ಸಾರ್ಧ ಪಂಚ ಶತಮಾನೋತ್ಸವಕ್ಕೆ ಅರಮನೆಯಂತೆ ಸಜ್ಜಾದ ಪರ್ತಗಾಳಿ

ಮಠದ ಸುಂದರ ಒಳಾಂಗಣ
ಮಠದ ಸುಂದರ ಒಳಾಂಗಣ
Published on
ಕಾರವಾರ: ಸಾರ್ಧ ಪಂಚ ಶತಮಾನೋತ್ಸವಕ್ಕೆ ಗೋವಾ ಪರ್ತಗಾಳಿ ಜೀವೋತ್ತಮ ಮಠವು ಸಂಭ್ರಮದಿಂದ ಸಜ್ಜುಗೊಳ್ಳುತ್ತಿದೆ. ಪ್ರವೇಶ ದ್ವಾರಗಳು, ಮಠದ ಒಳ ಆವರಣ, ಜರ್ಮನ್ ಟೆಂಟ್, ಹೆಲಿಪ್ಯಾಡ್, ಪಾರ್ಕಿಂಗ್ ಹೀಗೆ ಎಲ್ಲೆಡೆ ಕಾಮಗಾರಿ ನಡೆದಿದ್ದು, ಅಂತಿಮ ಹಂತ ತಲುಪಿವೆ.
ಸಾವಿರಕ್ಕೂ ಅಧಿಕ ಕಾರ್ಮಿಕರು, ನೂರಾರು
ಕಾರ್ಯಕರ್ತರು ಮಠದಲ್ಲಿ ನಡೆಯುವ ಕಾರ್ಯಕ್ರಮದ ತಯಾರಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಈಗಾಗಲೇ ಮಠದ ಇಡೀ ಆವರಣವನ್ನು ಬಿಳಿ ಮಾರ್ಬಲ್‌ನಿಂದ ನವೀಕರಿಸಲಾಗಿದೆ. ಗೋಡೆಗಳನ್ನು ಸಾಂಪ್ರದಾಯಿಕ ಕಾವಿ ಕಲೆಯ ಚಿತ್ರಗಳಿಂದ ಅಲಂಕರಿಸಲಾಗಿದೆ.
ಮೇಲ್ದಾವಣಿ ಸುಂದರ ಮರದ ಕೆತ್ತನೆಯಿಂದ ಮನಸೂರೆಗೊಳ್ಳುತ್ತಿದೆ. ಪುರಾತನ ಶಿಲ್ಪಕಲೆಗೆ ಆಧುನಿಕ ಸ್ವರೂಪ ನೀಡಿ ಇಡೀ ಮಠವು ಅರಮನೆಯಂತೆ ಕಂಗೊಳಿಸುತ್ತಿದೆ. ಸ್ವಚ್ಛ, ಶಾಂತ ತಂಪಾದ ಪರಿಸರ ಗಮನ ಸೆಳೆಯುತ್ತಿದೆ.

55 ಹೋಮ ಕುಂಡ:

ಮಠಕ್ಕೆ 550 ವರ್ಷ ತುಂಬುತ್ತಿರುವ ಕಾರಣ 550 ಕೋಟಿ ಶ್ರೀರಾಮ ತಾರಕ ಜಪವನ್ನು ಈಗಾಗಲೇ ಭಕ್ತರು ಪೂರೈಸಿದ್ದಾರೆ.
27ರಿಂದ ವಿಶೇಷ ಹೋಮ ನಡೆಯಲಿದೆ. ಮಠದ ಬಲಭಾಗದಲ್ಲಿ ಬೃಹತ್ ಯಾಗಶಾಲೆಯನ್ನು ಸಾಂಪ್ರದಾಯಿಕ ಸೋಗೆ ಹರಿಗಳಿಂದ ನಿರ್ಮಿಸಲಾಗಿದೆ. ಅದರಲ್ಲಿ 55 ಹೋಮ ಕುಂಡಗಳನ್ನು ಸಜ್ಜಿಗೊಳಿಸಲಾಗಿದೆ. ಅದರಲ್ಲಿ 55 ಯಜಮಾನರು 10 ದಿನ ಹೋಮ ನಡೆಸುವರು. ಅದಕ್ಕಾಗಿ ಋತ್ವಿಜರನ್ನು ನೇಮಿಸಲಾಗಿದೆ.

ಅನ್ನ ದಾಸೋಹ:

27 ರಿಂದ ಪ್ರತಿ ದಿನ 7 ರಿಂದ 15 ಸಾವಿರ ಜನರು ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಠದ ಆವರಣದಲ್ಲಿ ಭೋಜನ ಛತ್ರ ಹಾಗೂ ಪಕ್ಕದಲ್ಲೇ ಪಾಕಶಾಲೆಯನ್ನು ಪ್ರಾರಂಭಿಸಲಾಗಿದ್ದು, ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ವಿವಿಧ ಮಠಾಧೀಶರು ಭಾಗಿ:

ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು, ಕವಳೆ ಮಠದ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮಿಗಳಿಗೆ ಆಹ್ವಾನ ನೀಡಲಾಗಿದ್ದು, ಅವರು ಕಾರ್ಯಕ್ರಮಕ್ಕೆ ಆಗಮಿಸಲು ಈಗಾಗಲೇ ದಿನಾಂಕ ನಿಗದಿಯಾಗಿದೆ ಎಂದು ಭಕ್ತರು ತಿಳಿಸಿದ್ದಾರೆ.

ಮಧ್ವರ ತತ್ವ ಸಾರುವ ಉದ್ದೇಶ

ಪರ್ತಗಾಳಿ ಮಠವು 550 ನೇ ವರ್ಷ ಪೂರೈಸಿದ ಕಾರಣ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಧ್ವಾಚಾರ್ಯರ ತತ್ವಗಳನ್ನು ಜನರಿಗೆ ತಿಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮಿಗಳು ಹೇಳಿದರು. ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ಮಠದಲ್ಲಿ 370 ವರ್ಷಗಳ ಹಳೆಯ ರಾಮನ ವಿಗ್ರಹವಿದ್ದು, ಪರಂಪರೆಯಿಂದ ರಾಮನನ್ನು ನಿತ್ಯ ಪೂಜೆ ಮಾಡಿಕೊಂಡು
ಬರಲಾಗಿದೆ. ಮಠದ ಎದುರಿನ ಜಾಗವು ರಾಮನ ಬಿಲ್ಲು (ಕೋದಂಡ) ಆಕೃತಿಯಲ್ಲಿತ್ತು. ಇದರಿಂದ ಆ ಜಾಗದಲ್ಲಿ ಪ್ರಭು ಶ್ರೀರಾಮನ 77 ಅಡಿಯ ಬೃಹತ್ ವಿಗ್ರಹ ನಿರ್ಮಾಣಕ್ಕೆ ಯೋಜಿಸಲಾಯಿತು. ನ.27 ರಂದು ಮಕರ ಲಗ್ನದಲ್ಲಿ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದ್ದು, 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡುವರು. ಶ್ರೀರಾಮನ ಆದರ್ಶಗಳನ್ನು ತಲುಪಿಸುವ ಸಲುವಾಗಿ ವಿಗ್ರಹದ ಸುತ್ತ ರಾಮಾಯಣ ಥೀಮ್ ಪಾರ್ಕ್ ಮಾಡಲಾಗುತ್ತಿದೆ. ದೇವರ ಬಳಿ ಪ್ರಸಾದ ಕೇಳಿ ಅದಕ್ಕೆ ಆದರ್ಶ ಧಾಮ ಎಂದು ಹೆಸರಿಡಲಾಗಿದೆ. ಕಳೆದ ವರ್ಷದಿಂದ ಸಾವಿರಾರು ಭಕ್ತಾದಿಗಳು ರಾಮ ತಾರಕ ಜಪ ಮಾಡಿದ್ದಾರೆ. ದೇಶದೆಲ್ಲೆಡೆ ಒಟ್ಟು 120 ಕೇಂದ್ರಗಳಲ್ಲಿ ಜಪ ನಡೆದಿದ್ದರಿಂದ ಶ್ರೀ ರಾಮನ ಬೃಹತ್ ವಿಗ್ರಹದ ಕೆಳಗೆ ಆ ಎಲ್ಲ ಕೇಂದ್ರಗಳ ಹೆಸರನ್ನು ಕೆತ್ತಿಸಲಾಗಿದೆ ಎಂದು ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net