿಗುವ ಗೌರವಧನ ಅರ್ಧ ಇದೇ ಕಾರ್ಯಕ್ಕೆ ಖರ್ಚಾಗುತ್ತದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಶೋಭಾ ನಾಯ್ಕ ಮಾತನಾಡಿ, ಬಿಎಲ್‌ಒಗಳನ್ನಾಗಿ ಸರ್ಕಾರದ ಸಿ ದರ್ಜೆಯ ನೌಕರರನ್ನು ನೇಮಿಸಬೇಕು ಎಂದಿದೆ. ಆದರೆ, ಶೇ. 80 ರಷ್ಟು ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಒಗಳನ್ನಾಗಿ ನೇಮಿಸಲಾಗಿದೆ. ಇಷ್ಟೇ ಅಲ್ಲದೇ ಈಗ ಜಾತಿ ಪ್ರಮಾಣಪತ್ರ ವಿತರಣೆ, ವಿವಿಧ ಸರ್ವೇಗಳಿಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುತ್ತಿದೆ. ಯಾವುದಕ್ಕೂ ಗೌರವಧನ ಕೊಡುವುದಿಲ್ಲ. ನಾವು ಆಕ್ಷೇಪ ವ್ಯಕ್ತಪಡಿಸಿದರೆ, ನಿಮ್ಮನ್ನು ಕೆಲಸದಿಂದ ತೆಗೆಯಲಾಗುವುದು ಎಂದು ಅಽಕಾರಿಗಳು ಧಮಕಿ ಹಾಕುತ್ತಾರೆ ಎಂದರು. ಸಂಘದ ಯಮುನಾ ನಾಯ್ಕ, ಲಲಿತಾ ಶೆಟ್ಟಿ, ನೇತ್ರಾವತಿ ನಾಯ್ಕ, ರೇಖಾ ಭಟ್ಟ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
..............
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net