ನರೇಗಾಕ್ಕಿಂತ ಖಾಸಗಿಯಲ್ಲೇ ಹೆಚ್ಚು ಪಗಾರು! NREGA

ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ ಉದ್ಯೋಗ ಖಾತ್ರಿ ಯೋಜನೆಯ (NREGA) ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ದಿಲೀಷ್ ಶಸಿ ಪರಿಶೀಲಿಸಿದರು. ಟಿ.ವೈ. ದಾಸನಕೊಪ್ಪ, ಪಿಡಿಒ ಶ್ರೀನಿವಾಸ ಮರಾಠೆ, ಇತರರಿದ್ದರು.
ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ ಉದ್ಯೋಗ ಖಾತ್ರಿ ಯೋಜನೆಯ (NREGA) ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ದಿಲೀಷ್ ಶಸಿ ಪರಿಶೀಲಿಸಿದರು. ಟಿ.ವೈ. ದಾಸನಕೊಪ್ಪ, ಪಿಡಿಒ ಶ್ರೀನಿವಾಸ ಮರಾಠೆ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ
  • ಕೂಲಿಕಾರರ ಅಹವಾಲು ಆಲಿಕೆ
  • ಪ್ರಮುಖ ಕಡತಗಳ ಪರಿಶೀಲನೆ
ಮುಂಡಗೋಡ: ಉತ್ತರ ಕನ್ನಡ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಸಿ ಗುರುವಾರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ, ಸರ್ಕಾರಿ ಕಟ್ಟಡ ಹಾಗೂ ನರೇಗಾ (NREGA) ಕಾಮಗಾರಿ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸ್ಮಶಾನ ಕಟ್ಟೆ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳ ಪರಿಶೀಲಿಸಿ, ಕೂಲಿಕಾರರೊಂದಿಗೆ ಸಂವಾದ ನಡೆಸಿದರು.
ಸ್ಥಳೀಯವಾಗಿ ಖಾಸಗಿ ಕೆಲಸಗಳಲ್ಲಿ ನರೇಗಾ ಯೋಜನೆಗಿಂತಲೂ ಕೂಲಿ ದರ ಹೆಚ್ಚಿದ್ದು, ಯೋಜನೆಯಡಿ ಕೂಲಿ ದರವನ್ನು ಇನ್ನೂ ಹೆಚ್ಚಿಸಬೇಕು ಮತ್ತು ಬೇಸಿಗೆಯಲ್ಲಿ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಬೇಕೆಂಬ ಕೂಲಿಕಾರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಬಳಿಕ ಮಳಗಿ ಹಾಗೂ ಪಾಳಾ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡಿ, ವಿವಿಧ ಯೋಜನೆಗಳ ಪ್ರಗತಿ ಮತ್ತು ಪ್ರಮುಖ ಕಡತಗಳನ್ನು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಇದೇ ವೇಳೆ ಗ್ರಂಥಾಲಯ, ಕೂಸಿನ ಮನೆಗಳನ್ನು ಪರಿವೀಕ್ಷಣೆ ಮಾಡಿದರು.
ನಂತರ ಪಾಳಾ ಐಟಿಐ ಕಾಲೇಜಿಗೆ ಭೇಟಿ ನೀಡಿ, ಆಡಳಿತ ಕಚೇರಿ, ಲ್ಯಾಬ್, ಬೋಧನಾ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.
ನಂತರ ಇಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ಬೂದು ನೀರು ನಿರ್ವಹಣೆಗಾಗಿ ಸಮುದಾಯ ಮಟ್ಟದಲ್ಲಿ ಚರಂಡಿಯಲ್ಲಿ ನೀರು ಸಂಸ್ಕರಣಾ ಘಟಕ ವೀಕ್ಷಣೆ ಮಾಡಿ, ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಇಂಜಿನಿಯರ್ ದೀಪಾ ಎಸ್ ಶೆಡಗೇರಿ, ಕಿರಿಯ ಇಂಜಿನಿಯರ್ ಪ್ರದೀಪ ಭಟ್, ಪಿಡಿಒ, ನರೇಗಾ ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net