ಮಂಗನ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಿ

ಸಿದ್ದಾಪುರದ ತಹಸೀಲ್ದಾರ್ ಕಚೇರಿಯಲ್ಲಿ ಏರ್ಪಡಿಸಿದ್ದ ಮಂಗನ ಕಾಯಿಲೆ ಕುರಿತ ಸಭೆಯಲ್ಲಿ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಮಹ್ಮದ್ ಯಾಕೂಬ್ ಶೇಖ್ ಇದ್ದರು.
ಸಿದ್ದಾಪುರದ ತಹಸೀಲ್ದಾರ್ ಕಚೇರಿಯಲ್ಲಿ ಏರ್ಪಡಿಸಿದ್ದ ಮಂಗನ ಕಾಯಿಲೆ ಕುರಿತ ಸಭೆಯಲ್ಲಿ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿದರು. ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಮಹ್ಮದ್ ಯಾಕೂಬ್ ಶೇಖ್ ಇದ್ದರು.
Published on
ಸಿದ್ದಾಪುರ: ಕಳೆದ ಕೆಲವು ವರ್ಷಗಳಿಂದ ಮಂಗನಕಾಯಿಲೆ ತಾಲೂಕಿನಲ್ಲಿ ಕಾಣಿಸುತ್ತಿದ್ದು, ಕಳೆದ ವರ್ಷ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಆದ್ದರಿಂದ ನಾವು ಈಗಿನಿಂದಲೇ ಎಚ್ಚರ ವಹಿಸಬೇಕಾಗಿದೆ. ಮಂಗನಕಾಯಿಲೆ ನಿಯಂತ್ರಣಕ್ಕೆ ಎಲ್ಲ ಇಲಾಖೆಯವರು ಸಹಕರಿಸಬೇಕು ಎಂದು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗನಕಾಯಿಲೆ ಕುರಿತು ಬುಧವಾರ ಆಯೋಜಿಸಿದ್ದ ತಾಲೂಕಿನ ಎಲ್ಲ ಇಲಾಖೆಗಳ ಮುಖ್ಯಸ್ಥರ ಮುಂಜಾಗ್ರತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜನರು ಅರಣ್ಯಕ್ಕೆ ಹೋಗುವುದು, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಹಜ. ಅದನ್ನು ತಡೆಯಲು ಬರುವುದಿಲ್ಲ. ಆದರೆ ಜಾಗೃತಿ ಮೂಡಿಸಬೇಕಾಗಿದೆ. ಕರಪತ್ರವನ್ನು ಹಂಚುವುದು, ಜಾಥಾ ನಡೆಸುವುದು, ಮನೆಗಳಿಗೆ ಭೇಟಿ ನೀಡಿ ಮಾಹಿತಿ ನೀಡುವುದು ಹಾಗೂ ಗ್ರಾಪಂ ಮಟ್ಟದಲ್ಲಿ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಬೇಕು. ಶಿಕ್ಷಣ ಇಲಾಖೆ ಹಾಗೂ ಅಂಗನವಾಡಿಯವರು ಪಾಲಕರ ಸಭೆ ನಡೆಸಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಮಾತನಾಡಿ, ಮಂಗನಕಾಯಿಲೆ ಮನುಷ್ಯನಿಂದ ಮನುಷ್ಯನಿಗೆ ಹರುಡುವುದಿಲ್ಲ. ಇದು ಉಣ್ಣೆಯಿಂದ ಹರಡುವ ಕಾಯಿಲೆ. 2019ರಿಂದ ಈ ಕಾಯಿಲೆ ಸತತವಾಗಿ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ತಾಲೂಕು ಮಟ್ಟದ, ಗ್ರಾಪಂ ಮಟ್ಟದ, ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದ ಸಮಿತಿಗಳಿರುತ್ತವೆ. ಮಂಗ ಸತ್ತಿದ್ದು ಕಂಡು ಬಂದರೆ ಸಮಿತಿಗಳ ಗಮನಕ್ಕೆ ತರಬೇಕು. ಮಂಗಸತ್ತಿರುವ 50ಮೀ. ವ್ಯಾಪ್ತಿಯಲ್ಲಿ ಡೆಲ್ಟಾ ಮೆಥ್ರಿನ್ ಸಿಂಪಡಿಸಬೇಕು. ಪಶುಸಂಗೋಪನಾ ಇಲಾಖೆಯವರು ಈ ಔಷಧವನ್ನು ಪ್ರತಿ ಗ್ರಾಪಂಗೂ ನೀಡಬೇಕು. ಜನರಿಗೆ ಹಂಚಿಕೆ ಮಾಡಲು 36,400 ಡೆಫಾ ತೈಲದ ದಾಸ್ತಾನು ಇದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ದಾಸ್ತಾನು ಇದೆ. 2176 ಮನೆಗಳಿಗೆ ತೈಲ ಹಂಚಲಾಗಿದೆ. ತಾಲೂಕಿನಲ್ಲಿ ಶಂಕಿತರ 74 ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಮಂಗನ ಕಾಯಿಲೆ ವಾರ್ಡ್ ಮಾಡಲಾಗಿದೆ ಎಂದು ಹೇಳಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕಾನಂದ ಹೆಗಡೆ, ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕಿರಣ, ಬಿಳಗಿ ಪ್ರಾ.ಆರೋಗ್ಯ ಕೇಂದ್ರದ ಡಾ.ಕುಸುಮಾ, ಕ್ಯಾದಗಿ ಪ್ರಾ.ಆರೋಗ್ಯ ಕೇಂದ್ರದ ಡಾ.ವೀರೇಂದ್ರ, ಕೊರ್ಲಕೈ ಪ್ರಾ. ಆರೋಗ್ಯ ಕೇಂದ್ರದ ಡಾ.ಕಿರಣಕುಮಾರ, ಪಪಂ ಮುಖ್ಯಾಧಿಕಾರಿ ಮಹ್ಮದ್ ಯಾಕೂಬ್ ಶೇಖ್, ಶಿಕ್ಷಣ ಇಲಾಖೆಯ ಎಂ.ಐ. ನಾಯ್ಕ, ಸಿಡಿಪಿಒ ಪೂರ್ಣಿಮಾ ದೊಡ್ಮನಿ, ಆರೋಗ್ಯ ಇಲಾಖೆಯ ಅರಣುಕುಮಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net