ತಡೆಗೋಡೆ ನಿರ್ಮಾಣಕ್ಕಿಲ್ಲ ಸ್ಪಂದನೆ

ಸಿದ್ದಾಪುರ ತಾಲೂಕಿನ ಭಂಡಾರಿಕೇರಿ ಸಮೀಪ ರಸ್ತೆ ಕುಸಿದಿರುವುದು.
ಸಿದ್ದಾಪುರ ತಾಲೂಕಿನ ಭಂಡಾರಿಕೇರಿ ಸಮೀಪ ರಸ್ತೆ ಕುಸಿದಿರುವುದು.
Published on
ಸಿದ್ದಾಪುರ: ತಾಲೂಕಿನ ಹದಿನಾರನೇ ಮೈಲ್‌ಕಲ್-ವಾಜಗದ್ದೆ-ಹಾರ್ಸಿಕಟ್ಟಾ ಗ್ರಾಮೀಣ ಮುಖ್ಯ ರಸ್ತೆಯ ಭಂಡಾರಿಕೇರಿ ಸಮೀಪ ರಸ್ತೆ ಕುಸಿದಿದ್ದು, ಸಾರ್ವಜನಿಕರಿಗೆ ಅಪಾಯ ಸಂಭವಿಸುವ ಮುನ್ನ ಸೂಕ್ತ ತಡೆಗೋಡೆ ನಿರ್ಮಿಸಬೇಕಾಗಿದೆ.
ನಿತ್ಯ ಸಾರಿಗೆ ಬಸ್, ಖಾಸಗಿ ವಾಹನ, ಹಾಲಿನ ವಾಹನ ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುವ ಮುಖ್ಯ ರಸ್ತೆ ಇದಾಗಿದೆ. ರಸ್ತೆ ಕುಸಿತಗೊಂಡ ಸ್ಥಳ ತಿರುವಿನಿಂದ ಕೂಡಿರುವುದರಿಂದ ಭಾರಿ ವಾಹನಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಈಗಾಗಲೇ ಈ ಸ್ಥಳದಲ್ಲಿ ಕೆಲವು ದ್ವಿಚಕ್ರ ವಾಹನದವರು ಬಿದ್ದು ಅಪಾಯದಿಂದ ಪಾರಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು. ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ತಡೆಗೋಡೆ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಯಾವುದಾದರೂ ದೊಡ್ಡ ಅನಾಹುತ ಆದ ಮೇಲೆ ಎಚ್ಚರಗೊಳ್ಳುತ್ತಾರೆಯೇ ಅಥವಾ ಜೀವ ಹಾನಿ ಸಂಭವಿಸಬೇಕೆ? ಎಂದು ಭಂಡಾರಿಕೇರಿ, ವಾಜಗದ್ದೆ, ಕಲ್ಮನೆ ಹಾಗೂ ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಕುಸಿತಗೊಂಡು ವರ್ಷವೇ ಕಳೆದರೂ ಸ್ಥಳದಲ್ಲಿ ಯಾವುದೇ ನಾಮಫಲಕ ಅಳವಡಿಸಿಲ್ಲ, ಬೇಲಿಯನ್ನು ಕೂಡ ನಿರ್ಮಿಸಿಲ್ಲ. ಇದು ಇಲಾಖೆಯ ನಿಷ್ಕಾಳಜಿಗೆ ಸಾಕ್ಷಿ ಎಂಬುದು ಸ್ಥಳೀಯರ ಆರೋಪವಾಗಿದೆ.
ರಸ್ತೆ ಪಕ್ಕ ಕುಸಿದಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ರಸ್ತೆ ಪಕ್ಕ ಮನೆ ಇರುವುದರಿಂದ ಲೋಕೋಪಯೋಗಿ ಇಲಾಖೆಯವರು ತಕ್ಷಣ ತಡೆಗೋಡೆ ನಿರ್ಮಿಸಬೇಕು ಎಂಬುದು ಭಂಡಾರಿಕೇರಿ, ವಾಜಗದ್ದೆ ಗ್ರಾಮಸ್ಥರ ಆಗ್ರಹವಾಗಿದೆ. ಈ ಕುರಿತು ಶನಿವಾರ ಸಿದ್ದಾಪುರದ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರು ವಾಜಗದ್ದೆಗೆ ಕಾರ್ಯಕ್ರಮಕ್ಕೆ ಆಗಮಿಸಿದಾಗ ಸ್ಥಳೀಯರು ರಸ್ತೆ ಕುಸಿತದ ಕುರಿತು ತಿಳಿಸಿದಾಗ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಇನ್ನಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮಸ್ಯೆ ಸರಿಪಡಿಸಲು ಮುಂದಾಗುತ್ತಾರೆಯೇ ಎಂದು ಕಾದು ನೋಡಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net