ಅಡಿಕೆ ಸಾಗಾಟಕ್ಕೆ ಮಹಾ ಕಿರಿಕಿರಿ areca nut

ಶಿರಸಿ ಅಡಕೆ (Areca nut) ಮಾರುಕಟ್ಟೆಯ ಸಾಂದರ್ಭಿಕ ಚಿತ್ರ
ಶಿರಸಿ ಅಡಕೆ (Areca nut) ಮಾರುಕಟ್ಟೆಯ ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರ ಭಾರತದಲ್ಲಿ ಶಿರಸಿ ಸುಪಾರಿಗೆ ಬಹು ಬೇಡಿಕೆ
  • ಸೊಲ್ಲಾಪುರದಲ್ಲಿ ಲಾರಿ ತಡೆಯುತ್ತಿರುವ ಎಫ್‌ಡಿಎ ಅಧಿಕಾರಿಗಳು
  • ಆಹಾರ ಸುರಕ್ಷತೆ ಉಲ್ಲಂಘನೆ ನೆಪ
ಶಿರಸಿ: ಉತ್ತರ ಭಾರತಕ್ಕೆ ಸಾಗುತ್ತಿದ್ದ ಅಡಿಕೆ (Areca Nut) ಲಾರಿಗಳಿಗೆ ಈಗ ಮಹಾರಾಷ್ಟ್ರ ರಾಜ್ಯ ಕಿರಿಕಿರಿ ಆರಂಭಿಸಿದೆ.
ಕಳೆದ ಕೆಲ ದಿನಗಳಿಂದ ಸೊಲ್ಲಾಪುರದಲ್ಲಿ ಅಡಿಕೆ ತುಂಬಿದ ಲಾರಿಗಳನ್ನು ವಶಕ್ಕೆ ಪಡೆಯಲಾಗುತ್ತಿದ್ದು, ಈಗ ಲಾರಿಗಳು ಅಡಿಕೆ ಸಾಗಾಟ ಸ್ಥಗಿತಗೊಳಿಸಬೇಕಾದ ಸ್ಥಿತಿ ಬಂದಿದೆ.
ಹೌದು, ಜಿಐ ಟ್ಯಾಗ್ ಹೊಂದಿರುವ ಶಿರಸಿ ಅಡಿಕೆಗೆ ಉತ್ತರ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ. ವಿಶೇಷವಾಗಿ ಉತ್ತರ ಪ್ರದೇಶ ಹಾಗೂ ರಾಜಸ್ಥಾನ, ಗುಜರಾತ್‌ಗೆ ಈ ಅಡಿಕೆ ಸಾಗಾಟವಾಗುತ್ತದೆ.
ಶಿರಸಿಯಲ್ಲಿ ಸಹಕಾರಿ ಸಂಘಗಳ ಮೂಲಕ ಅಡಿಕೆ ಖರೀದಿಸಿದ ವರ್ತಕರು, ಟಿಎಸ್‌ಎಸ್, ಟಿಎಂಎಸ್, ಕ್ಯಾಂಪ್ಕೋ ಸೇರಿದಂತೆ ಸಹಕಾರಿ ಸಂಘಗಳು ಲಾರಿಗಳ ಮೂಲಕ ಉತ್ತರದ ರಾಜ್ಯಗಳಿಗೆ ಅಡಿಕೆ ಕಳಿಸುತ್ತಾರೆ.
ಬಹು ಹಿಂದಿನಿಂದಲೂ ಶಿರಸಿ ಅಡಿಕೆ ಹೊತ್ತ ಲಾರಿಗಳು ಸೊಲ್ಲಾಪುರ ಮೂಲಕ ಮಹಾರಾಷ್ಟ್ರ ರಾಜ್ಯ ಪ್ರವೇಶಿಸಿ, ಅಲ್ಲಿಂದ ನಾಗ್ಪುರ ಮಾರ್ಗವಾಗಿ ಉತ್ತರ ರಾಜ್ಯಗಳಿಗೆ ತೆರಳುತ್ತಿದ್ದವು.
ಆದರೆ, ಕಳೆದೊಂದು ವಾರದಿಂದ ಮಹಾರಾಷ್ಟ್ರ ಸೊಲ್ಲಾಪುರದ ಆಹಾರ ಮತ್ತು ಔಷಧ ಆಡಳಿತ ಅಧಿಕಾರಿಗಳು (ಎಫ್‌ಡಿಎ) 40ಕ್ಕೂ ಅಧಿಕ ಅಡಿಕೆ ಲಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಅಡಿಕೆ ಮಾನದಂಡಕ್ಕೆ ಅನುಗುಣವಾಗಿಲ್ಲ. ಅಡಿಕೆಗೆ ರೆಡ್ ಆಕ್ಸ್ತ್ರೈಡ್ ಬಳಸಿದಂತೆ ಕಾಣಿಸುತ್ತಿದೆ.
ಇದು ಆಹಾರ ಸುರಕ್ಷತೆಯ ಸ್ಪಷ್ಟ ಉಲ್ಲಂಘನೆ ಹಾಗೂ ಈ ಲಾರಿಗಳಲ್ಲಿ ವಿದೇಶದ ಕಳಪೆ ಮಟ್ಟದ ಅಡಿಕೆಯೂ ಮಿಶ್ರಣವಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ಪರೀಕ್ಷೆ ಆಗಬೇಕಿದೆ’ ಎಂದು ಅಲ್ಲಿಯ ಅಧಿಕಾರಿಗಳು ವಾದಿಸತೊಡಗಿದ್ದಾರೆ.
ಎಫ್‌ಡಿಎ ಆಹಾರ ಪರೀಕ್ಷಾ ಪ್ರಯೋಗಾಲಯ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿದ್ದು, ಅಲ್ಲಿಗೆ ಕಳುಹಿಸಿ ಪರೀಕ್ಷೆ ಮಾಡಿಸುತ್ತೇವೆ. ಸರಿಯಿದ್ದರೆ ಲಾರಿ ಬಿಡುತ್ತೇವೆ ಎನ್ನುತ್ತಿದ್ದಾರೆ ಅಲ್ಲಿಯ ಅಧಿಕಾರಿಗಳು.
ಈ ಕುರಿತಂತೆ ನಗರದ ಸಹಕಾರಿ ಸಂಘಗಳ ಪ್ರಮುಖರು ಮಹಾರಾಷ್ಟ್ರದ ಅಧಿಕಾರಿಗಳನ್ನು ಅಲ್ಲಿಯ ಸಂಸದ, ಸಚಿವರ ಮೂಲಕ ಸಂಪರ್ಕಿಸಿದ್ದಾರೆ. ಔರಂಗಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಿದರೆ ಪರೀಕ್ಷೆ ಪೂರ್ಣಗೊಂಡು ವರದಿ ಬರಲು ಕನಿಷ್ಠ 10ರಿಂದ 12 ದಿನಗಳ ಅವಧಿ ಬೇಕಾಗುತ್ತದೆ.
ಅಲ್ಲಿಯವರೆಗೂ ಉತ್ತರ ಭಾರತಕ್ಕೆ ಅಡಿಕೆ ಪೂರೈಸಲು ವಿಳಂಬವಾಗಲಿದೆ. ಅಲ್ಲದೆ, ಪ್ರತಿ ಲಾರಿಯೂ 24ರಿಂದ 28 ಟನ್‌ಗಳಷ್ಟು ಅಡಿಕೆಯನ್ನು ತುಂಬಿಕೊಂಡಿದ್ದು, ಪ್ರತಿ ಲಾರಿಯಲ್ಲಿ ವ್ಯಾಪಾರಸ್ಥರ 1 ಕೋಟಿ ರೂ. ನಷ್ಟು ಬಂಡವಾಳವಿದೆ.
ಅಡಿಕೆ ಪೂರೈಸಲು ವಿಳಂಬವಾದರೆ ಅಥವಾ ಮಹಾರಾಷ್ಟ್ರದ ವಾತಾವರಣಕ್ಕೆ ಅಡಿಕೆಗೆ ಹಾನಿಯಾದರೆ ವ್ಯಾಪಾರಸ್ಥರು, ಸಂಘ-ಸಂಸ್ಥೆಗಳು ನಷ್ಟ ಅನುಭವಿಸಬೇಕಾಗುತ್ತದೆ.
ರಾಜ್ಯದ ಮೈಸೂರಿನಲ್ಲಿಯೂ ಸಹ ಎಫ್‌ಡಿಎ ಪ್ರಯೋಗಾಲಯವಿದೆ. ಇಲ್ಲಿಗೆ ಕಳಿಸಿ ಪರೀಕ್ಷೆ ಮಾಡಿಸಿ, ಉಂಟಾಗಲಿರುವ ಹಾನಿ ತಪ್ಪಿಸಿ ಎಂದು ಇಲ್ಲಿಯ ಸಹಕಾರಿ ಸಂಘಗಳು ವಿನಂತಿಸಿಕೊಂಡಿದ್ದರೂ ಅಲ್ಲಿಯ ಅಧಿಕಾರಿಗಳು ಮಾತ್ರ ಕಿವಿಗೆ ಹಾಕಿಕೊಂಡಿಲ್ಲ.
ಇನ್ನು ಮಹಾರಾಷ್ಟ್ರ ರಾಜ್ಯಕ್ಕೆ ಪ್ರವೇಶಿಸದೇ ಉತ್ತರ ಭಾರತಕ್ಕೆ ಅಡಿಕೆ ಲಾರಿಗಳನ್ನು ಕಳಿಸುವ ಯತ್ನ ಇನ್ನಷ್ಟು ದುಬಾರಿಯಾಗಲಿವೆ.
ಅಡಿಕೆ ಲಾರಿಗಳು ತೆಲಂಗಾಣ, ಛತ್ತೀಸ್‌ಗಢ ರಾಜ್ಯಕ್ಕೆ ಹೆಚ್ಚುವರಿಯಾಗಿ ತೆರಿಗೆ ತುಂಬುವುದರೊಂದಿಗೆ ಹೆಚ್ಚಿನ ಇಂಧನ ಖರ್ಚನ್ನೂ ಭರಿಸಬೇಕಾಗುತ್ತಿದೆ.
ಈ ಕಾರಣದಿಂದಾಗಿ ಕಳೆದ ಒಂದು ವಾರದಿಂದ ಶಿರಸಿಯ ಅಡಿಕೆ ಲಾರಿಗಳು ಉತ್ತರ ಭಾರತದತ್ತ ಪ್ರಯಾಣ ಬೆಳೆಸುತ್ತಲೇ ಇಲ್ಲ.

ವ್ಯಾಪಾರ ಸ್ಥಗಿತಕ್ಕೆ ಚಿಂತನೆ

ಉತ್ತರ ಭಾರತಕ್ಕೆ ಅಡಿಕೆ ಕಳಿಸಲು ಸಾಧ್ಯವಾಗದಿರುವುದು ಅಡಕೆಯ ದರ ಕುಸಿತಕ್ಕೆ ಕಾರಣವಾಗುವ ಆತಂಕ ತಂದೊಡ್ಡಿದೆ. ಬಂಡವಾಳ ಕೊರತೆ ಅನುಭವಿಸುವ ವರ್ತಕರು ಟೆಂಡರ್ ಪ್ರಕ್ರಿಯೆಯಲ್ಲಿ ಕಡಿಮೆ ದರಕ್ಕೆ ಬರೆಯುವ ಸಾಧ್ಯತೆ ಇದೆ.
ಅಡಿಕೆ ದರ ಇಳಿಮುಖವಾದರೆ ರೈತರೂ ಸಹ ಆತಂಕಗೊಂಡು ತಮ್ಮ ಈ ವರ್ಷದ ಅಲ್ಪ ಬೆಳೆಯನ್ನೂ ಮಾರಾಟ ಮಾಡಿಕೊಳ್ಳುವ ಧಾವಂತಕ್ಕೆ ಒಳಗಾಗಿ, ಮಾರುಕಟ್ಟೆಯಲ್ಲಿ ದರ ಕುಸಿತ ನಿರಂತರವಾಗಿ ನಡೆಯುವ ಸಾಧ್ಯತೆ ಇರುತ್ತದೆ.
ಈ ಪರಿಸ್ಥಿತಿ ತಪ್ಪಿಸಲು ಸಾರಿಗೆ ವ್ಯವಸ್ಥೆ ಸಮರ್ಪಕವಾಗುವವರೆಗೆ ವ್ಯಾಪಾರ, ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸುವ ಬಗ್ಗೆ ಯೋಚಿಸತೊಡಗಿವೆ.
ಈ ಕುರಿತಂತೆ ವ್ಯಾಪಾರಸ್ಥರನ್ನೊಳಗೊಂಡ ಸಭೆಯನ್ನು ಶೀಘ್ರ ಕರೆದು ಚರ್ಚಿಸಲು ನಗರದ ಅಡಕೆ ವಹಿವಾಟು ನಡೆಸುವ ಸಂಘಗಳ ಮುಖ್ಯಸ್ಥರು ನಿರ್ಧರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಅಡಕೆ ಲಾರಿಗಳನ್ನು ವಶಕ್ಕೆ ಪಡೆಯುತ್ತಿರುವುದು ಸ್ಥಳೀಯ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಬಗ್ಗೆ ಕೇಂದ್ರ ಸಚಿವರನ್ನು ನಿಯೋಗದಲ್ಲಿ ಭೇಟಿಯಾಗಿ ಚರ್ಚಿಸುವ ಬಗ್ಗೆ ಸಿದ್ಧತೆ ನಡೆಸುತ್ತಿದ್ದೇವೆ.

— ಗೋಪಾಲಕೃಷ್ಣ ವೈದ್ಯ ಅಧ್ಯಕ್ಷರು, ಟಿಎಸ್‌ಎಸ್ ಶಿರಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net