ಲಾರಿ ಚಾಲಕ ಧಾರವಾಡ ಮೂಲದ ಸಿದ್ದರಾಜು ಘೋರ್ಪಡೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಬಾವಿಯ ತಡೆಗೋಡೆಗೆ ಸಿಲುಕಿಕೊಂಡಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಕುಂದಾಪುರದ ತೆಕ್ಕಟ್ಟೆಯಿಂದ ಅಕ್ಕಿ ತುಂಬಿಕೊಂಡು ಶಿಗ್ಗಾಂವಿ ಕಡೆಗೆ ತೆರಳುತ್ತಿದ್ದ ಲಾರಿ, ವೆಂಕಟಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಬಾವಿಗೆ ನುಗ್ಗಿದ್ದು, ತಡೆಗೋಡೆಗೆ ಡಿಕ್ಕಿ ಹೊಡೆದು ಸಿಲುಕಿಕೊಂಡಿದೆ.
ತಡೆಗೋಡೆ ಇಲ್ಲದಿದ್ದರೆ ಲಾರಿ ಸಂಪೂರ್ಣವಾಗಿ ಆಳವಾದ ಬಾವಿಯೊಳಗೆ ಬೀಳುವ ಸಾಧ್ಯತೆಯಿತ್ತು ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ, ಕ್ಯಾಬಿನ್‌ನಲ್ಲಿ ಸಿಲುಕಿದ್ದ ಚಾಲಕನನ್ನು ಹೊರತೆಗೆದು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.