ನಗರದ ಜನಶಕ್ತಿ ವೇದಿಕೆಯಿಂದ ನಾಗರ ಪಂಚಮಿಯನ್ನು ಸೋಮವಾರ ವಿಶಿಷ್ಟವಾಗಿ ಆಚರಿಸಲಾಯಿತು. ಆಶಾನಿಕೇತನ ಶಾಲೆಯ ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡಲಾಯಿತು. ಹಾಗೂ ನಿಜ ನಾಗರ ಹಾವನ್ನು ಮಕ್ಕಳಿಗೆ ಪ್ರದರ್ಶನ ಮಾಡಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ.ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪ್ರತಿ ಯಕ್ತಿಯು ಧಾರ್ಮಿಕ ಆಚರಣೆಗಳಿಗೆ ಗೌರವ ನೀಡುವ ಜೊತೆಗೆ ಮೂಢ ನಂಬಿಕೆಗಳನ್ನು ಬಿಟ್ಟು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.
ಸೇಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಮಾತನಾಡಿ, ಜನಶಕ್ತಿ ವೇದಿಕೆಯಿಂದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಉತ್ತಮ ಸಂದೇಶವನ್ನು ಜನರಿಗೆ ನೀಡಲಾಗುತ್ತಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಕಾರವಾರ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಜನಪರ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸಮಾಜಕ್ಕೆ ಅಗತ್ಯವಾಗಿವೆ ಎಂದರು.
ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾದವ ನಾಯ್ಕ ಮಾತನಾಡಿ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಂದ ಪ್ರೇರೇಪಿತನಾಗಿ ಕಳೆದ 1 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ವೇದಿಕೆಯ ಕಾರ್ಯದಕ್ಷ ನಿತ್ಯಾನಂದ ನಾಯ್ಕ, ಪದಾಽಕಾರಿಗಳಾದ ರಾಜೇಶ್ ಬಾಡ್ಕರ್, ರತ್ನಾಕರ್ ಬಾಡ್ಕರ್, ರಮೇಶ್ ಗುನುಗಿ, ಸುರಜ್ ಕುರುಕರ್, ರಾಜೀವ್ ನಾಯ್ಕ, ಶ್ರೀಕಾಂತ್ ನಾಯ್ಕ, ವಸಂತ್ ಬಾಂಧೇಕರ್ ಇತರರು ಉಪಸ್ಥಿತರಿದ್ದರು.
ನಿಜ ನಾಗರ ಪ್ರದರ್ಶನ
ಉರಗ ತಜ್ಞ ಮಹೇಶ ಬಿ.ನಾಯಕ ಅವರು ಹಿಡಿದು ತಂದ ನಾಗರ ಹಾವುಗಳನ್ನು ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರದರ್ಶಿಸಲಾಯಿತು. ಮಕ್ಕಳಲ್ಲಿ ಹಾವುಗಳ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವುದರ ಜೊತೆಗೆ ಹಾವುಗಳ ಕುರಿತು ಅಗತ್ಯವಾದ ಜ್ಞಾನ ಮತ್ತು ಅರಿವನ್ನು ಮೂಡಿಸಿದರು. ಹಾವುಗಳ ಬಗ್ಗೆ ವೈಜ್ಞಾನಿಕ ತಿಳುವಳಿಕೆ ಹೊಂದಬೇಕು ಹಾಗೂ ಅವುಗಳ ಜೀವವನ್ನು ಸಂರಕ್ಷಿಸಬೇಕು ಎಂಬ ಸಂದೇಶವನ್ನು ನೀಡಿದರು.