ಕಾರವಾರ: ಕೈಗಾ ರಸ್ತೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಬಿಜೆಪಿ ಗ್ರಾಮೀಣ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಕಾರ್ಯಕರ್ತರು ರಸ್ತೆಯ ಹೊಂಡದಲ್ಲಿ ಅಡಕೆ, ಬಾಳೆ ಗಿಡಗಳನ್ನು ಹೊಂಡದಲ್ಲಿ ನೆಟ್ಟು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿವೆ. ರಸ್ತೆ ರಿಪೇರಿ ಮಾಡುತ್ತಿಲ್ಲ. ಕಾರವಾರ ಶಿರವಾಡದಿಂದ ಮಲ್ಲಾಪುರವರೆಗೆ ಕೈಗಾ ರಸ್ತೆಯಲ್ಲಿ ಭಾರಿ ಹೊಂಡಗಳು ಬಿದ್ದಿವೆ. ವಾಹನಗಳು ಪ್ರತಿದಿನ ರಸ್ತೆಯಲ್ಲಿ ಪಲ್ಟಿಯಾಗುತ್ತಿವೆ. ಅಪಘಾತಗಳು ಸಂಭವಿಸುತ್ತಿವೆ. ಆದರೆ, ಇದುವರೆಗೂ ಅದನ್ನು ರಿಪೇರಿ ಮಾಡುವ ಗೋಜಿಗೆ ಸರ್ಕಾರ ಮುಂದಾಗಿಲ್ಲ. ಜನ ಪ್ರತಿದಿನ ಹಿಡಿಶಾಪ ಹಾಕುವಂತಾಗಿದೆ ಎಂದು ಆರೋಪಿಸಿದರು. ಶೀಘ್ರದಲ್ಲಿ ಕಾರವಾರ ಕೈಗಾ ರಸ್ತೆಯನ್ನು ಪಿಡಬ್ಲುಡಿ ರಿಪೇರಿ ಮಾಡಬೇಕು. ಇಲ್ಲದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ, ಪದಾಽಕಾರಿಗಳಾದ ಬಾಬು ನಾಯ್ಕ, ರಾಮಚಂದ್ರ ನಾಯ್ಕ, ದೀಪಾ ನಾಯ್ಕ, ಸಂತೋಷ ಗೌಡ, ವಿಕೇಶ ಬಾಂದೇಕರ್, ಮಾನಸಪ್ಪ ಗಂಟಿ ಇತರರು ಇದ್ದರು.
ಜೋಡೆತ್ತುಗಳಿಗೆ ಧಿಕ್ಕಾರ:
ಪ್ರತಿಭಟನೆಯಲ್ಲಿ ಜೋಡೆತ್ತುಗಳಿಗೆ ಧಿಕ್ಕಾರ ಕೂಗಲಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಆನಂದ ಅಸ್ನೋಟಿಕರ್ ಕಾಂಗ್ರೆಸ್‌ನ ಸತೀಶ ಸೈಲ್ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ಆಗ ಅವರು ನಾವಿಬ್ಬರೂ (ಸೈಲ್ ಆನಂದ್) ಜೋಡೆತ್ತುಗಳು ಎಂದು ಆನಂದ್ ಬಣ್ಣಿಸಿದ್ದರು. `ಸೈಲ್ ಅವರಿಗೆ ಮತ ಹಾಕಿ, ನಾನು ಅವರಿಂದ ಅಭಿವೃದ್ಧಿ ಕಾರ್ಯ ಮಾಡಿಸುತ್ತೇನೆ' ಎಂದು ಆನಂದ್ ಜನರಲ್ಲಿ ಭರವಸೆ ನೀಡಿದ್ದರು. ಈಗ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ. ರಸ್ತೆ ರಿಪೇರಿ ಮಾಡುವವರಿಲ್ಲ. ಅವರಿಗೆ ಬೆಂಬಲ ನೀಡಿದ್ದ ಇನ್ನೊಬ್ಬ ನಾಯಕರೂ ಪತ್ತೆ ಇಲ್ಲ ಎಂಬ ಅರ್ಥದಲ್ಲಿ ಬಿಜೆಪಿಗರು ಘೋಷಣೆ ಕೂಗಿದರು.