ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ
ಜು. 21ರಂದು 500ಕ್ಕೂ ಅಧಿಕ ಸ್ಥಳಗಳಲ್ಲಿ ಕಾರ್ಯಕ್ರಮ
ಶಿರಸಿ: ದಶಲಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ಜಿಲ್ಲಾದ್ಯಂತ ಜು. 21ರಂದು, 137 ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ 500 ಕ್ಕೂ ಅಧಿಕ ವಿವಿಧ ಸ್ಥಳದಲ್ಲಿ ಏಕಕಾಲದಲ್ಲಿ ಗಿಡ ನೆಡುವ (Plantation) ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.
ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಭಾನುವಾರ ದಶಲಕ್ಷ ಗಿಡ ನೆಡುವ ಅಭಿಯಾನದ ಲಾಂಚನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಅರಣ್ಯ ಭೂಮಿ ಹಕ್ಕಿಗಾಗಿ ನಿರಂತರ 34 ವರ್ಷ ಹೋರಾಟದ ಹಿನ್ನೆಲೆಯಲ್ಲಿ ಪರಿಸರ ರಕ್ಷಣೆ, ಸಂರಕ್ಷಣೆ ಮತ್ತು ಅಭಿವೃದ್ಧಿ ದಿಸೆಯಲ್ಲಿ ಅರಣ್ಯವಾಸಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಮಳೆಗಾಲದಲ್ಲಿ ಅರಣ್ಯವಾಸಿಗಳು ಗಿಡ ನೆಡುವ ಅಭಿಯಾನ ಪ್ರತಿವರ್ಷ ಹಮ್ಮಿಕೊಳ್ಳುತ್ತಿರುವುದು ಹೋರಾಟಗಾರರ ವೇದಿಕೆಯ ವಿಶೇಷತೆ.
ಅರಣ್ಯವಾಸಿಗಳು ಪರಿಸರ ಉಳಿಸಿ, ಬೆಳೆಸುತ್ತಾರೆ. ಅರಣ್ಯದೊಂದಿಗೆ ಜೀವನ ಅವಲಂಬಿತರಾಗಿರಬೇಕು. ಪರಿಸರ ಅಭಿವೃದ್ಧಿಯಲ್ಲಿ ಅರಣ್ಯವಾಸಿಗಳ ಪಾತ್ರ ಅತಿ ಮುಖ್ಯ ಹಾಗೂ ಅರಣ್ಯ ಭೂಮಿ ಹಕ್ಕಿನೊಂದಿಗೆ, ಪರಿಸರ ಜಾಗೃತಿ ಹಮ್ಮಿಕೊಂಡಿರುವುದು ಹೋರಾಟಗಾರರ ವೇದಿಕೆಯ ಶ್ರೇಷ್ಠ ಮಟ್ಟದ ಕಾರ್ಯ.
ಮನುಷ್ಯ ತನ್ನ ಅವಶ್ಯಕತೆಗಾಗಿ ಕಾಡು ನಾಶ ಮಾಡಿರುವ ಹಿನ್ನೆಲೆಯಲ್ಲಿ, ಗಿಡ ನೆಡುವ ಮೂಲಕ ಪರಿಸರ ಪ್ರಜ್ಞೆ ಬೆಳೆಸಿಕೊಂಡಿರುವುದು ಅರಣ್ಯವಾಸಿಗಳ ಉತ್ತಮ ಸಂಸ್ಕೃತಿ ಎಂದರು.
ಸಭೆಯಲ್ಲಿ ರಮಾನಂದ ನಾಯಕ ಅಂಕೋಲ, ಇಬ್ರಾಹೀಂ ಗೌಡಳ್ಳಿ, ಮಹಾಬಲೇಶ್ವರ ನಾಯ್ಕ ಬೇಡ್ಕಣಿ, ಮಂಜು ಮರಾಠಿ ನಾಗೂರು, ಶಿವಾನಂದ ಜೋಗಿ, ಮಹೇಶ ನಾಯ್ಕ ಕಾನಕ್ಕಿ, ಬಾಲಚಂದ್ರ ಶೆಟ್ಟಿ, ಶಂಕರ ಕೊಡಿಯಾ, ರಾಜು ಮುಕ್ರಿ ಮತ್ತಿತರರು ಮಾತನಾಡಿದರು.
ಅರಣ್ಯವಾಸಿಗಳಿಂದ ಪ್ರತಿ ವರ್ಷ ಸಂಘಟಿಸ್ಪಡುವ ದಶಲಕ್ಷ ಗಿಡ ನೆಡುವ ಅಭಿಯಾನ ಪ್ರಶಂಸೆಯ ಕಾರ್ಯ. ಅರಣ್ಯವಾಸಿಗೆ ಪರಿಸರ ಜಾಗೃತಿ ಅವಶ್ಯ. ಅರಣ್ಯವಾಸಿಗಳು ಗಿಡವನ್ನು ನೆಟ್ಟು, ಬದುಕಿ ಬೆಳೆಯುವ ರೀತಿಯಲ್ಲಿ ಗಿಡಗಳನ್ನು ನೆಡಬೇಕು ವಿನಃ, ಅರಣ್ಯ ಇಲಾಖೆ ನೆಟ್ಟ ರೀತಿಯಲ್ಲಿ ಗಿಡ ನೆಟ್ಟು ಸಾಯಿಸಬೇಡಿ.