ಶ್ರಮಿಕ ಶಾಲೆಗೆ ಸ್ಥಳ ಅಂತಿಮ Shramika School

ಶಿರಸಿ ತಾಲೂಕು ನರೇಬೈಲ್‌ನಲ್ಲಿ ಕಾರ್ಮಿಕ ಶಾಲೆ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ ಜಾಗ. (Shramika School)
ಶಿರಸಿ ತಾಲೂಕು ನರೇಬೈಲ್‌ನಲ್ಲಿ ಕಾರ್ಮಿಕ ಶಾಲೆ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ ಜಾಗ. (Shramika School)
Published on
ಶಿರಸಿ: ಕಾರ್ಮಿಕರ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು, ಉಳ್ಳವರ ಮಕ್ಕಳ ಮಾದರಿಯಲ್ಲೇ ಸಾಧನೆ ತೋರಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶ್ರಮಿಕ ವಸತಿ ಶಾಲೆ (Shramika School) ನಿರ್ಮಾಣಕ್ಕೆ ಅಂತೂ ಈಗ ಜಾಗ ಅಂತಿಮಗೊಂಡಿದೆ.
ಈ ಕುರಿತಂತೆ ಪ್ರಸ್ತಾವನೆ ಸಿದ್ಧಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಫ್ಯಾಕ್ಟರಿ, ಸಹಕಾರಿ ಸಂಘಗಳಲ್ಲಿ ಕೆಲಸ ಮಾಡುವವರ ಜತೆ ಕೃಷಿ ಕ್ಷೇತ್ರದಲ್ಲಿಯೂ ಸಹ ಕೆಲಸ ಮಾಡುವವರು ನೋಂದಣಿ ಮಾಡಿಕೊಂಡಿದ್ದಾರೆ.
ವಿಶೇಷವಾಗಿ ಅಲೆಮಾರಿ ಕಾರ್ಮಿಕರ ಮಕ್ಕಳು ಶಾಲಾ ಸಮಸ್ಯೆ ಎದುರಿಸುತ್ತಿದ್ದಾರೆ. ತಂದೆ ತಾಯಂದಿರಿಗೆ ಹೊಟ್ಟೆಪಾಡಿಗಾಗಿ ದುಡಿಯುವುದು ಅನಿವಾರ್ಯ.
ಊರಲ್ಲಿ ಕೆಲಸ ಸಿಗದಿದ್ದಾಗ ಗುಳೆ ಹೋಗಿ ಎಲ್ಲೋ ಕೆಲಸ ಮಾಡುವ ವೇಳೆ ಮಕ್ಕಳ ಶಾಲೆ ಸಾಧ್ಯವಾಗದೇ ಅವರ ಶಿಕ್ಷಣ ಮೊಟಕುಗೊಳ್ಳುವ ಸಾಧ್ಯತೆ ಅಧಿಕ.
ಈ ಹಿನ್ನೆಲೆಯಲ್ಲಿ ಕಾರ್ಮಿಕ ಶಾಲೆಗಳಲ್ಲಿ ಇಂತಹ ಮಕ್ಕಳಿಗೆ ವಸತಿಯೊಂದಿಗೆ ವಿಶೇಷ ಶಿಕ್ಷಣ ನೀಡಲಾಗುತ್ತದೆ. ಪಾಲಕರ ದುಡಿಮೆಗಾಗಿ ಗುಳೆ ಹೋಗುವ ಅವಧಿಯಲ್ಲಿ ಅವರನ್ನು ಈ ವಸತಿ ಶಾಲೆಗಳಲ್ಲಿ ಬಿಟ್ಟರೆ ಪಾಲಕರಿಗೂ ನೆಮ್ಮದಿ, ಮಕ್ಕಳಿಗೂ ಉತ್ತಮ ಶಿಕ್ಷಣ ಲಭಿಸುತ್ತದೆ.
ಈ ಹಿನ್ನೆಲೆಯಲ್ಲಿ ತಾಲೂಕಿಗೆ 38 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಶಾಲೆ ಮಂಜೂರಾಗಿದ್ದರೂ ಶಾಲೆ ನಿರ್ಮಿಸುವುದು ಎಲ್ಲಿ ಎಂಬ ಪ್ರಶ್ನೆ ಮೂಡಿತ್ತು. ಈ ಹಿನ್ನೆಲೆಯಲ್ಲಿ ಹಲವು ಜಾಗಗಳನ್ನು ಗುರುತಿಸಲಾಗಿತ್ತಾದರೂ ಜಾಗ ಅಂತಿಮಗೊಂಡಿರಲಿಲ್ಲ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮಾದರಿಯಲ್ಲಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿಯ ನರೇಬೈಲ್ ಗ್ರಾಮದ ಸರ್ವೆ ನಂ. 46ರಲ್ಲಿ ಈಗ 8 ಎಕರೆ ವಿಶಾಲ ಕಂದಾಯ ಜಾಗನ್ನು ಗುರುತಿಸಿ ಈಗ ಜಾಗ ಅಂತಿಮಗೊಳಿಸಲಾಗಿದೆ.
ಈ ಜಾಗ ಗುರುತಿಸುವಲ್ಲಿ ಶಾಸಕ ಭೀಮಣ್ಣ ನಾಯ್ಕ ಹೆಚ್ಚಿನ ಆಸಕ್ತಿ ತೋರಿದ್ದರು. ನಗರಕ್ಕೆ ಸನಿಹವಾಗುವ ಜತೆ ಮಧ್ಯವರ್ತಿ ಸ್ಥಳವೂ ಆಗುವುದರಿಂದ ಎಲ್ಲ ಕಾರ್ಮಿಕ ಮಕ್ಕಳಿಗೂ ಅನುಕೂಲವಾಗಲಿದೆ ಎಂದು ಶಾಸಕರು ತಮ್ಮ ಅಭಿಪ್ರಾಯವನ್ನೂ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಅಂತಿಮಗೊಳಿಸಲಾದ ಈ ಜಾಗದ ಸಂಪೂರ್ಣ ತಾಂತ್ರಿಕ ವರದಿ, ಜಾಗದ ಕಾಗದಪತ್ರಗಳನ್ನು ಒಳಗೊಂಡ ಕಡತವನ್ನು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಿಕ್ಕ ಬಳಿಕ ಕಟ್ಟಡ ನಿರ್ಮಿಸಲಾಗುವುದು ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮಳೆಗಾಲದ ಬಳಿಕ ಕಾರ್ಮಿಕ ಶಾಲೆಯ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಳ್ಳುವ ಸಾಧ್ಯತೆ ಇದೆ.
"

ಕಾರ್ಮಿಕರ ಮಕ್ಕಳು ಎಂದಿಗೂ ಶಿಕ್ಷಣದಿಂದ ವಂಚಿತರಾಗಬಾರದು. ಉಜ್ವಲ ಭವಿಷ್ಯ ಅವರದ್ದಾಗಬೇಕು ಎಂಬ ಕಾರಣದಿಂದ ಉತ್ತಮ ಶಿಕ್ಷಣಕ್ಕಾಗಿ ತಾಲೂಕಿಗೆ ಕಾರ್ಮಿಕ ಶಾಲೆ ಮಂಜೂರು ಮಾಡಿದ್ದೇವೆ. ಶೀಘ್ರವೇ ಪ್ರಸ್ತಾವನೆಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net