ಸಿದ್ದಾಪುರ ತಾಲೂಕಿನ ಹೊಸೂರು ಗ್ರಾಮದ ನಿವೃತ್ತ ಸೈನಿಕ ಕೃಷ್ಣ ದ್ಯಾವ ನಾಯ್ಕ ಅವರ ಅರಣ್ಯ ಸಾಗುವಳಿ ಕ್ಷೇತ್ರ ಒಕ್ಕಲೆಬ್ಬಿಸಲು ಬಂದಾಗ ಅರಣ್ಯ ಇಲಾಖೆಯವರೊಂದಿಗೆ ಚರ್ಚಿಸುತ್ತಿರುವ ಮಹಾಬಲೇಶ್ವರ ನಾಯ್ಕ ಬೇಡ್ಕಣಿ.
ಸಿದ್ದಾಪುರ: ಒಕ್ಕಲೆಬ್ಬಿಸುವ ಕ್ಷೇತ್ರದ ನಿರ್ದಿಷ್ಟ ಗಡಿರೇಖೆ ಇಲ್ಲದ ಆದೇಶದೊಂದಿಗೆ, ಹೊಸೂರು ಗ್ರಾಮದ ನಿವೃತ್ತ ಸೈನಿಕ ಕೃಷ್ಣ ದ್ಯಾವ ನಾಯ್ಕ ಅವರ ಅರಣ್ಯ ಸಾಗುವಳಿ ಕ್ಷೇತ್ರ ಒಕ್ಕಲೆಬ್ಬಿಸಲು 150ಕ್ಕೂ ಹೆಚ್ಚು ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಅರಣ್ಯವಾಸಿಗಳು ಸಾಗುವಳಿ ಕ್ಷೇತ್ರ ದೃಢೀಕರಣಕ್ಕೆ ಒತ್ತಾಯಿಸಿ ಯೋಧನ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆಯಿತು.
26 ವರ್ಷ ಸೈನಿಕ ಸೇವೆ ಸಲ್ಲಿಸಿ ಮಾನಸಿಕ ಅಸ್ವಸ್ಥತೆಗೊಳಗಾಗಿರುವ ಅರಣ್ಯವಾಸಿ ಕೃಷ್ಣ ದ್ಯಾವ ನಾಯ್ಕ ಅವರ ಮೇಲೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರದಿಂದ ಜು. 27ರಂದು ತಕ್ಷಣ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಆದೇಶ ನೀಡಿದ್ದರು. ಆದೇಶದ ನಂತರ ಒಕ್ಕಲೆಬ್ಬಿಸುವ ದಿಸೆಯಲ್ಲಿ ವಿಧಿವಿಧಾನ ಅನುಸರಿಸದೇ ನೋಟಿಸ್ ನೀಡದೇ ಹೈಕೋರ್ಟ್‌ನಲ್ಲಿ ದಾಖಲಿಸಿದ ಮೇಲ್ಮನವಿ ವಿಚಾರಣೆ ಹಂತದಲ್ಲಿ ಮುನ್ಸೂಚನೆ ನೀಡದೇ ಏಕಾಏಕಿಯಾಗಿ ಬೃಹತ್ ಸಂಖ್ಯೆಯಲ್ಲಿ ತೆರವು ಕಾರ್ಯಾಚರಣೆಗೆ ವಿವಿಧ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರು.
ಕ್ಷೇತ್ರ ದೃಢೀಕರಣಕ್ಕೆ ಸಾಕಷ್ಟು ಸಮಯ ಆಕ್ಷೇಪ ಪ್ರಶ್ನೆಗಳ ಸುರಿಮಳೆ, ಬಿಸಿಬಿಸಿ ಚರ್ಚೆ, ವಾದ ವಿವಾದಗಳು ಜರುಗಿರುವುದೊಂದಿಗೆ ಕಾನೂನು ವಿಧಿವಿಧಾನ ಅನುಸರಿಸದೇ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯ ಸಮಯೋಚಿತ ಸಲಹೆ, ಸೂಚನೆ ಮೇರೆಗೆ ವಾತಾವರಣ ತಿಳಿಗೊಂಡಿತ್ತು. ಅತಿಕ್ರಮಣ ಕ್ಷೇತ್ರದ ಬೇಲಿ ಗಿಡ ಮರ ಕಡಿಯದೇ ಸಾಗುವಳಿ ಕ್ಷೇತ್ರದ ಹೊರ ಪ್ರದೇಶದ ಕ್ಷೇತ್ರದಲ್ಲಿ ಅಗಳ ಹೊಡೆಯುವ ಕಾರ್ಯಕ್ಕೆ ಮಾತ್ರ ಒಕ್ಕಲೆಬ್ಬಿಸುವ ಪ್ರಕ್ರಿಯೆ ಸೀಮಿತವಾಗಿತ್ತು ಎಂದು ಹೋರಾಟಗಾರರ ವೇದಿಕೆಯ ನೇತೃತ್ವವಹಿಸಿದ್ದ ಮಹಾಬಲೇಶ್ವರ ನಾಯ್ಕ ಬೇಡ್ಕಣಿ ಮತ್ತು ತಾಲೂಕು ಸಂಚಾಲಕ ಸಂಕೇತ್ ನಾಯ್ಕ ಹೇಳಿದರು.
ಒಕ್ಕಲೆಬ್ಬಿಸಲು ಸರ್ವೇ ನಂ. 51 ಸಾಗುವಳಿ ಕ್ಷೇತ್ರವೆಂದು ದಾಖಲಿಸಿದ ಹಿನ್ನೆಲೆಯಲ್ಲಿ, ಸಾಗುವಳಿ ಕ್ಷೇತ್ರದಲ್ಲಿ ನಿಂತು ದಿನಾಂಕದ ಮೂಲಕ ಕ್ಷೇತ್ರ ಪರೀಕ್ಷಿಸಿದಾಗ ಸರ್ವೇ ನಂ. 159 ತೋರಿಸುತ್ತಿದೆ ಎಂದು ಹೋರಾಟಗಾರರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್ ಮತ್ತು ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ್ ಅವರನ್ನು ಪ್ರಶ್ನಿಸಿದಾಗ ರಾಜ್ಯ ಸರ್ಕಾರದ ದಿನಾಂಕ ನಂಬಲು ಅನರ್ಹ ದಾಖಲೆ ಎಂದು ಉತ್ತರಿಸಿದರು.
ಖಂಡನೆ: ಸಾಗುವಳಿ ಕ್ಷೇತ್ರ ಒಕ್ಕಲೆಬ್ಬಿಸುವ ಪ್ರಕ್ರಿಯೆಯಲ್ಲಿ ಜರುಗಿದ ಘಟನೆಗಳು ಮತ್ತು ಅರಣ್ಯ ಇಲಾಖೆಯ ರೀತಿ ನೀತಿ, ಅತ್ಯಂತ ಮಾನವೀಯತೆಗೆ ಮೀರಿ ಹೇಯ ಕೃತ್ಯವೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದರು.
ಹೋರಾಟಗಾರರ ವೇದಿಕೆಯ ಮಂಜುನಾಥ ನಾಯ್ಕ ಸುಂಕತ್ತಿ, ಕಾರ್ಲುಯಿಸ್ ಮಾವಿನಗುಂಡಿ, ರವಿ ನಾಯ್ಕ ಹಲಗೇರಿ, ಪ್ರಕಾಶ ನಾಯ್ಕ ಹೊಸೂರು, ರಾಜು ಹೊಸೂರು, ದಯಾನಂದ ಹೊಸೂರು ಇತರರು ಸ್ಥಳದಲ್ಲಿದ್ದರು.
ಡಿವೈಎಸ್ಪಿ ಗೀತಾ ಪಾಟೀಲ ಸ್ಥಳ ಪರಿಶೀಲಿಸಿದರು. ಸಿಪಿಐ ಸೀತಾರಾಮ, ಪಿಎಸ್‌ಐ ಶಾಂತಿನಾಥ, ನಾಗಪ್ಪ ಭೋವಿ, ಉಪ ತಹಸೀಲ್ದಾರ್ ಡಿ.ಎಂ. ನಾಯ್ಕ, ಸರ್ವೇ ಇಲಾಖೆಯ ಗಣೇಶ ಹಾಜರಿದ್ದರು.