ಕಾರವಾರ: ಜಿಲ್ಲೆಯ ನದಿಗಳ ನೀರನ್ನು ಆಧರಿಸಿ ಯೋಜನೆಗಳನ್ನು ಜಾರಿಗೆ ತರುವುದಕ್ಕೂ ಪೂರ್ವ ಧಾರಣಾ ಸಾಮರ್ಥ್ಯ ಅಧ್ಯಯನ ಮಾಡಿ, ಪಶ್ಚಿಮ ಘಟ್ಟ ಉಳಿಸಿ ಎಂದು ಜಿಲ್ಲೆಯ ಸರ್ವ ಪಕ್ಷದ ಜನಪ್ರತಿನಿಧಿಗಳ ಹಾಗೂ ಸಂಘಟನೆಗಳ ನಿಯೋಗ ಕೇಂದ್ರ ಸಚಿವರನ್ನು ಒತ್ತಾಯಿಸಿದೆ.
ಕೇಂದ್ರ ಜಲ ಸಂಪನ್ಮೂಲ ಸಚಿವ ಸಿ.ಆರ್.ಪಾಟೀಲ್, ಅರಣ್ಯ ಸಚಿವ ಭೂಪೇಂದ್ರ ಯಾದವ್, ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರನ್ನು ಸೋಮವಾರ ಭೇಟಿಯಾಗಿ ಮನವಿ ಮಾಡಿತು.
ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಪರವಾಗಿ ಶಾಸಕರು, ತಜ್ಞರ ನಿಯೋಗ ಭೇಟಿಯಾಗಿದ್ದು, ಈ ಬಗ್ಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಅನೇಕ ಯೋಜನೆಗಳಿಂದ ಪ್ರಾದೇಶಿಕ ಅಸಮತೋಲನವನ್ನು ಎದುರಿಸುತ್ತಿದೆ. ಪಶ್ಚಿಮ ಘಟ್ಟಗಳ ಸೂಕ್ಷ÷್ಮ ಪ್ರದೇಶಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ 8 ಅಣೆಕಟ್ಟೆಗಳಿವೆ. ಕೈಗಾ, ಸೀಬರ್ಡ್ ಮುಂತಾದ ಬೃಹತ್ ಯೋಜನೆಗಳಿಂದ ಸಾವಿರಾರು ಕುಟುಂಬಗಳು ನಿರಾಶ್ರಿತವಾಗಿವೆ. ಅವರಿಗೆ ಸೂಕ್ತ ಪರಿಹಾರ, ಪುನರ್ವಸತಿ ಉದ್ಯೋಗ ಕಲ್ಪಿಸಲು ಸಾಧ್ಯವಾಗಿಲ್ಲ. ಈ ಎಲ್ಲ ಬೃಹತ್ ಯೋಜನೆಗಳಿಂದಾಗಿ ಭೂ ಕುಸಿತ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಅನೇಕ ಪ್ರಾಕೃತಿಕ ವಿಕೋಪದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಪರಿಸರದ ಮೇಲೆ ಭಾರ ಆಗಿರುವಂತೆ ಕಾಣುತ್ತಿದೆ ಎಂದು ಸಚವರಿಗೆ ವಿವರಿಸಿದ್ದೇವೆ ಎಂದರು.
ಈ ಎಲ್ಲ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿರುವ ಅಘನಾಶಿನಿ-ವೇದಾವತಿ, ಬೇಡ್ತಿ-ವರದಾ ನದಿಗಳ ಜೋಡಣೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಗಳ ಕುರಿತಂತೆ ನಮ್ಮ ಜಿಲ್ಲೆಯ ಜನರ ಆತಂಕದ ಮತ್ತು ವಿರೋಧದ ಧ್ವನಿಯನ್ನು ನಾವು ಕೇಂದ್ರದ ಸಚಿವರಿಗೆ ತಿಳಿಸಿದ್ದೇವೆ. ಸೋಂದಾ ಸ್ವರ್ಣವಲ್ಲೀ ಸ್ವಾಮಿಗಳ ನೇತೃತ್ವದಲ್ಲಿ ಈಗಾಗಲೇ ಅನೇಕ ಹೋರಾಟಗಳನ್ನು ಪಕ್ಷಾತೀತವಾಗಿ ನಾವೆಲ್ಲ ಭಾಗವಹಿಸಿ ಮಾಡಿದ್ದೇವೆ. ಈ ಜಿಲ್ಲೆಯ ಜನರ ಧ್ವನಿಗಳನ್ನು ಬದುಕಿಗೆ ಇರುವ ಕಷ್ಟಗಳನ್ನು ಸಾರ್ವಜನಿಕ ಸಭೆಗಳಲ್ಲಿಯೂ ನಾವು ತಿಳಿಸಿದ್ದೇವೆ. ಕೇಂದ್ರ ಸರ್ಕಾರಕ್ಕೂ ಅದನ್ನು ಮುಟ್ಟಿಸಿದ್ದೇವೆ. ಇದೇ ನಿಯೋಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಮ್ಮ ಜಿಲ್ಲೆಯ ಜನರ ಆತಂಕವನ್ನು ಈ ಹಿಂದೆ ತಿಳಿಸಿತ್ತು ಎಂದರು.
ಸಕಾರಾತ್ಮಕ ಸ್ಪಂದನೆ:
ಈ ಎಲ್ಲ ಯೋಜನೆಗಳ ಡಿಪಿಆರ್‌ಗೆ ರಾಜ್ಯ ಸರ್ಕಾರ ಅನುಮೋದನೆ ಕೊಟ್ಟಿರುವುದರಿಂದ ಮುಂದೆ ಚಾಲನೆಯಾಗುವ ಹಂತಕ್ಕೆ ಬಂದಿದೆ. ಯೋಜನೆ ಜಾರಿ ಸಂಬAಧ ಮುಂದಿನ ಕಾರ್ಯಚಟುವಟಿಕಯನ್ನು ನಿಲ್ಲಿಸಲು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇವೆ.ಸಚಿವರ ಜೊತೆ ಉಪಯುಕ್ತ ಮಾತುಕತೆಯಾಯಿತು. ಉತ್ತರ ಕನ್ನಡ ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ಮಾಡಿಸಬೇಕು. ಅಲ್ಲಿಯವರೆಗೆ ಈಗಾಗಲೇ ಘೋಷಿತ ಯೋಜನೆಗಳ ಎಲ್ಲ ಪ್ರತಿಕ್ರಿಯೆಗಳನ್ನು ಇಲ್ಲಿಗೇ ಬಂದ್ ಮಾಡಬೇಕು ಎಂದು ಹೇಳಿದ್ದೇವೆ. ಎಲ್ಲ ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕಾಗೇರಿ ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರನ್ನೂ ಭೇಟಿ:
ಆದರೆ, ಕೇಂದ್ರ ಸರ್ಕಾರಕ್ಕೆ ಇದುವರೆಗೂ ಈ ಯಾವುದೇ ಯೋಜನೆಯ ಅಽಕೃತ ಮಾಹಿತಿ ಬಂದಿಲ್ಲ. ಹಾಗಾಗಿ ಬಂದಾಗ ಈ ಅಂಶವನ್ನು ನಾವು ಪರಿಗಣಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಎರಡಕ್ಕೂ ಸಂಬAಧಪಟ್ಟ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರಗಳು ಪ್ರಸ್ತಾವನೆ ಕಳಿಸಿದಾಗ ಕೇಂದ್ರದ ಅಳತೆಗೋಲಲ್ಲಿ ಒಪ್ಪಿಗೆಯಾದಲ್ಲಿ ಮಂದೆ ಹಲವು ವಿಚಾರಗಳು ಚರ್ಚೆಗೆ ಬರುತ್ತವೆ. ಯೋಜನೆಗಳ ಜಾರಿಯ ಹಂತದಲ್ಲಿ ಪರಿಸರ ಅನುಮತಿ ಸೇರಿ ವಿವಿಧ ಸಂಗತಿಗಳು ಕೇಂದ್ರದ ಮುಂದೆ ಬರುತ್ತವೆ. ಬೇಡ್ತಿ, ಅಘನಾಶಿನಿ ವಿಷಯ ಅನೇಕ ವರ್ಷಗಳಿಂದ ನಮ್ಮ ಮುಂದೆ ಇದೆ. ಆದರೆ, ಯಾವ ರಾಜ್ಯ ಸರ್ಕಾರಗಳೂ ಅವುಗಳ ಜಾರಿಗೆ ಮುಂದಾಗಿರಲಿಲ್ಲ.
ಈಗ ಸರ್ಕಾರ ಮುಂದಾಗಿರುವುದರಿಂದ ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತಾವಿತ ಎಲ್ಲ ಯೋಜನೆಗಳು ನಮ್ಮ ರಾಜ್ಯದ ಒಳಗೇ ನಡೆಯುವ ವಿಷಯವಾಗಿದೆ. ಹಾಗಾಗಿ ರಾಜ್ಯ ಸರ್ಕಾರಗಳು ಆಸಕ್ತಿ ತೆಗೆದುಕೊಂಡಾಗ ಮಾತ್ರ ಅದು ಜಾರಿಯಾಗುತ್ತದೆ. ನಾವು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ನಮ್ಮ ಆತಂಕ ತಿಳಿಸಿದ್ದೇವೆ. ಡಿ.ಕೆ.ಶಿವಕುಮಾರ್ ಅವರನ್ನು ಮಂಗಳೂರಿನಲ್ಲಿ ವೈಯಕ್ತಿಕವಾಗಿ ಭೇಟಿಯಾದಾಗ ಈ ವಿಷಯದ ಬಗ್ಗೆ ಮಾತನಾಡಿದ್ದೆ. ಮುಂದಿನ ದಿನದಲ್ಲಿ ಇದೇ ನಿಯೋಗದ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನೂ ಭೇಟಿ ಮಾಡುತ್ತೇವೆ ಎಂದು ಕಾಗೇರಿ ತಿಳಿಸಿದರು.
ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ಎಂಎಲ್‌ಸಿ ಶಾಂತಾರಾಮ ಸಿದ್ದಿ, ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ತಜ್ಞರಾದ ಬಾಲಚಂದ್ರ ಸಾಯಿಮನೆ, ನರಸಿಂಹ ಹೆಗಡೆ, ನಾರಾಯಣ ಹೆಗಡೆ ಗಡೀಕೈ ಇತರರು ಇದ್ದರು.