money ಹಣ ಸಂಪಾದನೆಯಿಂದ ಶಾಂತಿ ಸುಖ ದೊರೆಯುವುದಿಲ್ಲ

ಭಟ್ಕಳದ ಗಣಪತಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ.
ಭಟ್ಕಳದ ಗಣಪತಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿ ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ.
Published on
ಭಟ್ಕಳ: ಆಚಾರ, ವಿಚಾರ ಹಾಗೂ ಸಂಸ್ಕಾರವನ್ನು ಬಿಟ್ಟು ನಡೆಸುವ ಜೀವನಕ್ಕೆ ಯಾವುದೇ ಅರ್ಥವಿಲ್ಲ. ಸುಖಕ್ಕಾಗಿ ಹಣ money ಸಂಪಾದನೆ ಮಾಡುತ್ತೇವೆ. ಆದರೆ, ಹಣ ಸಂಪಾದನೆಯಿಂದ ಮಾತ್ರ ಶಾಂತಿ ಮತ್ತು ನಿಜವಾದ ಸುಖ ದೊರೆಯುವುದಿಲ್ಲ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಗಣಪತಿ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ಮಂಗಳವಾರ ಆಗಮಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಇಂದಿನ ಸಮಾಜದಲ್ಲಿ ಮಕ್ಕಳಿಗೆ ಕೇವಲ ಕಲಿ, ಕಲಿ ಎಂದು ಹೇಳುವುದರಲ್ಲೇ ಸೀಮಿತವಾಗಿದ್ದೇವೆ. ಆದರೆ, ಶಿಕ್ಷಣದ ಜೊತೆಗೆ ಸಮಾಜ ಸೇವೆ, ಕುಟುಂಬದ ಹೊಣೆಗಾರಿಕೆ ಮತ್ತು ಮೌಲ್ಯಾಧಾರಿತ ಜೀವನಕ್ಕೆ ಮಕ್ಕಳನ್ನು ಪ್ರೇರೇಪಿಸುವ ಪರಿಪಾಠ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೇವಲ ಶಿಕ್ಷಿತರಾಗುವುದರಿಂದ ಸಮಾಜದ ಪ್ರಗತಿ ಸಾಧ್ಯವಿಲ್ಲ. ಶಿಕ್ಷಣದೊಂದಿಗೆ education ಭಾವನೆ, ಬದ್ಧತೆ ಮತ್ತು ಸಮಾಜಮುಖಿ ಚಿಂತನೆ ಅಗತ್ಯ. ಮಕ್ಕಳನ್ನು ಸಮಾಜದ ಕಾರ್ಯಗಳಲ್ಲಿ ತೊಡಗಿಸಬೇಕು. ಕುಟುಂಬದ ಜವಾಬ್ದಾರಿಯನ್ನು ಅರಿಯುವಂತೆ ಮಾಡಬೇಕು. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆಯೂ ಮಹತ್ವದ್ದಾಗಿದೆ. ನಾವೆಲ್ಲ ಒಂದೇ ಎಂಬ ಭಾವನೆ ಮೊದಲು ಮೂಡಬೇಕು. ತಾಯಿಗೆ ಗೌರವ ಸಲ್ಲಿಸುವ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು. ತಾಯಿಯ ಗೌರವದಿಂದಲೇ ಕುಟುಂಬ, ಸಮಾಜ ಮತ್ತು ರಾಷ್ಟ್ರದ ಸುಸ್ಥಿರತೆ ಸಾಧ್ಯ ಎಂದರು.
ಇದಕ್ಕೂ ಮೊದಲು ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಭಕ್ತರಿಗೆ ಆಶೀರ್ವಚನ ನೀಡಿ, ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ಮಹತ್ವ ವಿವರಿಸಿದರು. ಉಭಯ ಶ್ರೀಗಳಿಗೆ ಭಟ್ಕಳ ಸರ್ಕಲ್‌ನಿಂದ ಅರ್ಬನ್ ಬ್ಯಾಂಕ್‌ವರೆಗೆ ಬೈಕ್ ರ‌್ಯಾಲಿಯ ಮೂಲಕ, ಬಳಿಕ ಅಲ್ಲಿಂದ ದೇವಸ್ಥಾನದವರೆಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ದೈವಜ್ಞ ಸಮಾಜದ ವತಿಯಿಂದ ಗುರುಗಳಿಗೆ ಗುರುಕಾಣಿಕೆ ಅರ್ಪಿಸಿ, ಸಮಾಜದ ಮುಖಂಡರಿಂದ ಪಾದಪೂಜೆ ನೆರವೇರಿಸಲಾಯಿತು. ಸೌಮ್ಯ ದಿನೇಶ ಶೇಟ್, ಸುಮಿತ ಹೃಷಿಕೇಶ ಕೊಲ್ಲೆ, ಅನಿತಾ ರಾಜರಾಮ ಶೇಟ್, ಅನಸೂಯಾ ರಾಘವೇಂದ್ರ ಶೇಟ್ ಹಾಗೂ ಪರಿಮಳ ರಾಜಶೇಖರ ಶೇಟ್ ಭಕ್ತಿಗೀತೆ ಮತ್ತು ಪ್ರಾರ್ಥನೆ ಹಾಡಿದರು. ದೀಪಾ ಕೊಲ್ಲೆ, ವಿನಯ ಶೇಟ್ ಹಾಗೂ ನರ್ಮದಾ ಶೇಟ್ ಸ್ವಾಗತ ಗೀತೆ ಹಾಡಿದರು. ಸುನೀಲ ರತ್ನಾಕರ ಶೇಟ್ ಸ್ವಾಗತಿಸಿದರು. ಗುರುನಾಥ ಕೊಲ್ಲೆ ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಮಳ ಶೇಟ್ ವಂದಿಸಿದರು. ಶಿಕ್ಷಕ ಶ್ರೀಧರ ಶೇಟ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net