ಶಿರಸಿ: ಸಾಮಾನ್ಯವಾಗಿ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಕೆಲಸದ ದಿನಗಳಲ್ಲೂ ನಿಗದಿತ ಸಮಯಕ್ಕೆ ಸಿಗುವುದು ಕಷ್ಟ ಎಂಬ ಮಾತಿದೆ. ಆದರೆ, ಶಿರಸಿ ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಭಾನುವಾರ ಸಹ ಕಚೇರಿಗೆ ಆಗಮಿಸಿ, ಮಿನಿ ವಿಧಾನಸೌಧದ ಆವರಣ ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.
ಪಟ್ಟರಾಜ ಗೌಡ್ರು ಶಿರಸಿ ತಹಸೀಲ್ದಾರ್ ಆದ ಬಳಿಕ ತಮ್ಮ ಕಾರ್ಯವೈಖರಿ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಸಿಬ್ಬಂದಿಯ ಸಮಯ ಪಾಲನೆ ಸಲುವಾಗಿ ಕಚೇರಿ ಆರಂಭಕ್ಕೂ ಮುನ್ನ ಎಲ್ಲರೂ ಸೇರಿ ರಾಷ್ಟ್ರಗೀತೆ ಹಾಡುವ ಮೂಲಕ ಗಮನ ಸೆಳೆದಿದ್ದರು. ಇದರಿಂದಾಗಿ ಸಿಬ್ಬಂದಿ ರಾಷ್ಟ್ರಗೀತೆ ಆರಂಭಗೊಳ್ಳುವುದಕ್ಕೂ ಮುನ್ನ ಕಚೇರಿಯಲ್ಲಿರುತ್ತಿದ್ದರಲ್ಲದೇ, ಸಾರ್ವಜನಿಕರ ಸೇವೆಗೂ ಲಭ್ಯವಾಗುತ್ತಿದ್ದರು. ಈಗ ಕಚೇರಿಯ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಇತರರಿಗೂ ಮಾದರಿಯಾಗಿದ್ದಾರೆ.