ಕಾರವಾರ: ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಜನ ಗಾಬರಿಗೊಂಡು ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಪ್ರಾರಂಭಿಸಿದ್ದರಿಂದ ಅನಿಲ ಪೂರೈಕೆಯಲ್ಲಿ ಅಡಚಣೆ ಉಂಟಾಗುತ್ತಿದ್ದು ವಾರವಾದರೂ ಸಮಸ್ಯೆ ಬಗೆಹರಿದಿಲ್ಲ.
ಜಿಲ್ಲೆಗೆ ಗೃಹ ಬಳಕೆ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಜನ ಆತಂಕಗೊಳ್ಳುವುದು ಬೇಡ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಆದರೆ, ಜನ ಗಾಬರಿಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪ್ರಾರಂಭಿಸಿದ್ದಾರೆ. ಇದರಿಂದ ಕೆಲವು ಗ್ಯಾಸ್ ಏಜೆನ್ಸಿಗಳಲ್ಲಿ ದಿನಕ್ಕೆ 200-300 ಸಂಖ್ಯೆಯಲ್ಲಿ ಆಗುತ್ತಿದ್ದ ಸಿಲಿಂಡರ್ ಈಗ 1 ಸಾವಿಕ್ಕೂ ಹೆಚ್ಚು ಆಗುತ್ತಿದೆ. ಇದರಿಂದ ವಿತರಣೆಯಲ್ಲಿ ಕೊಂಚ ವ್ಯತ್ಯಯ ಉಂಟಾಗುತ್ತಿದೆ ಎಂಬುದು ಅನಿಲ ವಿತರಣಾ ಕಂಪನಿಯವರ ಅಭಿಪ್ರಾಯ.
ನಾವು ಮೊದಲು ಬುಕ್ಕಿಂಗ್ ಆದ 24 ಗಂಟೆಯ ಒಳಗೇ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡುತ್ತಿದ್ದೆವು. ಆದರೆ, ಈಗ ಕೊಂಚ ವಿಳಂಬವಾಗುತ್ತಿದೆ ಎನ್ನುತ್ತಾರೆ ವೆಂಕಟೇಶ್ವರ ಭಾರತ ಗ್ಯಾಸ್ ವಿತರಣಾ ಸಂಸ್ಥೆಯ ಮಾಲೀಕ ವಿಜಯಕುಮಾರ ನಾಯ್ಕ.
ಮೀನು ಪ್ರೈ ಇಲ್ಲ:
ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಸಂಪೂರ್ಣ ನಿಯಂತ್ರಿತವಾಗಿದ್ದು, ಕಾರವಾರದ ವಿವಿಧ ಹೋಟೆಲ್‌ಗಳಲ್ಲಿ ಸದ್ಯ ಮೆನುವಿನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮಾಂಸದೂಟದ ಅಂಗಡಿಗಳಲ್ಲಿ, ಮೀನು ಫ್ರೈ , ಚಿಕನ್ ಚಿಲ್ಲಿ ಮುಂತಾದ ಗ್ಯಾಸ್ ಹೆಚ್ಚು ಬಳಸಿ ಮಾಡುವ ತಿಂಡಿಗಳನ್ನು ಕೈಬಿಡಲಾಗಿದೆ. ಶಾಖಾಹಾರಿ ಹೋಟೆಲ್‌ಗಳಲ್ಲಿ ಉತ್ತರ ಭಾರತದ ಕೆಲವು ಅಡುಗೆಗಳನ್ನು ಬಂದ್ ಮಾಡಲಾಗಿದೆ. ಇದ್ದಷ್ಟೇ ಸಿಲಿಂಡರ್‌ನಲ್ಲಿ ಹೇಗೋ ಮೆಂಟೇನ್ ಮಾಡುತ್ತಿದ್ದೇವೆ ಎನ್ನುತ್ತಾರೆ ಹೋಟೆಲ್‌ಗಳ ಸಿಬ್ಬಂದಿದೆ.
ಇಂದಿರಾ ಕ್ಯಾಂಟೀನ್
ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ವಿಳಂಬವಾದ ಕಾರಣ ಇಂದಿರಾ ಕ್ಯಾಂಟೀನ್ ಆಹಾರ ವಿತರಣೆಗೂ ಸಮಸ್ಯೆಯಾಗಿದೆ. ಕಾರವಾರ ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗಿನ ಇಡ್ಲಿಯನ್ನು ಸೋಮವಾರ ಬಂದ್ ಮಾಡಲಾಗಿತ್ತು. ಮಧ್ಯಾಹ್ನ ಊಟದಲ್ಲಿ ಚಪಾತಿ ಇರಲಿಲ್ಲ. ಇದರಿಂದ ಶೇ. 40 ಕ್ಕಿಂತ ಹೆಚ್ಚು ಗ್ರಾಹಕರು ಬೇರೆಡೆ ಹೊರಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೂರು ದಿನಗಳಿಂದ ಸಿಲಿಂಡರ್ ಪೂರೈಕೆಯಾಗದ ಕಾರಣ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಮೇಲುಸ್ತುವಾರಿ ನೋಡಿಕೊಳ್ಳುವವರು ಮಾಹಿತಿ ನೀಡಿದ್ದಾರೆ.
ಎಷ್ಟು ಸಿಲಿಂಡರ್..?
ಜಿಲ್ಲೆಯಲ್ಲಿ ಒಟ್ಟಾರೆ 4.23 ಲಕ್ಷ ಗೃಹ ಬಳಕೆಯ ಸಿಲಿಂಡರ್ ಸಂಪರ್ಕವಿದ್ದು, ಕೆಲವರು ಎರಡು ಸಿಲಿಂಡರ್ ಹೊಂದಿದ್ದು, ಒಟ್ಟಾರೆ 6.91 ಲಕ್ಷ ಗೃಹ ಬಳಕೆ ಸಿಲಿಂಡರ್‌ಗಳು ವಿತರಣೆಯಾಗಿವೆ. ಸಾಮಾನ್ಯ ದಿನಗಳಲ್ಲಿ ಒಂದು ದಿನಕ್ಕೆ ಜಿಲ್ಲೆಗೆ ಸುಮಾರು 9300 ಗೃಹ ಬಳಕೆ ಸಿಲಿಂಡರ್‌ಗಳ ಅಗತ್ಯವಿದೆ. ಆದರೆ, ಈಗ 15 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಆಗುತ್ತಿದೆ.
ಜಿಲ್ಲೆಯ ಅಂಕೋಲಾದಲ್ಲಿ 28,224, ಭಟ್ಕಳ-51,584, ಹಳಿಯಾಳ-32,447, ಹೊನ್ನಾವರ-18,770, ಕಾವಾರ-51,763, ಕುಮಟಾ-12,214, ಮುಂಡಗೋಡ-27,604, ಸಿದ್ದಾಪುರ-20,850, ಶಿರಸಿ-64,934, ಯಲ್ಲಾಪುರ-24,153, ದಾಂಡೇಲಿ-27,380 ಗೃಹ ಬಳಕೆಯ ಸಿಲಿಂಡರ್‌ಗಳಿವೆ.