

ಕಾರವಾರ: ಜಿಲ್ಲೆಯ ಎಲ್ಲ ಪ್ರಮುಖ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಿಂಗ್ ರೋಡ್ ಅಭಿವೃದ್ಧಿಗೆ ಯೋಜನೆ ಕರಡು ನಕ್ಷೆ ಸಿದ್ಧವಾಗಿದ್ದು, ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ.
ಎರಡು ಹಾಗೂ ಮೂರನೇ ಹಂತದ ನಗರಗಳನ್ನು ಭವಿಷ್ಯದ ವ್ಯಾಪಾರ, ವಾಣಿಜ್ಯ ಉದ್ದೇಶಕ್ಕೆ ಅನುಕೂಲವಾಗುವಂತೆ ಸುಸ್ಥಿರವಾಗಿ ಅಭಿವೃದ್ಧಿ ಮಾಡಲು ರಸ್ತೆ ಸಂಪರ್ಕ ಜಾಲವನ್ನು ನಿಗದಿ ಮಾಡುವ ಉದ್ದೇಶದಿಂದ ಜಿಐಎಸ್ ಬೇಸ್ಡ ರೋಡ್ ನೆಟ್ವರ್ಕ್ ಗ್ರಿಡ್ ಪ್ಲಾನ್ (ಜಿಐಎಸ್ ಆಧಾರಿತ ರಸ್ತೆ ಜಾಲ ಯೋಜನೆ) ಸಿದ್ಧ ಮಾಡಲಾಗಿದೆ. ನಗರ ಹಾಗೂ ಗ್ರಾಮೀಣ ಯೋಜನಾ ಕಾಯ್ದೆ 1961 ರ ಅನ್ವಯ ರಾಜ್ಯದ 172 ತಾಲೂಕುಗಳಲ್ಲಿ ರಾಜ್ಯ ಸಚಿವ ಸಂಪುಟ ಅನುಮೋದನೆ ಪಡೆದು, ಸೆಪ್ಟೆಂಬರ್ 9 ರಂದು ಇದಕ್ಕೆ ನಗರಾಭಿವೃದ್ಧಿ ಇಲಾಖೆಯಿಂದ ಒಂದೇ ಬಾರಿಗೆ ಅಽಸೂಚನೆ ಹೊರಡಿಸಲಾಗಿದೆ.
ರಸ್ತೆ ಜಾಲದ ಯೋಜನೆಯನ್ನು ಆಯಾ ಶಹರಗಳ ಮಹಾ ಯೋಜನೆ (ಮಾಸ್ಟರ್ ಪ್ಲಾನ್)ನಲ್ಲಿ ಸೇರಿಸಿಕೊಂಡು ಜಾರಿಗೆ ತರಲು ಕ್ರಮ ವಹಿಸಬೇಕು ಎಂದು ಸೂಚಿಸಲಾಗಿದೆ. ಈಗ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರ ಶಿರಸಿ ಯೋಜನಾ ಪ್ರಾಧಿಕಾರ ಹಾಗೂ ಉಳಿದ ಪುರಸಭೆ, ಪಟ್ಟಣ ಪಂಚಾಯಿತಿಗಳಿಂದ ಈ ಬಗ್ಗೆ ಪ್ರಕಟಣೆ ನೀಡಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತಿದೆ. ರೋಡ್ ನೆಟ್ವರ್ಕ್ ನಕ್ಷೆಯನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರಿಸಲಾಗಿದೆ.
ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯನ್ನು ಗುರುತಿಸಿದ್ದು, ಅದರಿಂದ ಹೊರಗೆ 2 ಕಿಮೀ ವ್ಯಾಪ್ತಿಯನ್ನು ಇಂಫ್ಯಾಕ್ಟ್ ಜೋನ್ ಎಂದು ಗುರುತಿಸಲಾಗಿದೆ. ಆ ಇಂಪ್ಯಾಕ್ಟ್ ಜೋನ್‌ನಲ್ಲಿ ಯಾವ ಕಟ್ಟಡ ಅಥವಾ ಕೈಗಾರಿಕೆಗೆ ಅನುಮೋದನೆ ನೀಡಬಹುದು ಎಂಬುದನ್ನು ಪಟ್ಟಿ ಮಾಡಲಾಗಿದೆ. ಅಲ್ಲದೇ ನಗರಗಳಲ್ಲಿ 30 ಮೀಟರ್ ಅಗಲದ ರಸ್ತೆಗಳು, 24 ಮೀಟರ್ ಅಗಲದ ರಸ್ತೆಗಳು ಹಾಗೂ 18 ಮೀಟರ್ ಅಗಲದ ರಸ್ತೆಗಳನ್ನು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನೂ ಈ ವ್ಯಾಪ್ತಿಯಲ್ಲಿಯೇ ಸೇರಿಸಲಾಗಿದೆ.
ಜಿಲ್ಲೆಯ ಕರಾವಳಿಯ ಪಟ್ಟಣಗಳಲ್ಲಿ ಜಾಗದ ಕೊರತೆ ಇದೆ. ರಸ್ತೆಗಳನ್ನು ವಿಸ್ತರಿಸಲು ಜಾಗವಿಲ್ಲ. ಆದರೆ, ಜಾಲಿ, ಮಂಕಿ ಮುಂತಾದ ಸಣ್ಣ ಪಟ್ಟಣಗಳಲ್ಲೂ 30 ಮೀಟರ್ ರಸ್ತೆ, 24 ಮೀಟರ್ ರಸ್ತೆಗಳನ್ನು ಗುರುತಿಸಲಾಗಿದೆ. ರಸ್ತೆಗಳು ವ್ಯಾಪ್ತಿಯ ಒಮ್ಮೆ ಅಽಸೂಚನೆಯಾದರೆ, ಅಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ನವೀಕರಣಕ್ಕೂ ಅನುಮೋದನೆ ದೊರೆಯುವುದಿಲ್ಲ. ಇದರಿಂದ ಈ ನಕ್ಷೆಗೆ ಕರಾವಳಿ ಭಾಗದಲ್ಲಿ ಸಾಕಷ್ಟು ಆಕ್ಷೇಪಣೆ ವ್ಯಕ್ತವಾಗುತ್ತಿದೆ.
............
ನಗರಾಭಿವೃದ್ಧಿ ಇಲಾಖೆಯಿಂದಲೇ ನಕ್ಷೆಯನ್ನು ಸಿದ್ಧ ಮಾಡಿ ಕಳಿಸಲಾಗಿದೆ. ಕರಾವಳಿ ವ್ಯಾಪ್ತಿಯ ನಗರಗಳಲ್ಲಿ ರಿಂಗ್ ರೋಡ್ ನೆಟ್ವರ್ಕ್ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, 60 ದಿನಗಳವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ನಂತರ ಇಲಾಖೆಗೆ ಕಳಿಸಿ, ನಕ್ಷೆಯನ್ನು ಅಂತಿಮ ಮಾಡಲಾಗುವುದು.
ನೌಫಾಲ್ ಅಹಮದ್ ಕಾರವಾರ ನಗರ,ಗ್ರಾಮೀಣ ಯೋಜನಾ ಪ್ರಾಧಿಕಾರದ ಉಪ ನಿರ್ದೇಶಕ