danger ಅಪಾಯಕ್ಕೆ ಆಹ್ವಾನಿಸುತ್ತಿವೆ ಹೊಂಡಗಳು !

ಯಲ್ಲಾಪುರ-ಶಿರಸಿ ರಸ್ತೆಯ ಪಕ್ಕ ಅಪಾಯಕ್ಕೆ ಆಹ್ವಾನಿಸುವ ಹೊಂಡ.
ಯಲ್ಲಾಪುರ-ಶಿರಸಿ ರಸ್ತೆಯ ಪಕ್ಕ ಅಪಾಯಕ್ಕೆ ಆಹ್ವಾನಿಸುವ ಹೊಂಡ.
Published on

ಪ್ರಮುಖ ಮುಖ್ಯಾಂಶಗಳು

  • ಸವಾರರು ರಸ್ತೆ ಬಿಟ್ಟು ವಾಹನ ಕೆಳಗಿಳಿಸಿದರೆ ಅನಾಹುತ ಖಾತ್ರಿ
ಯಲ್ಲಾಪುರ: ಕಳೆದ ಬೇಸಿಗೆಯಲ್ಲಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಬಿಎಸ್‌ಎನ್‌ಎಲ್ ಕೇಬಲ್ ಅಳವಡಿಕೆಗಾಗಿ ರಸ್ತೆ ಬದಿಯಲ್ಲಿ ಹೊಂಡಗಳನ್ನು ತೆಗೆಯಲಾಗಿತ್ತು. ಕಾಮಗಾರಿ ಮುಗಿದ ನಂತರ ಅವುಗಳನ್ನು ಕಾಟಾಚಾರಕ್ಕೆಂಬಂತೆ ಮುಚ್ಚಲಾಗಿದೆ. ಮಳೆ ಆರಂಭವಾಗುತ್ತಿದ್ದಂತೆ ಹೊಂಡಗಳು ಬಾಯ್ತೆರೆಯುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳ ಪಕ್ಕದಲ್ಲಿಯೂ ಹೊಂಡಗಳನ್ನು ತೆಗೆದು ಕೇಬಲ್ ಅಳವಡಿಸಲಾಗಿತ್ತು. ಬೇಸಿಗೆಯಲ್ಲಿ ಸುಮಾರು 2-3 ತಿಂಗಳು ಕಾಮಗಾರಿ ನಡೆದಿತ್ತು. ಕಾಮಗಾರಿ ಮುಗಿದ ನಂತರ ಗುಂಡಿಗಳನ್ನು ಮುಚ್ಚಿರಲಿಲ್ಲ. ಆಗ ಕೆಲವೆಡೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಟಾಚಾರಕ್ಕೆಂಬಂತೆ ಮುಚ್ಚಿ ಹೋಗಿದ್ದರು. ಗುಂಡಿಯ ನೈಜ ಚಿತ್ರಣ ಮಳೆ ಆರಂಭವಾಗುತ್ತಿದ್ದಂತೆ ಬಯಲಾಗುತ್ತಿದೆ. ಯಲ್ಲಾಪುರ-ಶಿರಸಿ ರಸ್ತೆ, ಮಾಗೋಡ ರಸ್ತೆ, ವಜ್ರಳ್ಳಿ ರಸ್ತೆ, ರಾಷ್ಟ್ರೀಯ ಹೆದ್ದಾರಿ ಸೇರಿ ಹಲವೆಡೆ ಈ ರೀತಿಯ ಅರೆಬರೆ ಮುಚ್ಚಿದ ಹೊಂಡಗಳಿವೆ. ಎದುರಿಗೆ ವಾಹನಗಳು ಬಂದಾಗ ವಾಹನ ಸವಾರರು ಸ್ವಲ್ಪ ರಸ್ತೆ ಬಿಟ್ಟು ಕೆಳಗಿಳಿದರೂ ಹೊಂಡದಲ್ಲಿ ಬೀಳುವುದು ಖಚಿತ.
ಮಳೆಗಾಲದಲ್ಲಿ ವಾಹನ ಸವಾರರು ಬಿದ್ದು ಅಪಾಯ ಉಂಟಾಗುವುದಕ್ಕಿಂತ ಮೊದಲು ಎಚ್ಚೆತ್ತುಕೊಂಡು ಹೊಂಡಗಳನ್ನು ಸರಿಯಾಗಿ ಮುಚ್ಚುವ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.

ಬಿಎಸ್‌ಎನ್‌ಎಲ್‌ನಿಂದ ಕಾಮಗಾರಿ ಪಡೆದ ಗುತ್ತಿಗೆದಾರು ಹಾಗೂ ರಸ್ತೆ ನಿರ್ವಹಿಸುವ ಇಲಾಖೆಗಳು ಸಮನ್ವಯದಿಂದ ಈ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಗುತ್ತಿಗೆದಾರರು ಇಲಾಖೆಯತ್ತ, ಇಲಾಖೆ ಗುತ್ತಿಗೆದಾರರತ್ತ ಬೊಟ್ಟು ಮಾಡುತ್ತ ವಿಳಂಬ ಮಾಡದೇ ಶೀಘ್ರ ಕ್ರಮ ಕೈಗೊಳ್ಳಬೇಕು.

— ಗುರು ಭಟ್ಟ ಜಂಬೆಸಾಲ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net