

ಪ್ರಮುಖ ಮುಖ್ಯಾಂಶಗಳು
ಶಿರಸಿ: ವ್ಯಕ್ತಿಯೋರ್ವನನ್ನು ರಾತ್ರಿಯ ವೇಳೆ ಮನೆಯಿಂದ ಹೊರ ಕರೆದು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಭೀಕರ ತಾಲೂಕಿನ ಶಿಂಗನಮನೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ವ್ಯಕ್ತಿ ನಾಪತ್ತೆ ದೂರಿನ ಹಿನ್ನೆಲೆಯಲ್ಲಿ ಶೋಧ ನಡೆಸಿದ ಪೊಲೀಸರಿಗೆ ಗುರುವಾರ ಬೆಳಗ್ಗೆ ಮನೆಯಿಂದ 200 ಮೀ. ದೂರದ ಕಾಡಿನಲ್ಲಿಯೇ ಶವ ದೊರೆತಿದ್ದು, ಕಡಿದು ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಘಟನೆ ನಡೆದ 24 ಗಂಟೆ ಒಳಗೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು, ಸಂಬಂಧಿ ಹಾಗೂ ಪಕ್ಕದಮನೆಯವನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.
ಪರಮೇಶ್ವರ ಬಾಬು ನಾಯ್ಕ (25) ಕೊಲೆಯಾದ ವ್ಯಕ್ತಿ. ಸಂಜೆಯ ವೇಳೆ ಈತ ಮನೆಯಿಂದ ಹೊರ ಹೋದವನು ವಾಪಸ್ ಬರದಿದ್ದಾಗ ರಾತ್ರಿ 12 ಗಂಟೆಯ ವೇಳೆ ಪರಮೇಶ್ವರ ನಾಯ್ಕ ಅವರ ಮಾವ ಪೊಲೀಸರಿಗೆ ಕರೆ ಮಾಡಿ ನಾಪತ್ತೆಯಾದ ಬಗ್ಗೆ ತಿಳಿಸಿದ್ದರು. ಮೃತ ಪರಮೇಶ್ವರ ನಾಯ್ಕ ಅವರ ಸಹೋದರಿ, "ಸಂಜೆ ಸುಮಾರು 7.45 ರ ಹೊತ್ತಿಗೆ ಪರಮೇಶ್ವರನ ಮೊಬೈಲ್‌ಗೆ ಯಾರಿಂದಲೋ ಕರೆ ಬಂದಿದೆ. ತಕ್ಷಣವೇ ಆತ ಮನೆಯಿಂದ ಹೊರ ಹೋಗಿದ್ದಾನೆ. ಆದರೆ, ರಾತ್ರಿಯಾದರೂ ವಾಪಸ್ ಬರದಿದ್ದಾಗ ಆತಂಕಗೊಂಡು ಪೊಲೀಸರಿಗೆ ಕರೆ ಮಾಡಿದ್ದೆವು" ಎಂದಿದ್ದಾರೆ. ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು ನಾಪತ್ತೆಯಾದ ಪರಮೇಶ್ವರನ ಹುಡುಕಾಟ ನಡೆಸಿದ್ದಾರೆ. ಆದರೆ, ಬೆಳಗಿನ ವೇಳೆ ಆತ ಸಮೀಪದ ಕಾಡಿನಲ್ಲಿ ಶವವಾಗಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ., ಡಿವೈಎಸ್ ಪಿ ಗೀತಾ ಪಾಟೀಲ, ಸಿಪಿಐ ಸಂಪತ್ ಕುಮಾರ ಹಾಗೂ ಗ್ರಾಮೀಣ ಠಾಣೆ ಪಿಎಸ್ ಐ ಸಂತೋಷ ಸ್ಥಳಕ್ಕೆ ತೆರಳಿ ಆರೋಪಿಯ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಂಬಂಧಿಯು, ಪಕ್ಕದಮನೆಯವನೇ ಆದ ಪರಮೇಶ್ವರ ತಿಮ್ಮಾ ನಾಯ್ಕ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು, ಅಕ್ರಮ ಸಂಬಂದವೇ ಈ ಕೊಲೆಗೆ ಕಾರಣವಾಗಿರುವ ಸಾಧ್ಯತೆ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಕೊಲೆಗೆ ಬಳಸಿದ ಕತ್ತಿ ಸಹ ಮೃತ ವ್ಯಕ್ತಿಯ ಮನೆಯದ್ದು ಎನ್ನಲಾಗಿದ್ದು, ಈ ಬಗ್ಗೆ ಮೃತ ವ್ಯಕ್ತಿಯ ಕುಟುಂಬದವರನ್ನೂ ವಿಚಾರಣೆ ನಡೆಸಿದ್ದಾರೆ.ಈ ಕುರಿತಂತೆ ಮಾಹಿತಿ ನೀಡಿರುವ ಎಸ್ ಪಿ ದೀಪನ್, " ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆ ವ್ಯಕ್ತಿಯ ಬೆರಳಚ್ಚು ತನಿಖೆ ಹಾಗೂ ಶ್ವಾನದಳದಿಂದ ತನಿಖೆ ಕಾರ್ಯ ನಡೆಯುತ್ತಿದೆ" ಎಂದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಪೊಲೀಸ್ ಇಲಾಖೆ ಈಗಾಗಲೇ ಬೀಟ್ ವ್ಯವಸ್ಥೆಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟು ನಿಟ್ಟಾಗಿ ಜಾರಿಗೊಳಿಸಲಿದ್ದೇವೆ. ಮನೆ ಮನೆ ಪೊಲೀಸ್ ವ್ಯವಸ್ಥೆಯಲ್ಲಿ ಗ್ರಾಮಸ್ಥರನ್ನೂ ಜಾಗೃತಿಗೊಳಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.