ಗೋಕರ್ಣ:ಗೋಕರ್ಣದಲ್ಲಿ ಗುರುವಾರ ಸಂಜೆಯಿಂದ ಶುಕ್ರವಾರ ಮಧ್ಯಾಹ್ನದವರೆಗೆ ಬರೊಬ್ಬರಿ 17 ತಾಸು ಅಖಂಡವಾಗಿ ಸುರಿದ ಭಾರಿ ಮಳೆಗೆ (Hevy Rain) ಪುರಾಣ ಖ್ಯಾತ ಶ್ರೀ ಮಹಾಬಲೇಶ್ವರ ಆತ್ಮಲಿಂಗ ಮತ್ತು ಗರ್ಭಗುಡಿಯಲ್ಲಿ ನೀರು ನಿಲ್ಲುವಂತಾಯಿತು.
ಬೆಳಗ್ಗೆ ಗರ್ಭಗುಡಿಯ ಬಾಗಿಲು ತೆರೆಯುತ್ತಿದ್ದಂತೆ ಗರ್ಭಗುಡಿಯಲ್ಲಿ ನೀರು ನಿಂತಿರುವುದು ಕಂಡು ಬಂದಿತು.
ಆತ್ಮಲಿಂಗಕ್ಕೆ ಪೂಜೆ ಮಾಡಿದ ತೀರ್ಥ ಮತ್ತು ಮಂದಿರದ ವಿಶಾಲ ಒಳ ಪ್ರಾಂಗಂಣದಲ್ಲಿ ಸುರಿದ ನೀರು ಎರಡೂ ಒಟ್ಟಾಗಿ ಸೋಮಸೂತ್ರ ನಾಲೆಯ ಮೂಲಕ ಸಮುದ್ರ ಬಳಿಯ ಸಂಗಮ ನಾಲೆಗೆ ಹೋಗಿ ಸೇರುತ್ತದೆ.
ಗುರುವಾರ ರಾತ್ರಿಯ ತನಕದ ಪೂಜಾತೀರ್ಥ ಸುಸೂತ್ರವಾಗಿ ಸೋಮಸೂತ್ರದ ಮೂಲಕ ಸಂಗಮ ನಾಲೆಯನ್ನು ಸೇರಿತ್ತು. ಈ ಹಿನ್ನೆಲೆಯಲ್ಲಿ ಮಂದಿರ ಒಳಗೆ ರಾತ್ರಿ ಸುರಿದ ಮಳೆ ನೀರು ಮಾತ್ರ ಸೋಮಸೂತ್ರದಲ್ಲಿ ಹೊರ ಹೋಗದೆ ಒಳಗೆ ಸಂಗ್ರಹಗೊಂಡಿತ್ತು.
ಕಾಮಗಾರಿ ವೈಲ್ಯ:
ಸಂಗಮ ನಾಲೆಯ ಕಲ್ಮಷ ನೀರು ಗರ್ಭಗುಡಿಗೆ ನುಗ್ಗಿ ಅಪವಿತ್ರಗೊಳಿಸದಂತೆ ತಡೆಯಲು ಸಣ್ಣ ನೀರಾವರಿ ಇಲಾಖೆ ಇತ್ತೀಚೆಗೆ ಕಾಮಗಾರಿ ಕೈಗೊಂಡು ಸೋಮಸೂತ್ರ ನಾಲೆ ಹೊರಗಿನ ಸಂಗಮ ನಾಲೆಯನ್ನು ಕೂಡುವ ಸ್ಥಳದಲ್ಲಿ ಹೊಸದಾಗಿ ಗೇಟ್ ಒಂದನ್ನು ಜೋಡಿಸಿತ್ತು.
ಆದರೆ, ಇತ್ತೀಚೆಗೆ ಅಳವಡಿಸಲಾದ ಕಬ್ಬಿಣದ ಗೇಟ್ ತಾಂತ್ರಿಕ ವೈಲ್ಯದಿಂದ ಸರಿಯಾಗಿ ಕಾರ್ಯ ನಿರ್ವಹಿಸದೆ ಗೇಟ್ ತೆರೆಯದಾಗಿ ಮಳೆ ನೀರು ಹೊರಕ್ಕೆ ಸಾಗದೆ ಗರ್ಭಗುಡಿಯಲ್ಲಿ ನೀರು ಜಮಾಯಿಸಿತು ಎನ್ನಲಾಗುತ್ತಿದೆ.
ಸ್ವಯಂ ಕಾರ್ಯ ನಿರ್ವಹಿಸುವ ಈ ಗೇಟ್ ಮಂದಿರದ ಎಲ್ಲ ನೀರು ಹೊರ ಹೋಗಲು ಮಾತ್ರ ಅವಕಾಶ ಮಾಡಿಕೊಟ್ಟು ಹೊರಗಿನ ನೀರು ಒಳಕ್ಕೆ ಬರದಂತೆ ನಿರ್ಬಂಧಿಸುವ ಕಾರ್ಯಕ್ಕಾಗಿ ನಿರ್ಮಿಸಲಾಗಿದೆ.
ಆದರೆ, ಇಲಾಖೆ ಸಿದ್ಧಪಡಿಸಿ ಜೋಡಿಸಿರುವ ಕಬ್ಬಿಣದ ಗೇಟ್ ಭಾರಿ ಭಾರವಾಗಿರುವುದರಿಂದ ಅದನ್ನು ತೆರೆಯಲು ಒಳಗಿನ ನೀರಿನ ಒತ್ತಡ ಸಾಕಾಗದೆ ಗೇಟ್ ತೆರೆದುಕೊಳ್ಳದೆ ಮಳೆ ಗರ್ಭಗುಡಿ ಜಲಾವೃತವಾಯಿತು ಎನ್ನಲಾಗಿದೆ.
ಬೆಳಗ್ಗೆ ಮಂದಿರದ ಸಿಬ್ಬಂದಿ ಹರ ಸಾಹಸ ಪಟ್ಟು ಸಂಗಮ ಪ್ರವಾಹದಲ್ಲಿ ಇಳಿದು ಈ ಗೇಟನ್ನು ತೆರೆದು ಗರ್ಭಗುಡಿಯ ನೀರು ಹೊರ ಹೋಗುವಂತೆ ಮಾಡಿದರು.
ತರುವಾಯ ಒಳಗಿನ ಮಳೆ ನೀರನ್ನು ಎರಡು ಶಕ್ತಿಶಾಲಿ ಪಂಪ್ ಮೂಲಕ ಹೊರಕ್ಕೆ ಹಾಕುವ ಕಾರ್ಯವನ್ನು ಮಧ್ಯಾಹ್ನದ ಮಹಾಪೂಜೆವರೆಗೂ ನಿರಂತರ ನಿರ್ವಹಿಸಲಾಯಿತು.
ದರ್ಶನಕ್ಕೆ ಅವಕಾಶ
ಶುಕ್ರವಾರ ಮಧ್ಯಾಹ್ನದವರೆಗೂ ಮುಂದುವರಿದ ಮಳೆ ಕಾರಣ ಪೂಜೆಗೆ ಅವಕಾಶ ರದ್ದು ಮಾಡಿ, ಭಕ್ತರಿಗೆ ನಂದಿ ಮಂಟಪದಿಂದ ದರ್ಶನಕ್ಕೆ ಮಾತ್ರ ಆಸ್ಪದ ನೀಡಲಾಯಿತು.
ಮಂದಿರದಲ್ಲಿ ನಡೆಯಬೇಕಾದ ಬಲಿಕಾರ್ಯ, ಮಹಾಪೂಜೆ ಇತ್ಯಾದಿ ನಿತ್ಯ ನೈಮಿತ್ತಿಕೆಗಳು ಮಾತ್ರ ಎಂದಿನಂತೆ ಸಾಂಗವಾಗಿ ನೆರವೇರಿದವು.
ಸ್ಥಳೀಯ ಮಳೆ ಮಾಪನ ಕೇಂದ್ರದ ದಾಖಲೆಯಂತೆ ಶುಕ್ರವಾರ ಬೆಳಗಿನ 8 ಗಂಟೆಯ ವರೆಗೆ 251 ಮಿಮೀ ಮಳೆ ದಾಖಲಾಗಿದೆ.