ಕಾರವಾರ: ತಾಲೂಕಿನ ಮುದಗಾದಿಂದ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್ ತಾಂತ್ರಿಕ ಕಾರಣದಿಂದ ಗೋವಾ ಬೇತುಲ್ ಸಮೀಪ ಆಳ ಸಮುದ್ರದಲ್ಲಿ ಮುಳುಗಿದ ಘಟನೆ ಭಾನುವಾರ ನಡೆದಿದೆ.
ಮುದಗಾದ ದಿನೇಶ ಕಾಂಚನ್ ಮಾಲೀಕತ್ವದ ಶ್ರೀ ಅಮ್ಮ ಹೆಸರಿನ ಪರ್ಸೀನ್ ಬೋಟ್ ಮೀನುಗಾರಿಕೆ ತೆರಳಿದ ಸಂದರ್ಭದಲ್ಲಿ ಮುಳುಗಡೆಯಾಗಿದೆ. ಅದರಲ್ಲಿದ್ದ 22 ಮೀನುಗಾರರನ್ನು ಮುದಗಾದ ನರೇಶ ತಾಂಡೇಲ ಮಾಲೀಕತ್ವದ ಜಲರಾಜ ಹೆಸರಿನ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.
ಎರಡು ಬಲೆ ಹಾಗೂ ಬೋಟ್ ಸಂಪೂರ್ಣ ಮುಳುಗಿದ್ದು, ಕೋಟಿಗೂ ಅಧಿಕ ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಬೋಟ್‌ನ್ನು ದಡಕ್ಕೆ ಎಳೆತರುವ ಪ್ರಯತ್ನ ನಡೆದಿದೆ.