ಕಾರವಾರ: ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮಾಡುವಂತೆ ಆಗ್ರಹಿಸಿ ಆಟೋ ರಿಕ್ಷಾ ಚಾಲಕರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಕಾರವಾರ ತಹಸೀಲ್ದಾರ್ ನಿಶ್ಚಲ ನರೋನಾ, ಆಹಾರ ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್ ಅವರಿಗೆ ಮನವಿ ಸಲ್ಲಿಸಿದರು.
ಕಾರವಾರದಲ್ಲಿ ಎಲ್‌ಪಿಜಿ ಗ್ಯಾಂಸ್ ಬಂಕ್ ಬಂದ್ ಆಗಿ ನಾಲ್ಕು ದಿನ ಕಳೆದಿದೆ. ಕುಮಟಾದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಪ್ರತಿ ಲೀಟರ್ ಗ್ಯಾಸ್ ದರವನ್ನು ಪಂಪ್‌ನವರು ಇದ್ದಕ್ಕಿದ್ದಂತೆ 62 ರಿಂದ 100 ರೂ.ಗಳಿಗೆ ಹೆಚ್ಚಿಸಿ, ಹಗಲು ದರೋಡೆ ಮಾಡುತ್ತಿದ್ದಾರೆ. ಈ ಬಗ್ಗೆ ಮನವಿ ನೀಡಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಇಲ್ಲವಾಗಿದೆ.
ಆಟೋ ಚಾಲಕರು ಬಡ ವರ್ಗದವರಾಗಿದ್ದು, ದೈನಂದಿನ ದುಡಿಮೆಯ ಮೇಲೆ ಜೀವನ ಸಾಗಿಸುತ್ತಿದ್ದಾರೆ. ಶೀಘ್ರದಲ್ಲಿ ಎಲ್ಲೆಡೆ ಗ್ಯಾಸ್ ಸಿಗುವ ವ್ಯವಸ್ಥೆ ಮಾಡಿಕೊಡಬೇಕು. ಜಿಲ್ಲೆಯ ಬೇರೆ ಯಾವುದೇ ಕಡೆ ಗ್ಯಾಸ್ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ, ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಹಾಗೂ ಇತರ ಆಟೋ ಚಾಲಕ, ಮಾಲೀಕರು ಈ ಸಂದರ್ಭದಲ್ಲಿದ್ದರು.