ಪೊಲೀಸರ ಮರ್ಯಾದೆ ಕಳೆದ ರೌಡಿ 'ಮಚ್ಚ ಮಂಜಾ' ಕೊನೆಗೂ ಖಾಕಿ ಬಲೆಗೆ!

ಬಂಧಿತ ಮಂಜಾ
ಬಂಧಿತ ಮಂಜಾ
Published on
 ಹಳಿಯಾಳ: ಪೊಲೀಸರ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿದಿಸಿದ್ದ ಮಚ್ಚಾ ಮಂಜಾ ಕೊನೆಗೂ ಪೋಲೀಸ್ ಬಲೆಗೆ ಬಿದ್ದಿದ್ದಾನೆ.
ಮೊಬೈಲ್ ಫೋನ್ ಕೂಡ ಬಳಸದೆ, ತಲೆಮರೆಸಿಕೊಂಡು ಪೊಲೀಸರಿಗೆ ನಿದ್ದೆಗೆಡಿಸಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ ಅಲಿಯಾಸ್ ಮಚ್ಚ ಮಂಜಾನನ್ನು ಮಹಾರಾಷ್ಟ್ರ ಗಡಿಯ ಸಾಂಗ್ಲಿ ಸಮೀಪ ಭಾನುವಾರದಂದು ನಡೆಸಿದ  ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. 
ಇತ್ತೀಚೆಗೆ ಮೌರ್ಯ ಹೋಟೆಲ್ ಎದುರಿನ ಪಾನ್ ಶಾಪ್ ಬಳಿ ಸಾರ್ವಜನಿಕರಿಗೆ ತೊಂದರೆ ನೀಡಿ, ಕರ್ತವ್ಯಕ್ಕೆ ಬಂದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಮಂಜಾನ ದಾದಾಗಿರಿಯ ವಿಡಿಯೋಗಳು ರಾಜ್ಯಾದ್ಯಂತ ವೈರಲ್ ಆಗಿದ್ದವು. 
ಸ್ಥಳಕ್ಕೆ ಬಂದಿದ್ದ ಪಿಎಸ್‌ಐ ಬಸವರಾಜ ಮಬನೂರು ಕ್ರಮ ಕೈಗೊಳ್ಳದೆ ಹಿಂದಿರುಗಿದ್ದು ಇಲಾಖೆಗೆ ಭಾರೀ ಮುಜುಗರ ತಂದಿತ್ತು. ಪರಿಣಾಮ ಪಿಎಸ್‌ಐ ಅಮಾನತು, 8 ಸಿಬ್ಬಂದಿ ವರ್ಗಾವಣೆ ಆಗಿತ್ತು.  ಈ ಸಂಬಂಧ ಪೊಲೀಸ್ ತನಿಖೆ ನಡೆಯುತ್ತಿದೆ. 
ಆದರೆ,  ನಿಜವಾದ ಸವಾಲು ಎದುರಾಗಿದ್ದು ಬಳಿಕ. ಯಾವುದೇ ಮೊಬೈಲ್ ಬಳಸದ, ಡಿಜಿಟಲ್ ಸುಳಿವು ಸಿಗದ ಮಂಜಾನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಗ್ಗಂಟಾಗಿತ್ತು. ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಲೊಕೇಶನ್ ಇಲ್ಲದೆ ಆರೋಪಿಯನ್ನು ಹಿಡಿಯುವುದು ಸೂಜಿಯನ್ನು ಬಣವೆಯಲ್ಲಿ ಹುಡುಕಿದಂತೆ. ಆದರೆ, ಆತನನ್ನು ಬಂಧಿಸದೇ ಇರುವುದು ಮರ್ಯಾದೆಯ ಪ್ರಶ್ನೆಯಾಗಿತ್ತು. ಛಲ ಬಿಡದ ಖಾಕಿ ಪಡೆ, ಹಳೆಯ ಶೈಲಿಯ ಖಚಿತ ಮಾಹಿತಿ ಜಾಲ, ಮಾನವ ಬೇಹುಗಾರಿಕೆ ಮತ್ತು ಕ್ಷೇತ್ರ ಮಟ್ಟದ ಕಾರ್ಯಾಚರಣೆಗೆ ಇಳಿಯಿತು.  
ಎಸ್ ಪಿದೀಪನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮತ್ತು  ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ಹಳಿಯಾಳ ಮತ್ತು ದಾಂಡೇಲಿ ಪಿಎಸ್ಐ ಗಳಾದ ಕೃಷ್ಣಗೌಡ ಅರಕೇರಿ, ಮಹಾಂತೇಶ್ ನಾಯ್ಕ್, ಕಿರಣ್ ಪಾಟೀಲ್  ಮತ್ತು ಹಳಿಯಾಳ, ದಾಂಡೇಲಿ, ರಾಮನಗರ ಪೊಲೀಸ್ ಠಾಣೆಯ ಸಿಬ್ಬಂದಿ 
ಎಂಎಂ ಮುಲ್ಲಾ, 
ಕೃಷ್ಣ, ಚಂದ್ರು, ಶಫಿ, ಬಸವರಾಜ ತೇಲಸಂಗ, ಗಂಗಾಧರ್, ನಿಂಗಪ್ಪ ಬಳ್ಳಾರಿ, ಸೊಹೇಲ್, ಬಸವರಾಜು ತ್ಯಾಪಿ, ಶ್ರೀಶೈಲ, ಮಂಜುನಾಥ ಬಾಲಿ, ಬಸವರಾಜ ಹಗರಿ 
ಸಿಬ್ಬಂದಿಗಳ ತಂಡ ಹಗಲು-ರಾತ್ರಿ ನಿದ್ದೆಗೆಟ್ಟು ಬಲೆ ಬೀಸಿತು. ಕೊನೆಗೂ ಬೇರೆ ರಾಜ್ಯಕ್ಕೆ ಪರಾರಿಯಾಗುತ್ತಿದ್ದ ವೇಳೆ ಭಾನುವಾರ ಸಂಜೆ ಮಹಾರಾಷ್ಟ್ರ ಗಡಿಯಲ್ಲಿ ಮಂಜಾನನ್ನು ಸುತ್ತುವರಿದು ಬಂಧಿಸಲಾಯಿತು.  
ಆರೋಪಿಯನ್ನು ತಕ್ಷಣ ಹಳಿಯಾಳಕ್ಕೆ ಕರೆತಂದು ಮಧ್ಯರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net