ಬಂದರು ಖಾಸಗಿಗೆ ವಹಿಸುವುದಕ್ಕೆ ಶಾಸಕ ಸೈಲ್‌ ಆಕ್ಷೇಪ

ಮೀನುಗಾರಿಕೆ ಸಚಿವ ಬಸವಂತಪ್ಪ ಕಾರವಾರ ಬಂದರಿಗೆ ಭೇಟಿ ನೀಡಿದರು.
ಮೀನುಗಾರಿಕೆ ಸಚಿವ ಬಸವಂತಪ್ಪ ಕಾರವಾರ ಬಂದರಿಗೆ ಭೇಟಿ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮೀನುಗಾರಿಕೆ ಸಚಿವ ಬಸವಂತಪ್ಪ ಭೇಟಿ
  • ಟಗ್‌ ಬೋಟ್‌ನಲ್ಲಿ ಸಂಚಾರ ಮಾಡಿದ ಸಚಿವರು
ಕಾರವಾರ: ಮೀನುಗಾರರ ಸಮಸ್ಯೆ ಮತ್ತು ಬಂದರು ಇಲಾಖೆಯ ವಿವಿಧ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಲಿದ್ದೇನೆ ಎಂದು ಮೀನುಗಾರಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಟಗ್ ಬೋಟ್‌ನಲ್ಲಿ ತೆರಳಿ ನಗರದ ಬೈತಖೋಲ್ ವಾಣಿಜ್ಯ ಬಂದರನ್ನು ವೀಕ್ಷಿಸಿದರು. ಸಾಗರ ಮಾಲಾ ಹಾಗೂ ರಾಜ್ಯ ಸರ್ಕಾರದ ನಿಽಯಲ್ಲಿ ಬಂದರಿನ ವಿಸ್ತರಣೆಯ ಕುರಿತು ಮಾಹಿತಿ ಪಡೆದುಕೊಂಡರು. ಮೀನುಗಾರರಿಗೆ ತೊಂದರೆಯಾಗದ ರೀತಿಯಲ್ಲಿ ವಿಸ್ತರಣೆ ಕಾಮಗಾರಿ ಕೈಗೊಳ್ಳುವಂತೆ ಅಽಕಾರಿಗಳಿಗೆ ಸೂಚಿಸಿದರು.

ಸೈಲ್ ಆಕ್ಷೇಪ

ವಾಣಿಜ್ಯ ಬಂದರನ್ನು ಖಾಸಗಿಗೆ ವಹಿಸಲಾಗಿರುವ ಮೆರಿಟೈಮ್ ಬೋರ್ಡ್ ನಿರ್ಧಾರಕ್ಕೆ ಶಾಸಕ ಸತೀಶ ಸೈಲ್ ಆಕ್ಷೇಪಿಸಿದರು. ಅವಾಸ್ತವಿಕ ಬೆಲೆಗೆ 30 ವರ್ಷಕ್ಕೆ ಲೀಸ್‌ಗೆ ನೀಡಲಾಗಿದೆ. ವಹಿವಾಟು ಮಾಡಲು ಹೆಚ್ಚಿನ ಸರಕುಗಳು ಇಲ್ಲಿಗೆ ಬರುತ್ತಿಲ್ಲ. ಪ್ರಸ್ತುತ ಪ್ರತಿ ಮೆಟ್ರಿಕ್ ಟನ್ ಸರಕು ನಿರ್ವಹಣೆಗೆ ಬಂದರಿನಲ್ಲಿ ಗರಿಷ್ಠ 100 ರೂ. ಪಡೆಯಬಹುದು. ಆದರೆ, 200 ರೂ.ಗಿಂತ ಹೆಚ್ಚಿನ ಬೆಲೆಗೆ ಪಡೆದಿರುವುದರಲ್ಲಿ ಕಂಪನಿಗಳ ಮೋಸದ ಜಾಲ ಅಡಗಿದೆ. ಮುಂದೆ ಸರ್ಕಾರಕ್ಕೆ ಇದರಿಂದ ಹಾನಿಯಾಗಲಿದೆ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರದ ಸಾಗರಮಾಲಾ ಹಾಗೂ ಸ್ಥಳೀಯ ನಿಽಯಲ್ಲಿ ವಾಣಿಜ್ಯ ಬಂದರು ವಿಸ್ತರಣೆಗೆ ಯಾವುದೇ ನ್ಯಾಯಾಲಯದ ತಡೆಯಾಜ್ಞೆ ಇಲ್ಲದಿದ್ದರೂ ಕಾಮಗಾರಿ ನಡೆಸದೇ ಇರುವ ಬಗ್ಗೆಯೂ ಸೈಲ್ ಆಕ್ಷೇಪಿಸಿದರು. ಯೋಜನೆಯ ಭಾಗವಾಗಿರುವ ಅಲೆ ತಡೆಗೋಡೆ ಕಾಮಗಾರಿಯನ್ನಾದರೂ ಪ್ರಾರಂಭಿಸಿ ಎಂದು ಸಲಹೆ ನೀಡಿದರು. ಮೆರಿಟೈಮ್ ಬೋರ್ಡ್ ಸಿಇಒ ಬಾಲಚಂದ್ರ ಮಾತನಾಡಿ, ರೈಲ್ವೆ ಸಂಪರ್ಕವಾದರೆ ಬಂದರಿನ ವಾಣಿಜ್ಯ ವಹಿವಾಟು ಹೆಚ್ಚಲಿದೆ ಎಂದರು.

ಸಚಿವರ ಎದುರೇ ಮಾತಿನ ಚಕಮಕಿ

ಮೀನುಗಾರರ ಸಂಕಷ್ಟ ಪರಿಹಾರ ನಿಽಯ ವಿಚಾರವಾಗಿ ಮೀನುಗಾರಿಕೆ ಸಚಿವರ ಎದುರೇ ಶಾಸಕ ಸತೀಶ ಸೈಲ್ ಹಾಗೂ ಕಾಂಗ್ರೆಸ್ ಮೀನುಗಾರರ ಘಟಕದ ಮುಖಂಡ ಗಣಪತಿ ಮಾಂಗ್ರೆ ಮಾತಿನ ಚಕಮಕಿ ನಡೆಸಿಕೊಂಡ ಘಟನೆ ಮಂಗಳವಾರ ನಡೆಯಿತು. ಮೀನುಗಾರರಿಗೆ ನೀಡುವ ಡೀಸೆಲ್ ಹಾಗೂ ಸೀಮೆ ಎಣ್ಣೆಯಲ್ಲಿ ಸೆಸ್ ಕಡಿತ ಮಾಡಿ, ಅದರಿಂದ ಮೀನುಗಾರರ ಸಂಕಷ್ಟ ನಿಧಿ ಸಂಗ್ರಹಿಸಲಾಗುತ್ತದೆ. ಅದನ್ನು ಬೇರೆಯವರಿಗೆ ನೀಡುವುದಕ್ಕೆ ನಮ್ಮ ಆಕ್ಷೇಪವಿದೆ ಎಂದು ಗಣಪತಿ ಮಾಂಗ್ರೆ ಹೇಳಿದರು. ಅದಕ್ಕೆ ಸೈಲ್ ಆಕ್ಷೇಪಿಸಿ ಎಲ್ಲ ಸಮುದಾಯದವರಿಗೆ ಸರ್ಕಾರದ ಸೌಲಭ್ಯ ಸಿಗಬೇಕು ಎಂದು ವಾದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net