ಶಿರಸಿ: ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದವರಿಗೂ ಪಂಚಾಯಿತಿ ನೀಡುವ ವಾಸ್ತವ್ಯ ದೃಢೀಕರಣದ ಆಧಾರದಲ್ಲಿ ವಿದ್ಯುತ್ ಸಂಪರ್ಕ (electricity) ನೀಡಬೇಕು.
ಹೊಸ ಸಂಪರ್ಕಕ್ಕೆ ಹೆಸ್ಕಾಂ ಇಲ್ಲ ಸಲ್ಲದ ಕಾನೂನುಗಳನ್ನು ಹೇಳುತ್ತ ನಡೆದರೆ ಶೇ. 80ರಷ್ಟು ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸೌಲಭ್ಯಗಳನ್ನು ನೀಡಲು ಕಷ್ಟವಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಇಲ್ಲಿಯ ನಗರಸಭಾ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ಯಶಸ್ವಿಯಾಗಿ ತಲುಪುವಂತೆ ಮಾಡಲು ಅಧಿಕಾರಿಗಳು ಮತ್ತು ಗ್ಯಾರಂಟಿ ಸಮಿತಿಯ ಪದಾಧಿಕಾರಿಗಳು ಸಮನ್ವಯತೆಯಿಂದ ಶ್ರಮಿಸಬೇಕು.
ಗ್ಯಾರಂಟಿ ಯೋಜನೆ ಸಮಿತಿ ಪದಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಎದುರಾಗುವ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಶ್ರಮಿಸಿ ಯಾವುದೇ ಒಬ್ಬ ಅರ್ಹ ಲಾನುಭವಿಯೂ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ಯುವ ಜನತೆ ಉದ್ಯೋಗ ಸಿಗದೇ ಪರದಾಡುತ್ತಿರುವುದನ್ನು ಕಂಡ ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯನ್ನು ಘೋಷಿಸಿದೆ.
ಇದರ ಪ್ರಯೋಜನವನ್ನು ಯುವಜನತೆ ಪಡೆದುಕೊಳ್ಳುತ್ತಿದ್ದಾರೆ. ರೇಶನ್ ಕಾರ್ಡ್ ನೀಡುವ ಪ್ರಕ್ರಿಯೆ ಶೀಘ್ರ ಆರಂಭಗೊಳ್ಳುವ ನಿರೀಕ್ಷೆ ಇದೆ.
ಎಸ್‌ಐಆರ್ ಪ್ರಕ್ರಿಯೆ ಈಗ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಶೇ. 80ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ. ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಮಾತನಾಡಿ, ಗೃಹ ಜ್ಯೋತಿ ಪರಿಶೀಲನಾ ಪ್ರಕ್ರಿಯೆ ಜಿಲ್ಲೆಯಲ್ಲಿ ಶೇ. 45ರಷ್ಟು ಪೂರ್ಣಗೊಂಡಿದೆ.
1.77 ಲಕ್ಷ ಸಂಪರ್ಕಗಳ ಪರಿಶೀಲನೆ ಆಗಿದೆ. ಹೆಸ್ಕಾಂ ಅಧಿಕಾರಿಗಳು ಒಮ್ಮೆಲೇ ಗೃಹಜ್ಯೋತಿ ಬಳಕೆದಾರರ ಮನೆಗಳಿಗೆ ಪರಿಶೀಲನೆಗೆ ತೆರಳುವ ಮುನ್ನ ಗ್ಯಾರಂಟಿ ಪ್ರಾಧಿಕಾರದ ಸದಸ್ಯರೊಂದಿಗೆ ಸಂಪರ್ಕ ಸಾಧಿಸಿದರೆ ಅವರು ಆಯಾ ಗ್ರಾಮಗಳಲ್ಲಿ ಲಾನುಭವಿಗಳಿಗೆ ಮುಂಚಿತವಾಗಿ ತಿಳಿಸುವುದರಿಂದ ಈ ಪ್ರಕ್ರಿಯೆಯಲ್ಲಿ ಶ್ರಮ ಕಡಿಮೆ ಆಗಲಿದೆ ಎಂದರು.
ಶಿರಸಿ ಸೇರಿದಂತೆ ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಶೌಚಗೃಹದಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ ಎಂಬ ಆಕ್ಷೇಪಣೆ ಕೇಳಿಬರುತ್ತಿದೆ.
ಸಾರಿಗೆ ಸಂಸ್ಥೆ ಸಿಬ್ಬಂದಿ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಕೆಲವೆಡೆ ಅಳವಡಿಸಲಾಗಿರುವ ದರಪಟ್ಟಿಯನ್ನೂ ಸಹ ಅಳಿಸಿಹಾಕಲಾಗಿದೆ.
ಇಂತಹ ಘಟನೆ ನಡೆಯಬಾರದು ಎಂದು ಎಚ್ಚರಿಸಿದ ಸತೀಶ ನಾಯ್ಕ, ತಕ್ಷಣವೇ ಪ್ರಾಧಿಕಾರದ ತಾಲೂಕು ಅಧ್ಯಕ್ಷರನ್ನು ಒಳಗೊಂಡ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ತಾಲೂಕಾ ಅಧ್ಯಕ್ಷೆ ಸುಮಾ ರಾಜು ಉಗ್ರಾಣಕರ್, ನಾಗರಾಜ ಮುರ್ಡೇಶ್ವರ, ಇಒ ಚೆನ್ನಬಸಪ್ಪ ಹಾವಣಗಿ, ಪೌರಾಯುಕ್ತ ಪ್ರಕಾಶ, ಪ್ರಾಧಿಕಾರದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.