ಹಳಿಯಾಳ/ಸಿದ್ದಾಪುರ: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದ ಮೇರೆಗೆ ಹಳಿಯಾಳದ ನಿವಾಸಿ ಸಿದ್ದಾಪುರ ಕೋಲಸಿರ್ಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಸಿಇಒ ಮಾರುತಿ ಯಶವಂತ್ ಮಾಳ್ವಿ ಅವರ ಮನೆ ಮತ್ತು ಮಳಿಗೆಗಳ ಮೇಲೆ ಲೋಕಾಯುಕ್ತ Lokayukta ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಾರವಾರ ಹಾಗೂ ಉಡುಪಿಯ ಲೋಕಾಯುಕ್ತ ಅಧಿಕಾರಿಗಳ ತಂಡ ಮಂಗಳವಾರ ಬೆಳಗ್ಗೆ ಏಕ ಕಾಲದಲ್ಲಿ ಮಾಳ್ವಿ ಅವರಿಗೆ ಸೇರಿದ ನಾಲ್ಕು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ದಾಖಲೆಗಳನ್ನು ಕಲೆ ಹಾಕಿದೆ.
ಸಿದ್ದಾಪುರದಲ್ಲಿ ಮನೆ, ಸಹಕಾರಿ ಸಂಘದ ಕಚೇರಿ, ಹಳಿಯಾಳದ ಬೆಳಗಾವಿ ರಸ್ತೆಯ ಹೊರಗಿನ ಗುತ್ತಿಗೇರಿ ಕೆರೆ ಪಕ್ಕದಲ್ಲಿರುವ ಮನೆ ಮತ್ತು ಸನಿಹದಲ್ಲೇ ಇರುವ ಯಶಲಕ್ಷ್ಮೀ ಸಿಲ್ಕ್ ಆ್ಯಂಡ್ ಸಾರಿಸ್,ಯಶಲಕ್ಷ್ಮೀ ವೆಂಚರ್ ಪ್ರೈವೆಟ್ ಲಿಮಿಟೆಡ್ ಮಳಿಗೆಗಳಲ್ಲಿ ಪರಿಶೀಲನೆ ನಡೆಸಲಾಯಿತು.
ಸೊಸೈಟಿಗೆ ತೆರಳಿ ಅವರು ಪಡೆಯುತ್ತಿದ್ದ ವೇತನ, ಅವರು ನಡೆಸುತ್ತಿದ್ದ ವಹಿವಾಟುಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಸಹಕಾರಿ ಸಂಘದ ವ್ಯವಹಾರದ ಬಗ್ಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಕೋಲಸಿರ್ಸಿ ಸಹಕಾರಿ ಸಂಘದ ಅಧ್ಯಕ್ಷ ಕೆ.ಆರ್.ವಿನಾಯಕ ತಿಳಿಸಿದ್ದಾರೆ.
ಬೆಂಗಳೂರು ಲೋಕಾಯುಕ್ತ ಕಚೇರಿಯ ಸೂಚನೆಯ ಮೇರೆಗೆ ದಾಳಿ ನಡೆದಿದೆ. ಅಧಿಕಾರಿಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಬೆಂಗಳೂರಿಗೆ ಕಳಿಸಲಾಗುವುದು ಎಂದು ಲೋಕಾಯುಕ್ತ ಡಿವೈಎಸ್‌ಪಿ ಕುಮಾರಚಂದ್ರ ತಿಳಿಸಿದ್ದಾರೆ.