ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ (Highway) ಅಧಿಕಾರಿಗಳ ಸಭೆ ನಡೆಯಿತು. ಸಾಜಿದ್ ಮುಲ್ಲಾ, ಜೆ. ಮಹೇಶ, ನಾಗೇಂದ್ರ ಕೊಳಶೆಟ್ಟಿ, ಶ್ರೀನಿವಾಸ, ಸುದೇಶ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಉಪವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚನೆ
ಹೆದ್ದಾರಿ ವಿಸ್ತರಣೆ ಕಾಮಗಾರಿ ಮಾಹಿತಿ ಸಭೆ
ಸಮಸ್ಯೆ ಬಗೆಹರಿಸಿ ಕ್ಷಿಪ್ರ ಕಾಮಗಾರಿಗೆ ಸೂಚನೆ
ಭಟ್ಕಳ: ಹೆದ್ದಾರಿ (Highway) ಸಮಸ್ಯೆ ಕುರಿತಂತೆ ಗುರುವಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಲಾಯಿತು.
ಆರಂಭದಲ್ಲಿ ಭೂ ಸ್ವಾಧೀನದ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ ಜಿಲ್ಲಾಧಿಕಾರಿ, ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಭೂಸ್ವಾಧೀನ ಅಡ್ಡಿಯಾದರೆ ಕೂಡಲೆ ಇತ್ಯರ್ಥಪಡಿಸುವಂತೆ ಉಪವಿಭಾಗಾಧಿಕಾರಿ ಜೆ. ಮಹೇಶ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಐಆರ್‌ಬಿ ಅಧಿಕಾರಿಗಳು ಕೊಟೇಶ್ವರ ಕ್ರಾಸ್ ಬಳಿ ಪೌರಕಾರ್ಮಿಕ ಕಾಲೋನಿಯವರು ಪರಿಹಾರ ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಜಾಗ ಬಿಟ್ಟುಕೊಟ್ಟಿಲ್ಲ.
ಇದರಿಂದಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಗರಸಭೆ ಪೌರಾಯುಕ್ತ ಬಾಬಾ ಸಾಹೇಬ ಮಾನೆ ಅವರಿಗೆ ಸೂಚನೆ ನೀಡಿ, ಜಾಗ ಖುಲ್ಲಾ ಪಡಿಸುವಂತೆ ಸೂಚಿಸಿದರು.
ರಸ್ತೆ ಕಾಮಗಾರಿಯ ಪ್ರಗತಿ ಹಾಗೂ ನೀರು ಹರಿಯುವ ಚರಂಡಿಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಹೆದ್ದಾರಿಯಲ್ಲಿ ನಿಂತ ನೀರು ಯಾವ ನದಿ ಸೇರಲಿದೆ ಎಂದು ಪ್ರಶ್ನಿಸಿದರು.
ರಸ್ತೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಸಂಚಾರಕ್ಕೆ ಅಡಚಣೆಯಾಗದಂತೆ, ಅಪಘಾತಗಳು ಸಂಭವಿಸದಂತೆ ಅಲ್ಲಲ್ಲಿ ಸೂಚನಾ ಫಲಕವನು ಅಳವಡಿಸಿ ಸೂಕ್ತ ಮಾಹಿತಿ ನೀಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಪುರಸಭೆಯವರು ಐಆರ್‌ಬಿಯಿಂದ ಹೆದ್ದಾರಿ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗುತ್ತಿದೆ.
ಅದರೆ, ಅದರ ಹೊರ ಹರಿವಿನ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ಪಟ್ಟಣದ ಶಂಶುದ್ದೀನ್ ಸರ್ಕಲ್ ಬಳಿಯಿಂದ ಬಂದರು ರಸ್ತೆ ತನಕ ಬೃಹದಾಕರಾದ ಚರಂಡಿ ನಿರ್ಮಿಸಿ ಡಾರಂಟಾ ಬಳಿ ಕಲ್ವರ್ಟ್ ಮೂಲಕ ಶರಾಬಿ ನದಿಗೆ ನೀರು ಹರಿದು ಹೋಗುವಂತೆ ಮಾಡಲು ಅವಕಾಶ ಇದೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಪುರಸಭೆಯಿಂದ ನೀಲಿನಕ್ಷೆ ರೂಪಿಸುವಂತೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಭಟ್ಕಳ ಉಪವಿಭಾಗಾಧಿಕಾರಿ ಜೆ. ಮಹೇಶ, ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ, ಹೆದ್ದಾರಿ ಯೋಜನಾಧಿಕಾರಿ ಶ್ರೀನಿವಾಸ, ಐಆರ್‌ಬಿ ಇಂಜಿನೀಯರ್ ಸುದೇಶ, ಪುರಸಭೆ ಇಂಜಿನೀಯರ್ ಅರವಿಂದ್, ವೆಂಕಟೇಶ ನಾವುಡ ಇತರರು ಉಪಸ್ಥಿತರಿದ್ದರು.