ಸಿದ್ದಾಪುರ:ಧರ್ಮವು (religion) ಜೀವನದ ಎಲ್ಲ ಕ್ಷೇತ್ರದಲ್ಲಿಯೂ ಸಮೃದ್ಧಿಯ ಮಾರ್ಗದರ್ಶನ ನೀಡುತ್ತದೆ. ಇಂದಿನ ಮಕ್ಕಳಿಗೆ ಕೇವಲ ಶಿಕ್ಷಣ ಮಾತ್ರ ಸಾಲದು ಶಿಕ್ಷಣದ ಜತೆಗೆ ಧಾರ್ಮಿಕ ಸಂಸ್ಕಾರ ನೀಡಬೇಕು.
ಮುಂದಿನ ಪೀಳಿಗೆಯವರು ಹಿಂದೂ ಧರ್ಮವನ್ನು ಸಂರಕ್ಷಿಸುವಂತವರಾಗಬೇಕು ಎಂದು ಶ್ರೀಮನ್ನೆಲೆಮಾವುಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಹೇರೂರಿನ ಸಿದ್ಧಿವಿನಾಯಕ ದೇವಸ್ಥಾನದ ರಥಬೀದಿಯಲ್ಲಿ ಹಿಂದು ಸಮ್ಮೇಳನ ಸಂಚಾಲನಾ ಸಮಿತಿ ಹೇರೂರು ಹಾಗೂ ಹಿಂದು ಜಾಗರಣಾ ವೇದಿಕೆ ಹೇರೂರು ಅವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹಿಂದು ಸಮ್ಮೇಳನದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಹಿಂದು ಧರ್ಮದ ತತ್ವಗಳನ್ನು ಅನುಸರಿಸುವ ಮೂಲಕ ವ್ಯಕ್ತಿಯು ಆತ್ಮ, ಮೋಕ್ಷ ಮತ್ತು ಧರ್ಮದ ಮಾರ್ಗವನ್ನು ಅರಿತುಕೊಳ್ಳಬೇಕು.
ಹಿಂದು ಧರ್ಮವು ಕರ್ಮ, ಧರ್ಮ, ಧ್ಯಾನ, ಮತ್ತು ಮೋಕ್ಷದಂತಹ ಅನೇಕ ಧಾರ್ಮಕ ತತ್ವಗಳು ಮತ್ತು ಆಚರಣೆಗಳನ್ನು ಹೊಂದಿದೆ.
ಈ ಧರ್ಮವು ವ್ಯಕ್ತಿಯ ಆಧ್ಯಾತ್ಮಿಕ ಮತ್ತು ಭೌತಿಕ ಜೀವನದಲ್ಲಿ ದೈವಗಳ ಆರಾಧನೆಯ ಮೂಲಕ ಮಾರ್ಗದರ್ಶನ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಪರ್ಯಾವರಣ ಗತಿ ವಿಧಿಯ ಪ್ರಾಂತ ಸಂಯೋಜಕ ಜಯರಾಮ್ ಬೊಳ್ಳಾಜೆ ಮಾತನಾಡಿ ರಾಷ್ಟ್ರೀಯ ಸವಯಂ ಸೇವಕ ಸಂಘ ಸ್ಥಾಪನೆಗೊಂಡು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶದಾದ್ಯಂತ ಒಂದು ಲಕ್ಷ ಹಿಂದು ಸಮ್ಮೇಳನ ಕೈಗೊಳ್ಳಲು ನಿರ್ಧರಿಸಿದ್ದು ಅದರಂತೆ ಪ್ರತಿ ಮಂಡಲದಲ್ಲಿ ಹಿಂದೂ ಸಮ್ಮೇಳನ ನಡೆಸಲಾಗುತ್ತಿದೆ.
ಇದರ ಉದ್ದೇಶ ಕೇವಲ ಸಮ್ಮೇಳನ ಮಾಡುವುದಲ್ಲ. ಪ್ರತಿ ಹಿಂದು ಮನೆಗಳಿಗೆ ಹಿಂದುತ್ವ ಉಳಿಸುವ ಹಾಗೂ ಬೆಳೆಸುವ ಮನಸ್ಥಿತಿ ಬರುವಂತೆ ಮಾಡುವುದಾಗಿದೆ.
ಇಂದು ಪಾಶ್ಚಾತ್ಯ ರಾಷ್ಟ್ರಗಳು ಹಿಂದು ಧರ್ಮಕ್ಕೆ ಮನಸೋತು ಇಲ್ಲಿಯ ಧಾರ್ಮಿಕ ಆಚರಣೆ, ವಿಚಾರಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗುತ್ತಿರುವುದನ್ನು ಕಾಣುತಿದ್ದೇವೆ.
ಆದರೆ ನಮ್ಮವರು ಮಾತ್ರ ಪಾಶ್ಚಾತ್ಯ ಸಂಸ್ಕೃತಿಯನ್ನು ಬೆನ್ನು ಹತ್ತಿ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಕೇವಲ ನಮ್ಮ ಮಕ್ಕಳಷ್ಟೆ ಅಲ್ಲ. ಹಿರಿಯರಾದ ನಾವು ಸಹ ಕಾರಣರಾಗಿದ್ದೇವೆ.
ಹಿರಿಯರಿಗೆ, ನಮಸಕರಿಸುವ, ಗೌರವಿಸುವ ಸಂಸ್ಕಾರ ಕಣ್ಮರೆಯಾಗುತ್ತಿದೆ. ನಿತ್ಯ ಮನೆಯಲ್ಲಿ ಭಜನೆ ಮಾಡುವ ಪದ್ಧತಿ ಮಾಯವಾಗಿದೆ.
ಹಬ್ಬ ಹರಿದಿನಗಳ ಆಚರಣೆಯಿಂದ ದೂರವಾಗುತ್ತಿದ್ದೇವೆ. ಇವೆಲ್ಲವೂ ಮುಂದೆ ಹಿಂದು ಧರ್ಮಕ್ಕೆ ಅಪಾಯದ ಸಂಕೇತವಾಗಿದೆ.
ಈಗಲೇ ಎಚ್ಚೆತ್ತುಕೊಂಡು ನಮ್ಮ ಧರ್ಮ ಪದ್ಧತಿಯನ್ನು ಅನುಸರಿಸಿಕೊಂಡು ನಮ್ಮ ಮಕ್ಕಳಿಗೆ ಧರ್ಮದ ನೀತಿಯನ್ನು ಹೇಳಿಕೊಡುವುದರ ಮೂಲಕ ಹಿಂದು ಧರ್ಮವನ್ನು ರಕ್ಷಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಪೂರ್ವದಲ್ಲಿ ಸಿದ್ಧಿವಿನಾಯಕ ದೇವಾಲಯದಿಂದ ಹೇರೂರು-ಶಿರಸಿ ರಸ್ತೆಯ ಮೂಲಕ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾರ್ಗವಾಗಿ ವಿನಾಯಕ ದೇವಸ್ಥಾನದಲ್ಲಿ ಭವ್ಯ ಮೆರವಣಿಗೆ ಸಂಪನ್ನಗೊಂಡಿತು.