ಕುಮಟಾ: ಜಗತ್ತಿನ ಯಾವುದೇ ಮೂಲೆಯಲ್ಲಿರುವ ಭಕ್ತರಿಗೂ ಕಾಂಚಿಕಾ ಪರಮೇಶ್ವರಿಯ kanchika parameshwari ಸನ್ನಿಧಾನದಲ್ಲಿ ಸೇವೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಣೆಗೆ ಅವಕಾಶ ಒದಗಿಸಿರುವುದು ಅತ್ಯಂತ ಉಪಯುಕ್ತವಾಗಿದೆ. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೂರದೂರಿನಲ್ಲಿರುವ ದೇವಿಯ ಭಕ್ತರಿಗೆ ಸೇವಾ ಅವಕಾಶ ಒದಗಿಸಿರುವ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ ಮತ್ತು ಐತಿಹಾಸಿಕವಾಗಿದೆ ಎಂದು ಹಿರಿಯ ವಕೀಲ ಆರ್. ಜಿ. ನಾಯ್ಕ ಹೇಳಿದರು.
ತಾಲೂಕಿನ ಬಾಡ-ಗುಡೇಅಂಗಡಿಯ ಶ್ರೀ ಕಾಂಚಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗಾಗಿ ಆನ್‌ಲೈನ್ ಪೋರ್ಟಲ್ (ವೆಬ್ ಸೈಟ್) ಮೂಲಕ ಸೇವಾ ವ್ಯವಸ್ಥೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಎಸ್.ಎಸ್. ಹೆಗಡೆ ಮಾತನಾಡಿ, ದೇವಾಲಯದ ವಿಶೇಷ ವೆಬ್‌ಸೈಟ್ ನಿರ್ಮಿಸಲಾಗಿದೆ. ವೆಬ್‌ಸೈಟ್ (https://baadakanchikaparameshwaritemple.com) ಲಿಂಕ್ ಒತ್ತಿ ಸೇವೆಗಾಗಿ ಅಗತ್ಯ ಮಾಹಿತಿ ನೀಡಿ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ. ದೇವಸ್ಥಾನದ ಸೌಲಭ್ಯದ ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿನಂತಿಸಿದರು.
ನೂತನ ವೆಬ್ ಸೈಟ್ ಲೋಕಾರ್ಪಣೆ ಬಳಿಕ ಹುಬ್ಬಳ್ಳಿಯ ಅಶ್ವಿನಿ ಕಾರ್ತಿಕ ಹೆಗಡೆಕಟ್ಟೆ ಆನ್‌ಲೈನ್ ಮೂಲಕ ಸೇವೆ ಮಾಡಿಸಿದ ಮೊದಲ ಭಕ್ತೆಯಾದರು.
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಹಾದೇವ ಗೌಡ, ಎಚ್.ಎಸ್. ವಿಠಲ, ವ್ಯವಸ್ಥಾಪಕ ಪರಮೇಶ್ವರ ಭಂಡಾರಿ, ಜಗನ್ನಾಥ ನಾಯ್ಕ, ಕಾವಲುಗಾರ ಗಣೇಶ ನಾಯ್ಕ, ಸುಬ್ರಾಯ ನಾಯ್ಕ, ಹಿರಿಯರಾದ ನಾರಾಯಣ ಪಟಗಾರ, ಮಹಾದೇವ ಪಟಗಾರ ಇನ್ನಿತರರು ಉಪಸ್ಥಿತರಿದ್ದರು.