ಭಟ್ಕಳದ ಸಂಶುದ್ದೀನ್ ಸರ್ಕಲ್‌ಗೆ ಆಗಮಿಸಿದ ಸ್ವದೇಶಿ (swadeshi) ಜಾಗರಣ ಸೈಕ್ಲಿಂಗ್ ಅಭಿಯಾನ ತಂಡವನ್ನು ಭಟ್ಕಳ ಭಾರತಿ ಕಿಸಾನ್ ಸಂಘ, ಬಿಜೆಪಿ ಮಂಡಲ, ವಿಶ್ವ ಹಿಂದು ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ನಾಗರಿಕರು ಭವ್ಯವಾಗಿ ಸ್ವಾಗತಿಸಿದರು. ಲಕ್ಷ್ಮಿ ನಾರಾಯಣ ನಾಯ್ಕ, ನಾರಾಯಣ ಭಟ್, ಶ್ರೀಕಾಂತ ನಾಯ್ಕ, ರಾಮಕೃಷ್ಣ ನಾಯ್ಕ, ರಾಘು ನಾಯ್ಕ ಇತರರಿದ್ದರು.
ಭಟ್ಕಳ: ಸ್ವದೇಶಿ ಬಳಸಿ ದೇಶ ಬೆಳೆಸಿ (Swadeshi) ಎಂಬ ಘೋಷವಾಕ್ಯದಡಿ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿ ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರಿನ ಶ್ರೀ ಪರಿಪೂರ್ಣ ಸನಾತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಸ್ವದೇಶಿ ಜಾಗರಣ ಸೈಕ್ಲಿಂಗ್ ಅಭಿಯಾನ ಭಟ್ಕಳಕ್ಕೆ ಆಗಮಿಸಿತು.
ಭಾರತೀಯ ಮಾಜಿ ಸೇನಾ ಅಧಿಕಾರಿ ಹಾಗೂ ಕರ್ನಾಟಕ ಸರ್ಕಾರದ ಮಾಜಿ ನಿರ್ದೇಶಕ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಅವರ ನೇತೃತ್ವದಲ್ಲಿ ಶಿರೂರು ಮಾರ್ಗವಾಗಿ ಸಂಶುದ್ದೀನ್ ಸರ್ಕಲ್‌ಗೆ ಆಗಮಿಸಿದ ತಂಡವನ್ನು ಭಟ್ಕಳ ಭಾರತಿ ಕಿಸಾನ್ ಸಂಘ, ಬಿಜೆಪಿ ಮಂಡಲ, ವಿಶ್ವ ಹಿಂದು ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ನಾಗರಿಕರು ಭವ್ಯವಾಗಿ ಸ್ವಾಗತಿಸಿದರು.
ಭಟ್ಕಳ ಬಿಜೆಪಿ ಮುಖಂಡ ಗೋವಿಂದ ನಾಯ್ಕ ಮಾತನಾಡಿ, ಸ್ವದೇಶಿ ವಸ್ತುಗಳ ಬಳಕೆ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಸ್ಥಳೀಯ ಉತ್ಪನ್ನಗಳಿಗೆ ಸಹಕಾರ ನೀಡಿದರೆ ರೈತರು ಹಾಗೂ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಸಿಗುತ್ತದೆ.
ಪ್ರತಿಯೊಬ್ಬರು ಸ್ವಾಭಿಮಾನದಿಂದ ಸ್ವದೇಶಿ ಬಳಕೆಗೆ ಮುಂದಾಗಬೇಕು ಎಂದರು.
ಭಾರತಿ ಕಿಸಾನ್ ಸಂಘದ ಉತ್ತರ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಮಾಧವ ಹೆಗಡೆ ಮಾತನಾಡಿ, ನಿವೃತ್ತಿಯಾದರೂ ದೇಶಸೇವೆಯಲ್ಲಿ ತೊಡಗಿರುವ ಮಾಜಿ ಸೈನಿಕರ ಈ ಸೈಕ್ಲಿಂಗ್ ಅಭಿಯಾನ ಯುವಕರಿಗೆ ಪ್ರೇರಣೆಯಾಗಿದೆ ಎಂದರು.
ಸೈಕಲ್ ರ‌್ಯಾಲಿಯಲ್ಲಿ ಮೂರು ಮಹಿಳೆಯರು ಸೇರಿದಂತೆ ಒಟ್ಟು 17 ಮಂದಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿವೃತ್ತ ನೌಕರರು ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಭಾರತಿ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣ ಭಟ್, ಶ್ರೀಕಾಂತ ನಾಯ್ಕ, ರಾಮಕೃಷ್ಣ ನಾಯ್ಕ, ರಾಘು ನಾಯ್ಕ, ದಿನೇಶ್ ನಾಯ್ಕ ಮತ್ತಿತರರಿದ್ದರು.