ಪ್ರತಿಭಟನಾ ನಿರತ ಪರವಾನಗಿ ಭೂ ಮಾಪಕರ ಸಂಘದ ಜಿಲ್ಲಾಧ್ಯಕ್ಷ ಅಮಾನತು

ಜಿಲ್ಲೆಯ ಸರ್ವೇಯರ್‌ಗಳು
ಜಿಲ್ಲೆಯ ಸರ್ವೇಯರ್‌ಗಳು
Published on

ಕಾರವಾರ: ಪರವಾನಗಿ ಪಡೆದ ಭೂ ಮಾಪಕರ ಪ್ರತಿಭಟನೆಯ ವಿಷಯ ಗಂಭೀರತೆ ಪಡೆದುಕೊಂಡಿದೆ. ಅಖಿಲ ಕರ್ನಾಟಕ ಸರ್ಕಾರಿ ಪದವಾನಗಿ ಭೂ ಮಾಪಕರ ಸಂಘದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಸೂರಜ್ ರಾಜೇಂದ್ರ ತಲಗೇರಿ ಅವರನ್ನು ಅಮಾನತು ಮಾಡಲಾಗಿದೆ. 2020 ರ ನಂತರ ಕೆಲಸಕ್ಕೆ ಹಾಜರಾದ 82 ಪರವಾನಗಿ ಭೂ ಮಾಪಕರಿಗೆ ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.

ಈ ಕ್ರಮವನ್ನು ಖಂಡಿಸಿ ಸಂಘದ ಸದಸ್ಯರು ಡಿಡಿಎಲ್‌ಆರ್ ಅವರಿಗೆ ಮನವಿ ಸಲ್ಲಿಸಿದ್ದು, ಅಮಾನತು ಆದೇಶ ಹಿಂಪಡೆಯದೇ ಇದ್ದರೆ ತೀವ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕಾಯಮಾತಿ ಮಾಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ 6 ಸಾವಿರ ಪರವಾನಗಿ ಭೂ ಮಾಪಕರು ಫೆ.27 ರಿಂದ ಕೆಲಸಕ್ಕೆ ಬಾರದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರನ್ನು ಸರ್ಕಾರಿ ಉದ್ಯೋಗಿಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ, ಅವರಿಗೆ ಸೌಲಭ್ಯ ನೀಡುವ ಬಗ್ಗೆ ಚರ್ಚಿಸುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಹೇಳಿಕೆ ನೀಡಿದ್ದಾರೆ.
ಪರವಾನಗಿ ಭೂ ಮಾಪಕದ ಮುಷ್ಕರದಿಂದ ರಾಜ್ಯದಲ್ಲಿ 7 ಲಕ್ಷ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಽಕ ಸರ್ವೇ ಅರ್ಜಿಗಳು ಬಾಕಿ ಇವೆ. ಇದರಿಂದ ಭೂ ದಾಖಲೆಗಳ ಇಲಾಖೆ ಆಯುಕ್ತರು ಅಧೀನ ಅಧಿಕಾರಿಗಳ ಸಭೆ ನಡೆಸಿದ್ದು, ಪರವಾನಗಿ ಭೂ ಮಾಪಕರಿಗೆ ವಿಮಾ ಸೌಲಭ್ಯ ನೀಡುವುದು ಹಾಗೂ ಪ್ರತಿ ಸರ್ವೇ ಕಾರ್ಯಕ್ಕೆ ನೀಡುತ್ತಿದ್ದ ಗೌರವಧನವನ್ನು ಹೆಚ್ಚಿಸುವ ಬಗ್ಗೆ ಸಮಿತಿ ರಚಿಸಲಾಗಿದೆ. ಮೇ.30 ರ ಒಳಗೆ ನಿರ್ಧಾರ ಕೈಗೊಳ್ಳಲಾಗುವುದು. ಆದರೆ, ತಕ್ಷಣ ಎಲ್ಲ ಭೂ ಮಾಪಕರು ಉದ್ಯೋಗಕ್ಕೆ ಹಾಜರಾಗಲು ಸೂಚಿಸಿ ಎಂದಿದ್ದಾರೆ. ಅದರಂತೆ ಎಲ್ಲ ಭೂ ಮಾಪಕರಿಗೆ ನೋಟಿಸ್ ನೀಡಲಾಗಿದೆ ಎಂದು ಡಿಡಿಎಲ್‌ಆರ್ ಸಂದೀಪ ತಿಳಿಸಿದ್ದಾರೆ.

ಪ್ರತಿಭಟನೆ ಕೈಬಿಡೆವು:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಸೂರಜ್ ರಾಜೇಂದ್ರ ತಲಗೇರಿ, ಪರವಾನಗಿ ಭೂ ಮಾಪಕರ ಒಗ್ಗಟ್ಟನ್ನು ಒಡೆಯಲು ಸರ್ಕಾರ ಯತ್ನಿಸುತ್ತಿದೆ. ಜಿಲ್ಲೆಯಲ್ಲಿ 96 ಪರವಾನಗಿ ಭೂ ಮಾಪಕರಿದ್ದಾರೆ. ಆದರೆ, 2020 ರ ನಂತರ ಕೆಲಸಕ್ಕೆ ಸೇರಿದ 82 ಭೂ ಮಾಪಕರಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಜಿಲ್ಲಾಧ್ಯಕ್ಷನಾದ ನನ್ನನ್ನು ಅಮಾನತು ಮಾಡಲಾಗಿದೆ. ನೋಟಿಸ್ ನೀಡುವಿಕೆಯಲ್ಲೂ ನಿಯಮ ಪಾಲಿಸಿಲ್ಲ. ಕೇವಲ ವಾಟ್ಸ್ ಆ್ಯಪ್ ಮೂಲಕ ನೋಟಿಸ್ ನೀಡಲಾಗಿದೆ. ಡಿಡಿಎಲ್‌ಆರ್ ಅವರ ಈ ಕ್ರಮ ಖಂಡನೀಯ. ಈ ಬಗ್ಗೆ ಅವರಿಗೆ ಲಿಖಿತವಾಗಿ ತಿಳಿಸಿದ್ದೇವೆ. ನಮಗೆ ಗೌರವಧನ ಹೆಚ್ಚಿಸುವ ಬಗ್ಗೆ ಆಯುಕ್ತರು ಮೌಖಿಕವಾಗಿ ಭರವಸೆ ನೀಡಿದ್ದಾರೆ. ಆದರೆ, ಲಿಖಿತ ಭರವಸೆ ಸಿಗುವವರೆಗೂ ಪ್ರತಿಭಟನೆ ಕೈಬಿಡಲು ಸಾಧ್ಯವಿಲ್ಲ ಎಂದರು. ಅಮಾನತು ಆದೇಶವನ್ನು ತಕ್ಷಣ ಹಿಂಪಡೆಯದೇ ಹೋದರೆ ರಾಜ್ಯ ಸಂಘದ ಪದಾಽಕಾರಿಗಳು ಇಲ್ಲಿಗೆ ಬಂದು ಧರಣಿ ನಡೆಸುವರು ಎಂದು ಎಚ್ಚರಿಸಿದರು.
ಕಾರ್ಯದರ್ಶಿ ಮಿತುನ್ ನಾಯ್ಕ, ಖಜಾಂಚಿ ಗೋಪಾಲ ಗೌಡ, ಹಿರಿಯ ಭೂ ಮಾಪಕ ಅಮರೇಶ, ಸದಸ್ಯೆ ಮಲ್ಲಿಕಾ ನಾಯ್ಕ ಹಾಗೂ ಎಲ್ಲ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.
"

ಪರವಾನಗಿ ಭೂ ಮಾಪಕರು ಮುಷ್ಕರ ನಡೆಸುತ್ತಿರುವುದರಿಂದ ಜಿಲ್ಲೆಯಲ್ಲಿ 10 ಸಾವಿರ ಸರ್ವೇ ಪ್ರಕರಣಗಳು ಪೆಂಡಿಂಗ್ ಉಳಿದುಕೊಂಡಿವೆ. ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ರಾಜ್ಯಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. 30 ರವರೆಗೆ ಅವರ ಕೆಲವು ಬೇಡಿಕೆ ಈಡೇರಿಸುವುದಾಗಿ ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದರಿಂದ ಹಿರಿಯ ಅಧಿಕಾರಿಗಳ ಸೂಚನೆಯಂತೆ ಶೀಘ್ರ ಕೆಲಸಕ್ಕೆ ಹಾಜರಾಗುವಂತೆ 82 ಭೂ ಮಾಪಕರಿಗೆ ನಿಯಮದಂತೆ ನೋಟಿಸ್ ನೀಡಲಾಗಿದೆ. ಕೆಲಸಕ್ಕೆ ಹಾಜರಾಗುವ ಕೆಲ ಪರವಾನಗಿ ಭೂ ಮಾಪಕರನ್ನೂ ತಡೆಯುತ್ತಿರುವ ಸೂರಜ್ ಅವರನ್ನು ಅವರನ್ನು ಅಮಾನತು ಮಾಡಲಾಗಿದೆ.

ಸಂದೀಪ ಉಪ್ಪಾರ ಡಿಡಿಎಲ್‌ಆರ್ ಕಾರವಾರ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net