Madhukeshwar ಮಧುಕೇಶ್ವರನಿಗೆ ತಾಡಪತ್ರಿ ಹೊದಿಕೆಯೇ ಗತಿ!

ಶಿರಸಿ ತಾಲೂಕು ಬನವಾಸಿ ಮಧುಕೇಶ್ವರ Madhukeshwar ದೇವಾಲಯ ಸೋರುವ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಸದಸ್ಯರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು
ಶಿರಸಿ ತಾಲೂಕು ಬನವಾಸಿ ಮಧುಕೇಶ್ವರ Madhukeshwar ದೇವಾಲಯ ಸೋರುವ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಸದಸ್ಯರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು
Published on
ಶಿರಸಿ: ಬನವಾಸಿ ಮಧುಕೇಶ್ವರ Madhukeshwar ದೇವಾಲಯ ಸೋರದಂತೆ ಪ್ರತಿವರ್ಷವೂ ಪ್ರಾಚ್ಯವಸ್ತು ಇಲಾಖೆ ದೇವಸ್ಥಾನಕ್ಕೆ ತಾಡಪತ್ರಿ ಹೊದಿಕೆ ಹಾಕುತ್ತಿದೆ. ಆದರೆ, ಈ ವರ್ಷ ತಾಡಪತ್ರಿ ಹೊದಿಕೆ ಬದಲು ಸಮರ್ಪಕ ದುರಸ್ತಿ ಕೈಗೊಳ್ಳಬೇಕು ಎಂದು ಎಂದು ಬನವಾಸಿ ಭಾಗದ ಸಾರ್ವಜನಿಕರು ಆಗ್ರಹಿಸಿದರು.
ಇಲ್ಲಿಯ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಆಯೋಜಿಸಿದ್ದ ಸಾರ್ವಜನಿಕರ ಮತ್ತು ಬನವಾಸಿ ಹೋರಾಟ ಸಮಿತಿ ಸಭೆಯಲ್ಲಿ ದೇವಸ್ಥಾನ ದುರಸ್ತಿ ಮಾಡುವಂತೆ ಆಗ್ರಹ ಕೇಳಿಬಂದಿತು.
ಪುರಾತತ್ವ ಇಲಾಖೆ ಅಧಿಕಾರಿ ರಾಕೇಶ ಮಾಹಿತಿ ನೀಡಿ, ಈ ವರ್ಷ ತಾಡಪತ್ರಿ ಅನಿವಾರ್ಯ, ಮಳೆ ನಿಂತ ಕೂಡಲೇ ದುರಸ್ತಿ ಕಾರ್ಯ ನಡೆಯಲಿದೆ ಎಂದರು.
ಇದರಿಂದ ಅಸಮಾಧಾನಗೊಂಡ ಸಾರ್ವಜನಿಕರು, ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಬನವಾಸಿಯ ಮಧುಕೇಶ್ವರ ದೇವಸ್ಥಾನದ ಸೋರಿಕೆ ಪ್ರತಿ ವರ್ಷವೂ ಆಗುತ್ತಿದೆ. ಈ ಬಗ್ಗೆ ಪುರಾತತ್ವ ಇಲಾಖೆಯ ಅಧಿಕಾರಿಗಳ ಜೊತೆಗೆ ಹೋರಾಟ ಸಮಿತಿ ಪದಾಧಿಕಾರಿಗಳ ಸಭೆ ಇನ್ನೊಮ್ಮೆ ನಡೆಸಿ ಒಂದು ವಾರದಲ್ಲಿ ದೇವಸ್ಥಾನ ಸೊರದಂತೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ತಾಡಪತ್ರಿಯನ್ನು ದೇವಸ್ಥಾನ ಮೇಲೆ ಹೊದಿಕೆ ಮಾಡದಿರಲು ಪಟ್ಟು ಹಿಡಿದರು.
ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ್ ಕಾನಳ್ಳಿ, ಯಾವ ಕಾರಣಕ್ಕೂ ಈ ವರ್ಷ ತಾಡಪತ್ರಿ ಬಳಸುವಂತಿಲ್ಲ. ಪ್ರಾಚ್ಯವಸ್ತು ಇಲಾಖೆ ಪ್ರತಿವರ್ಷ ಮಳೆಗಾಲದಲ್ಲಿಯೂ ದೇವಸ್ಥಾನವನ್ನು ತಾಡಪತ್ರಿಯೊಂದ ಮುಚ್ಚುತ್ತಿದೆ. ಮಳೆಗಾಲ ಮುಕ್ತಾಯವಾಗುತ್ತಿದ್ದಂತೆ ದುರಸ್ತಿ ಮಾಡುವ ಕಾರ್ಯವನ್ನು ಮತ್ತೆ ಮರೆಯುತ್ತದೆ. ಮಳೆಗಾಲ ಮುಗಿದ ಬಳಿಕ ಶಾಶ್ವತ ಕಾಮಗಾರಿ ಮಾಡಬೇಕು ಎಂದರು.
ಸಭೆ ಮಧ್ಯೆ ಧಾರವಾಡ ವೃತ್ತ ಅಧೀಕ್ಷಕ ರಮೇಶಮೂಲಿಮನಿ ದೂರವಾಣಿಯಲ್ಲಿ ಮಾತನಾಡಿ, ನೀವು ಹೇಳಿದ ಪರಿಹಾರದ ಬಗ್ಗೆ ನಮಗೆ ಒಂದು ವಾರ ಅವಕಾಶ ಕೊಡಿ. ನಾವು ಈ ಬಗ್ಗೆ ಮೇಲಧಿಕಾರಿಗಳ ಒಪ್ಪಿಗೆ ಪಡೆದು ಜೂನ್ 1 ಅಥವಾ 2ರಂದು ಮತ್ತೆ ಬನವಾಸಿ ಯಲ್ಲಿ ಹೋರಾಟ ಸಮಿತಿ ಜೊತೆ ಸಭೆ ನಡೆಸಿ ತೀರ್ಮಾನ ಕೈಕೊಳ್ಳುತ್ತೇವೆ ಎಂದರು.
ಶ್ರೀ ಮಧುಕೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ ಹೇಮಾದ್ರಿ ಮಾತನಾಡಿ, ತಾತ್ಕಾಲಿಕ ಕೆಲಸ ಮಾಡಿದ ಬಳಿಕ ಶಾಶ್ವತ ದುರಸ್ತಿ ಕಾರ್ಯಕ್ಕೆ ವಿಳಂಬ ಮಾಡಬಾರದು. ಇಲಾಖೆ ಅಧಿಕಾರಿಗಳಿಗೆ ಸದಾ ಬೆಂಬಲ ನೀಡಿದ್ದೇವೆ ಎಂದರು.
ಹೋರಾಟ ಸಮಿತಿ ಗೌರವಾಧ್ಯಕ್ಷ ಸಿ. ಎಫ್. ನಾಯ್ಕ ಮಾಳಂಜಿ ಮಾತನಾಡಿ, ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ತಾಡಪತ್ರಿ ಹಾಕದಿರಲು ಮನವಿ ಮಾಡಿದರು.
ವಿಎಸ್‌ಎಸ್ ಸೊಸೈಟಿ ಅಧ್ಯಕ್ಷ ಗಜಾನನ ಗೌಡ ಮಾತನಾಡಿ, ಇಲಾಖೆಯ ಅಧಿಕಾರಿಗಳು ಪ್ರತಿವರ್ಷ ಹಾರಿಕೆ ಉತ್ತರ ಕೊಡುವುದೆ ರೂಢಿ ಮಾಡಿಕೊಂಡಿದ್ದಾರೆ. ಈ ಬಾರಿಯೂ ನಿರ್ಲಕ್ಷ್ಯ ಮಾಡಿದರೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಊರ ನಾಗರಿಕರು ಸೇರಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಸಮಿತಿ ಕಾರ್ಯದರ್ಶಿ ವಿಶ್ವನಾಥ್ ವಡೆಯರ್ ಮಾತನಾಡಿ, ಈ ವರ್ಷ ಸಾಧ್ಯವಾದರೆ ವಾಟರ್ ಪ್ರೂಫ್ ಪೇಂಟ್ ಎರಡು ಲೇಪನ ಮಾಡಬೇಕು. ಹೀಗೆ ಮಾಡಿದಲ್ಲಿ ಸೋರಿಕೆ ಈ ವರ್ಷ ತಡೆಗಟ್ಟಬಹುದು ಎಂದರು.
ಮಧುಸೂಧನ್ ದಯಾನಂದ ಭಟ್, ದೇವಸ್ಥಾನ ಸಮಿತಿ ಸದಸ್ಯರಾದ ಗೀತಾ ಯಜಮಾನ, ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯದರ್ಶಿ ಲತಾ ಶೆಟ್ಟಿ , ವೈದಿಕ ಪ್ರಮುಖ ವಿನಾಯಕ ಮಂಗಳೂರು, ಮೇಘರಾಜ ನರೇಗಲ್, ಕ್ಲಬ್ ಮುಖ್ಯಸ್ಥ ಸಾಯಿ ರಾಮ ಕಾನಳ್ಳಿ, ಪೊಲೀಸ್ ಇಲಾಖೆಯ ಕುಮಾರ ,ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net