ಜಿಲ್ಲೆಗೆ ಮಾರಕವಾಗಲಿದೆ ನದಿ ತಿರುವು River diversion

ಬೇಡ್ತಿ ಅಘನಾಶಿನಿ ನದಿ ತಿರುವು(river diversion) ವಿರೋಧಿಸಿ ಶಿರಸಿಯಲ್ಲಿ ಪತ್ರ ಚಳುವಳಿ ಮೂಲಕ ಮುಖ್ಯಮಂತ್ರಿಗೆ ಸಹಸ್ರಾರು ಪತ್ರ ಕಳಿಸಿಕೊಡಲಾಯಿತು. ಶಾಸಕ ಭೀಮಣ್ಣ ನಾಯ್ಕ, ಅನಂತ ಅಶೀಸರ, ಗೋಪಾಲಕೃಷ್ಣ ವೈದ್ಯ ಇತರರಿದ್ದರು.
ಬೇಡ್ತಿ ಅಘನಾಶಿನಿ ನದಿ ತಿರುವು(river diversion) ವಿರೋಧಿಸಿ ಶಿರಸಿಯಲ್ಲಿ ಪತ್ರ ಚಳುವಳಿ ಮೂಲಕ ಮುಖ್ಯಮಂತ್ರಿಗೆ ಸಹಸ್ರಾರು ಪತ್ರ ಕಳಿಸಿಕೊಡಲಾಯಿತು. ಶಾಸಕ ಭೀಮಣ್ಣ ನಾಯ್ಕ, ಅನಂತ ಅಶೀಸರ, ಗೋಪಾಲಕೃಷ್ಣ ವೈದ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯ
  • ಶಿರಸಿಯಲ್ಲಿ ಪತ್ರ ಚಳುವಳಿ
  • ಉಪವಿಭಾಧಿಕಾರಿಗಳ ಮೂಲಕ ಮನವಿ
ಶಿರಸಿ: ಬೇಡ್ತಿ ಅಘನಾಶಿನಿ ನದಿ ತಿರುವು (River diversion) ಯೋಜನೆಗಳನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದರೂ ಮತ್ತೆ ಮತ್ತೆ ಈ ಯೋಜನೆ ಮುಂದುವರಿಯುತ್ತಲೇ ಇದೆ.
ಈಗ ಸರ್ಕಾರಗಳು ಈ ಯೋಜನೆಗಳ ಡಿಪಿಆರ್‌ಗೆ ಅನುಮತಿ ನೀಡಿದ್ದು, ತಕ್ಷಣವೇ ಈ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಶಾಸಕ ಭೀಮಣ್ಣ ನಾಯ್ಕ ಅವರನ್ನೂ ಒಳಗೊಂಡಂತೆ ಸಾವಿರಾರು ಜನ ಉಪ ವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಮೂಲಕ ಸೋಮವಾರ ಪತ್ರ ಚಳುವಳಿ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ನದಿ ತಿರುವಿನ ಈ ಯೋಜನೆಗಳು ನಮಗೆಲ್ಲ ಮಾರಕವಾಗಲಿದೆ. ಈಗಾಗಲೇ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ನಾವು ನಮ್ಮ ನಿರ್ಣಯವನ್ನು ಸ್ಪಷ್ಟ ಪಡಿಸಿ, ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದೇವೆ.
ನಮ್ಮ ನದಿ ನೀರನ್ನು ಉಳಿಸಿಕೊಂಡು ನಮ್ಮ ಜನತೆಯ ಬದುಕಿನಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುವುದು ಜಿಲ್ಲೆಯ ಪ್ರತಿ ವ್ಯಕ್ತಿಯ ಜವಾಬ್ದಾರಿ.
ಯೋಜನೆಗಳಿಂದಾಗುವ ಸಮಸ್ಯೆಗಳ ಗಂಭೀರತೆ ಅರಿತು ಹೋರಾಟದ ಮೂಲಕ ನಮ್ಮ ನೆಲ ಜಲ ಉಳಿಸಿಕೊಳ್ಳಬೇಕಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಹೋರಾಟ ಮಾಡಬೇಕಿದೆ ಎಂದರು.
ಜಿಲ್ಲೆಗೆ ನದಿ ತರುವು ಯೋಜನೆ ಸಾಧ್ಯವಿಲ್ಲ ಎಂಬುದನ್ನು ಈಗಾಗಲೇ ನಿಯೋಗದ ಮೂಲಕ ತೆರಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.
ನಾನು ಅಂದಿನ ನೀರಾವರಿ ಸಚಿವ ಡಿ.ಕೆ. ಶಿವಕುಮಾರ ಅವರನ್ನೂ ಸಹ ಭೇಟಿ ಮಾಡಿ ಮಾತನಾಡಿದ್ದೇನಲ್ಲದೇ ಸದನದಲ್ಲಿಯೂ ಸಹ ವಿರೋಧ ವ್ಯಕ್ತಪಡಿಸಿದ್ದೇನೆ.
ಆದರೆ, ಈ ಯೋಜನೆಯನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ ಎಂಬುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಳುವವರೆಗೂ ಇಲ್ಲಿ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಈ ಮಳೆಗಾಲದ ದಿನಗಳಲ್ಲಿಯೂ ಸಹ ನಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತಿಲ್ಲ.
ಈ ಸ್ಥಿತಿಯಲ್ಲಿ ನದಿ ನೀರನ್ನು ತಿರುಗಿಸಿ ಬೇರೆಡೆ ನೀಡಿದರೆ ಬೇಸಿಗೆಯ ದಿನಗಳಲ್ಲಿ ಶಿರಸಿ ನಗರಕ್ಕೂ ಕುಡಿಯಲು ನೀರು ಸಿಗುವುದಿಲ್ಲ. ಸಂಸದ ವಿಶ್ವೇಶ್ವರ ಹೆಗಡೆ ಅವರ ಮುಂದಾಳತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಇನ್ನೊಮ್ಮೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸೋಣ ಎಂದರು.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, ಕಳೆದ 25 ವರ್ಷಗಳಿಂದ ಜಿಲ್ಲೆಗೆ ಒಂದಿಲ್ಲೊಂದು ಪರಿಸರ ನಾಶಿನಿ, ಸಾರ್ವಜನಿಕರ ಜನ ಜೀವನದ ಮೇಲೆ ವ್ಯತ್ಯಯ ಉಂಟು ಮಾಡುವ ಯೋಜನೆಗಳು ಪ್ರಸ್ತಾವನೆ ಆಗುತ್ತಲೇ ಇದೆ.
ಕೇವಲ ಎಷ್ಟು ಜನಕ್ಕೆ ಈ ಯೋಜನೆ ಪ್ರಯೋಜನಕಾರಿ ಎಂಬ ಕಟ್ಟು ಕಥೆಯನ್ನು ನಮ್ಮ ಮುಂದಿಡುತ್ತಿದ್ದಾರೆ. ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಯೋಜನೆಗಳಿಂದ 2 ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಲಿದ್ದಾರೆ.
ಇದರ ನಡುವೆಯೇ ಜಿಲ್ಲೆಯಲ್ಲಿ ಮತ್ತೆ ಅಣು ಸ್ಥಾವರದ ಸ್ಥಾಪಿಸಯವ ಬಗ್ಗೆ ಸಹ ಸಮೀಕ್ಷೆ ನಡೆಸಲಾಗುತ್ತಿದೆ.
ಇಷ್ಟೆಲ್ಲ ಸಮಸ್ಯೆಗಳನ್ನು, ಆತಂಕಗಳನ್ನು ಎದುರಿಸಿದರೂ ಮಲೆನಾಡಿನ ಜನ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಶಾಂತಿಯುತ ಹೋರಾಟ ನಡೆಸುತ್ತಿದ್ದಾರೆ.
"

ನದಿ ಇರುವು ಯೋಜನೆಗಳ ಬಾಧಕ ಹಳ್ಳಿ ಜನತೆಗೆ ಮಾತ್ರ ಆಗುವುದಲ್ಲ. ನದಿ ನೀರು ತಿರುಗಿಸಿದರೆ ನಗರವಾಸಿಗಳಿಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಇಡೀ ಜಿಲ್ಲೆಯ ಜನತೆ ಒಗ್ಗಟ್ಟಾಗಿ ನಿಂತು ಈ ಯೋಜನೆಯನ್ನು ವಿರೋಧಿಸಬೇಕಾಗಿದೆ.

— ಭೀಮಣ್ಣ ನಾಯ್ಕ, ಶಾಸಕರು
ಆದಾಗ್ಯೂ ಶಾಂತಿಯ ಪರೀಕ್ಷೆ ನಡೆಸುವುದು ಸರಿಯಲ್ಲ. ನದಿ ತಿರುವು ಯೋಜನೆಗಳನ್ನು ವಿರೋಧಿಸಿ ಈಗಾಗಲೇ ಜಿಲ್ಲೆಯ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿಗಳು, ಸಹಕಾರಿ ಸಂಘಗಳೂ ಠರಾವು ಸ್ವೀಕರಿಸಿವೆ. ಅವಶ್ಯವಿದ್ದರೆ ನ್ಯಾಯಾಲಯದಲ್ಲೂ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ಎಂದರು.
ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಈ ಹೋರಾಟ ಯಾರ ವಿರುದ್ಧವೂ ಅಲ್ಲ. ನಮ್ಮ ಉಳಿವಿಗಾಗಿ ನಮ್ಮ ಹೋರಾಟವಾಗಿದೆ.
ಅದೇ ರೀತಿ ನಮ್ಮ ಸೊಪ್ಪಿನ ಬೆಟ್ಟಗಳ ಪಹಣಿಯಲ್ಲಿ ಬ ಖರಾಬ ಎಂದು ಈಗಾಗಲೇ ನಮೂದಾಗಿದೆ. ಸಾಕಷ್ಟು ಜನ ಇದನ್ನು ದುರುಪಯೋಗಪಡಿಸಿಕೊಂಡು ಬೆಳೆಯಲು ಯತ್ನಿಸುತ್ತಿದ್ದಾರೆ. ಎರಡೂ ವಿಷಯಗಳಲ್ಲಿ ಜಯ ಸಿಗುವ ತನಕ ಹೋರಾಟ ನಡೆಸುತ್ತೇವೆ ಎಂದರು.
ಎನ್.ಜಿ. ಹೆಗಡೆ ಭಟ್ರಕೇರಿ, ವಿ.ಎನ್. ಹೆಗಡೆ ಬೊಮ್ನಳ್ಳಿ, ವೇದಾವತಿ ಹೆಗಡೆ ನೀರ್ನಳ್ಳಿ, ಸುರೇಶ ಹಕ್ಕಿಮನೆ ಸೇರಿದಂತೆ ಸಾವಿರಾರು ಜನ ಈ ಪತ್ರ ಅಭಿಯಾನದಲ್ಲಿ ಪಾಲ್ಗೊಂಡರು.

ಮನೆ ಮನೆಯಿಂದಲೂ ಪತ್ರ...

ಮಲೆನಾಡಿನಲ್ಲಿ ಈಗ ಅಡಕೆ ಮರಗಳಿಗೆ ಬೋರ್ಡೋ ಸಿಂಪಡಿಸುವ ಕಾರ್ಯ ಆರಂಭಗೊಂಡಿದೆ.
ಹೀಗಾಗಿ ರೈತರು ಕಾರ್ಯದ ಒತ್ತಡದಲ್ಲಿದ್ದರೂ ಅಳಿವು ಉಳಿವಿನ ಆತಂಕದೊಂದಿಗೆ ಪತ್ರ ಕೈಲಿ ಹಿಡಿದು ಉಪವಿಭಾಗಾಧಿಕಾರಿ ಕಚೇರಿಗೆ ದೌಡಾಯಿಸಿದ್ದರು.
ಅನೇಕರು ಪತ್ರಗಳನ್ನು ತಮ್ಮ ಸಂಬಂಧಿಗಳು, ಪತ್ರ ಚಳುವಳಿಗೆ ತೆರಳುವವರೊಂದಿಗೆ ಕಳಿಸಿಕೊಟ್ಟಿದ್ದರು. ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸದಸ್ಯರು, ಸ್ವರ್ಣವಲ್ಲೀ ಮಾತಮಂಡಳದ ಸದಸ್ಯೆಯರು ಕಳೆದ 10 ದಿನಗಳಿಂದಲೂ ಮನೆ ಮನೆಗೆ ತೆರಳಿ ಸಂಗ್ರಹಿಸಿದ ಪತ್ರಗಳನ್ನು ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ತಲುಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net