ಮುರಾರ್ಜಿಯಲ್ಲಿ ಸಿಗುತ್ತಿಲ್ಲ ಸಮರ್ಪಕ ಶಿಕ್ಷಣ Murarji School

ಮುಂಡಗೋಡ ಕರಗಿನಕೊಪ್ಪ (Murarji School)  ಮುರಾರ್ಜಿ ದೇಸಾಯಿ ವಸತಿ ಕಾಲೇಜ್.
ಮುಂಡಗೋಡ ಕರಗಿನಕೊಪ್ಪ (Murarji School) ಮುರಾರ್ಜಿ ದೇಸಾಯಿ ವಸತಿ ಕಾಲೇಜ್.
Published on

ಪ್ರಮುಖ ಮುಖ್ಯಾಂಶಗಳು

  • ಬೇರೆ ಕಾಲೇಜ್ ಅರಸಿ ಹೊರಟ 25 ವಿದ್ಯಾರ್ಥಿಗಳು
  • ಮೂಲ ಸೌಕರ್ಯ ಒದಗಿಸಲು ಆಗ್ರಹ
  • ಕರಗಿನಕೊಪ್ಪ ಗ್ರಾಮದ ವಸತಿ ಶಾಲೆ
ಮುಂಡಗೋಡ: ಜಿಲ್ಲೆಯಲ್ಲಿ ಮುರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ (Murarji School) ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ ಹಾಗೂ ವಸತಿ ಸೌಲಭ್ಯ ಸರಿಯಾಗಿಲ್ಲ ಎಂದು ಪ್ರಥಮ ಹಾಗೂ ದ್ವಿತೀಯ ಪಿಯುಸಿ 25 ವಿದ್ಯಾರ್ಥಿಗಳು ತಮ್ಮ ಟಿಸಿ ಪಡೆದುಕೊಂಡು ಬೇರೆ ಕಾಲೇಜಿಗೆ ದಾಖಲಾದ ಘಟನೆ ಜರುಗಿದೆ.
ತಾಲೂಕಿನ ಸಾಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಗಿನಕೊಪ್ಪ ಗ್ರಾಮದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಿದೆ.
ಇಲ್ಲಿ 6ರಿಂದ 12ರವರೆಗೆ ಶಿಕ್ಷಣ ನೀಡಲಾಗುತ್ತಿದೆ. ಈ ಕಾಲೇಜಿಗೆ ಪ್ರವೇಶ ಪಡೆಯಲು ಪ್ರತಿ ವರ್ಷ ವಿದ್ಯಾರ್ಥಿಗಳು ಪೈಪೋಟಿ ನಡೆಸುತ್ತಿದ್ದರು.
ಅದೆಷ್ಟು ಮಕ್ಕಳು ತಮಗೆ ಈ ಕಾಲೇಜಿನಲ್ಲಿ ಸೀಟ್ ಸಿಗಲಿಲ್ಲ ಎಂದು ಬೇಸರವನ್ನು ವ್ಯಕ್ತ ಪಡಿಸಿದ ಉದಾಹರಣೆಗಳಿವೆ. ಇಂತಹ ಕಾಲೇಜು ಬಿಟ್ಟು ಇಂದು ಮಕ್ಕಳು ಬೇರೆ ಕಾಲೇಜ್‌ಗೆ ಹೋಗುತ್ತಿದ್ದಾರೆ.
ಈ ವಸತಿ ನಿಲಯದಲ್ಲಿ ವಿದ್ಯುತ್ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಪಾಠ ಕಲಿಸಲು ಶಿಕ್ಷಕರೇ ಇಲ್ಲ. ಕಳೆದ ವರ್ಷ ಅಂತ್ಯದಲ್ಲಿ ಶಿಕ್ಷಕರು ಬಂದರೂ ಮಕ್ಕಳಿಗೆ ಪಾಠ ಕಲಿಸದ ಪರಿಣಾಮ ಪರೀಕ್ಷೆಯಲ್ಲಿ ೇಲಾಗಿದ್ದಾರೆ.
ಈ ವರ್ಷವೂ ಅದೇ ಪರಿಸ್ಥಿತಿ ಎಂದು ಮಕ್ಕಳು ಟಿಸಿ ಪಡೆದುಕೊಂಡು ಬೇರೆ ಕಾಲೇಜಿಗೆ ತೆರಳುತ್ತಿದ್ದಾರೆ. ಇನ್ನೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಈ ಕಾಲೇಜಿಗೆ ಬಂದು ಹತ್ತಾರು ದಿನಗಳು ಕಳೆದಿವೆ.
ಅವರೂ ಕೂಡ ಇಲ್ಲಿನ ವ್ಯವಸ್ಥೆ ಕಂಡು ತಮ್ಮ ಟಿಸಿ ಪಡೆದುಕೊಂಡು ಹೋಗುತ್ತಿದ್ದಾರೆ.
ಸದ್ಯ ಈ ಕಾಲೇಜಿನಿಂದ 11 ಪ್ರಥಮ ಪಿಯುಸಿ ಹಾಗೂ 14 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಟಿಸಿ ಪಡೆದುಕೊಂಡು ಬೇರೆ ಕಾಲೇಜಿಗೆ ಹೋಗಿದ್ದಾರೆ.
ಕಳೆದ ಒಂದು ವರ್ಷದಿಂದ ಈ ಕಾಲೇಜಿನ ವ್ಯವಸ್ಥೆ ಹದಗೆಡುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಶಿಕ್ಷಕರ ನೇಮಕ ಹಾಗೂ ವಿದ್ಯುತ್, ನೀರು ಸೇರಿದಂತೆ ಮೂಲ ಸೌಕರ್ಯ ಸರಿ ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವಂತ ವ್ಯವಸ್ಥೆ ಮಾಡುವುದು ಅವಶ್ಯವಿದೆ.
"

ಈ ಮುರಾರ್ಜಿ ದೇಸಾಯಿ ವಸತಿ ಕಾಲೇಜಿನಲ್ಲಿ ಪಾಠ ಕಲಿಸುವ ಶಿಕ್ಷಕರಿಲ್ಲ, ಶಿಕ್ಷಕರೇ ಇಲ್ಲದಿದ್ದರೆ ಈ ಕಾಲೇಜಿನಲ್ಲಿ ಮಕ್ಕಳು ಏನು ಕಲಿಯಬೇಕು. ಅಲ್ಲದೆ ವಸತಿ ನಿಲಯದಲ್ಲಿ ವಿದ್ಯುತ್,ನೀರು ಸರಿಯಾಗಿ ಇರುವುದಿಲ್ಲ ಆದ್ದರಿಂದ ನಾವು ನಮ್ಮ ತಂಗಿಯನ್ನು ಮುಂಡಗೋಡ ಪಿಯು ಕಾಲೇಜ್‌ಗೆ ದಾಖಲಿಸಿದ್ದೇವೆ.

— ವಿಷ್ಣು ಲಮಾಣಿ, ವಿದ್ಯಾರ್ಥಿನಿಯ ಸಹೋದರ
"

ಶಿಕ್ಷಕರ ಕೊರತೆಯಿದೆ ಅದಕ್ಕಾಗಿ ಕೆಲವು ವಿದ್ಯಾರ್ಥಿಗಳು ಬೇರೆ ಕಾಲೇಜಗೆ ಹೋಗುತ್ತಿದ್ದಾರೆ ಸದ್ಯದಲ್ಲಿಯೇ ಶಿಕ್ಷಕರು ಬರುತ್ತಾರೆ. ಇನ್ನೂ ವಸತಿ ನಿಲಯದಲ್ಲಿ ವಿದ್ಯುತ್ ಹಾಗೂ ನೀರಿನ ಸೌಲಭ್ಯ ಸರಿಯಾಗಿದೆ.

— ಆನಂದ ಚಿಕ್ಕೋಡಿ ಪ್ರಾಂಶುಪಾಲ ಮುರಾರ್ಜಿ ಕಾಲೇಜ್


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net