ACF ಮದನ ನಾಯಕ ಹತ್ಯೆ ಮಾಡಿದವನಿಗೆ 10 ವರ್ಷ ಜೈಲು ಶಿಕ್ಷೆ

ACF Madan Nayak
ACF Madan Nayak
Published on

ಪ್ರಮುಖ ಮುಖ್ಯಾಂಶಗಳು

  • ಅಪರಾಧಿಗಳಲ್ಲಿ ಹೆಚ್ಚಿನವರು ಸರ್ಕಾರಿ ನೌಕರರು
  • ಅರಣ್ಯಾಧಿಕಾರಿಯೊಬ್ಬರ ಹತ್ಯೆ ಮಾಡಿದ ಉತ್ತರ ಕನ್ನಡದ ಎರಡನೇ ಪ್ರಕರಣ
  • ವಿದೇಶದಿಂದ ವಿಡಿಯೋ ಕಾಲ್‌ ಮೂಲಕ ಸಾಕ್ಷಿ ನೀಡಿದ ಮದ ನಾಯಕ ಪುತ್ರಿ
ಕಾರವಾರ/ಯಲ್ಲಾಪುರ: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಅರಣ್ಯಾಧಿಕಾರಿ ದಾಂಡೇಲಿ ACF ಮದನ ನಾಯಕ ಹತ್ಯೆ ಪ್ರಕರಣದಲ್ಲಿ ಅಪರಾಧಿಗೆ 13 ವರ್ಷಗಳ ಬಳಿಕ ಶಿಕ್ಷೆ ಪ್ರಕಟವಾಗಿದೆ.
ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಶುಕ್ರವಾರ ಅಪರಾಧಿ ಬಾಗಲಕೋಟೆಯ ಪ್ರಶಾಂತ ಲಮಾಣಿ ಎಂಬಾತನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿದ್ದು, ಉಳಿದ ಏಂಟು ಅಪರಾಧಿಗಳಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಏಳು ಜನರಿಗೆ ತಲಾ 1 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಕಿರಣ ಕಿಣಿ ಆದೇಶಿಸಿದ್ದಾರೆ. ಮುಖ್ಯ ಆರೋಪಿಯು ಎಸಿಎಫ್‌ ಮದನ ನಾಯಕ ಕುಟುಂಬದವರಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶ ಮಾಡಿದ್ದಾರೆ.

ಸಿಐಡಿಯಿಂದ ತನಿಖೆ

2012 ಮೇ 6 ರಂದು ದಾಂಡೇಳಿ ಕಾಳಿ ನದಿ ದಂಡೆಯ ಮೇಲಿರುವ ದಾಂಡೇಲಪ್ಪ ದೇವಸ್ಥಾನ ಸಮೀಪ ಘಟನೆ ನಡೆದಿತ್ತು. ಬಾಗಲಕೋಟೆ ಮೂಲದ ಆನಂದ ರೂಪಸಿಂಗ್ ನಾಯಕ, ಸುರೇಶ ಶಂಕ್ರಪ್ಪ ನಾಯಕ, ಶೈಲಜಾ ಚೌಹಾಣ್, ಅರವಿಂದ ಬಾಬು ಚೌಹಾಣ್, ಧನಬಾಯಿ ರೂಪಸಿಂಗ್ ನಾಯಕ, ಕೆ.ಮಾಧುರಿ ಜಯಸಿಂಗ್ ರಾಠೋಡ್, ರಾಧಾ ಸುರೇಶ ನಾಯಕ, ಪ್ರಶಾಂತ ಲಮಾಣಿ ಹಾಗೂ ಮಲ್ಲಿಕಾರ್ಜುನ ಚೌಹಾಣ್ ಎಂಬುವವರು ಪ್ರವಾಸಕ್ಕೆ ಬಂದಿದ್ದರು. ನದಿ ಪಕ್ಕ ಅಡುಗೆ ಮಾಡಿ, ಮಾಂಸದೂಟ ಮಾಡಿದ್ದು, ಉಳಿದ ಮಾಂಸವನ್ನು ಮಾಂಸವನ್ನು ಕಾಳಿ ನದಿಯಲ್ಲಿರುವ ಮೊಸಳೆಗಳಿಗೆ ಎಸೆಯುತ್ತಿದ್ದರು. ಇದೇ ವೇಳೆಗೆ ತಮ್ಮ ಕುಟುಂಬದೊಂದಿಗೆ ಬಂದ ಎಸಿಎಫ್ ಮದನ ನಾಯಕ ಅವರು ಮೊಸಳೆಗಳಿಗೆ ಮಾಂಸ ಎಸೆಯಬೇಡಿ ಎಂದು ಬುದ್ಧಿವಾದ ಹೇಳಿದ ಕಾರಣಕ್ಕೆ ಗಲಾಟೆ ಶುರುವಾಗಿತ್ತು.
ಎಸಿಎಫ್ ಮೇಲೆ ಪ್ರವಾಸಿಗರ ತಂಡ ಹಲ್ಲೆ ಮಾಡಿತ್ತು. ದಾಳಿ ಬಿಡಿಸಲು ಹೋದ ಅರಣ್ಯಾಧಿಕಾರಿ ಪತ್ನಿ,ಸುಮತಿ ನಾಯಕ, ಪುತ್ರಿ ಮೇಘಾ ನಾಯಕ, ಪುತ್ರ ಶಿರಿರ ನಾಯಕ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಮದನ ನಾಯಕ ಅವರ ಮೇಲೆ ಪ್ರವಾಸಿಗ ಪ್ರಶಾಂತ ಲಮಾಣಿ ಹಾಗೂ ಮಲ್ಲಿಕಾರ್ಜುನ ಚೌಹಾಣ ಕಲ್ಲು ಎಸೆದಿದ್ದರು. ತಲೆಗೆ ಪೆಟ್ಟು ಬಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮದನ ನಾಯಕ ಅವರನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ಅವರು ಮೇ 8 ರಂದು ಮೃತಪಟ್ಟಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಮದನ ನಾಯಕ ಅವರಿಗೆ ಚಿಕಿತ್ಸೆ ಕೊಡಿಸುವಲ್ಲಿ ಅವರ ಕುಟುಂಬ ತಲ್ಲೀನವಾಗಿತ್ತು. ಇತ್ತ ಪ್ರವಾಸಿಗರ ತಂಡ ದಾಂಡೇಲಿ ಪೊಲೀಸ್ ಠಾಣೆಗೆ ತೆರಳಿ ಮದನ ನಾಯಕ ಅವರ ಮೇಲೆ ಜಾತಿ ನಿಂದನೆ ದೂರು ದಾಖಲಿಸಿತ್ತು. ಅರಣ್ಯಾಧಿಕಾರಿ ಹತ್ಯೆ ನಡೆದರೂ ಪೊಲೀಸರು ಕ್ರಮ ವಹಿಸಿಲ್ಲ ಎಂದು ಆಕ್ಷೇಪ ಕೇಳಿ ಬಂದಿತ್ತು. ಆರೋಪಿಗಳಲ್ಲಿ ಹೆಚ್ಚಿನವರು ಸರ್ಕಾರಿ ನೌಕರರಾಗಿದ್ದು, ಅವರ ಪ್ರಭಾವದಿಂದ ಪ್ರಕರಣ ಮುಚ್ಚಿಹಾಕಲಾಗುತ್ತಿದೆ ಎಂದು ಮದನ ನಾಯಕ ಕುಟುಂಬ ಮಾಧ್ಯಮಗಳ ಎದುರು ಗೋಳು ತೋಡಿಕೊಂಡಿತ್ತು. ನಂತರ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಹಿರಿಯ ಅಧಿಕಾರಿ ಅಶೋಕ ಕುಮಾರ್ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮದನ ನಾಯಕ ಅವರದ್ದು ಉದ್ದೇಶಪೂರ್ವಕ ಕೊಲೆ ಎಂದು ನ್ಯಾಯಾಲಯದ ವಿಚಾರಣೆ ವೇಳೆ ಸಾಬೀತಾಗಿಲ್ಲ. ಗಲೆಟೆಯಲ್ಲಿ ಕಲ್ಲು ಎಸೆದಾಗ ಅದು ತಾಗಿ ಅವರು ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಕಲ್ಲು ಎಸೆದ ಇಬ್ಬರಿಗೆ ಶಿಕ್ಷೆ ಪ್ರಕಟವಾಗಿದೆ. ಆದರೆ, ಅದರಲ್ಲಿ ಮಲ್ಲಿಕಾರ್ಜುನ ಚೌಹಾಣ್ ಮೃತಪಟ್ಟಿದ್ದು, ಒಬ್ಬನೇ ಅಪರಾಧಿಗೆ ಶಿಕ್ಷೆಯಾಗಿದೆ. ಉಳಿದವರಿಗೆ ದಂಡ ವಿಧಿಸಲಾಗಿದೆ.

ಯಲ್ಲಾಪುರದಲ್ಲಿ ತೀರ್ಪು

ಮದನ ನಾಯಕ ಪ್ರಕರಣ ಮೊದಲು ಕಾರವಾರ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಶಿರಸಿಯಲ್ಲಿ 1 ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಪ್ರಾರಂಭವಾದ ಬಳಿಕ ಅಲ್ಲಿಗೆ ಪ್ರಕರಣ ವರ್ಗಾವಣೆಯಾಗಿತ್ತು. ಆದರೆ, ದಾಂಡೇಲಿಯಿಂದ ಶಿರಸಿ ದೂರವಾಗಲಿದೆ ಎಂಬ ಕಾರಣಕ್ಕೆ ವಿಚಾರಣೆಯನ್ನು ಯಲ್ಲಾಪುರ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆಯಂತೆ ಸ್ಥಳಾಂತರಿಸಲಾಗಿತ್ತು.

ಅಭಿಯೋಜಕರಿಗೆ ಅಭಿನಂದನೆ

ಅರಣ್ಯಾಧಿಕಾರಿಯೊಬ್ಬರನ್ನು ಹತ್ಯೆ ಮಾಡಿದ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸರ್ಕಾರಿ ಅಭಿಯೋಜಕ ರಾಜೇಶ ಎಂ.ಮಳಗೀಕರ್‌ ಅವರಿಗೆ ಅರಣ್ಯಾಧಿಕಾರಿಗಳು ಅಭಿನಂದಿಸಿದ್ದಾರೆ. ಅವರ ಕಚೇರಿಗೆ ತೆರಳಿ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.
"

ಪ್ರಮುಖ ಪ್ರಕರಣವೊಂದರಲ್ಲಿ ಅಪರಾಧಿಗೆ ಶಿಕ್ಷೆ ಕೊಡಿಸಿದ ಹಾಗೂ ಸಮಾಧಾನವಿದೆ.

ರಾಜೇಶ ಎಂ.ಮಳಗೀಕರ್‌ ಸರ್ಕಾರಿ ಅಭಿಯೋಜಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net