ಯಕ್ಷಗಾನ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ, ವಿದ್ವಾನ್ ಉಮಾಕಾಂತ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ, ಕಡತೋಕ ಮಂಜುನಾಥ ಭಾಗವತರು ಅಸಾಧಾರಣ ಸೃಜನಶೀಲತೆಯನ್ನು ಕೊಟ್ಟಿದ್ದಾರೆ. ಅವರು ಯಕ್ಷಗಾನದ ಮೇಲೆ ದಟ್ಟವಾದ ಪ್ರಭಾವ ಬೀರಿದ್ದರು. ಒಂದು ಕಾಲದಲ್ಲಿ ಬಹುತೇಕ ಭಾಗವತರು ಕಡತೋಕ ಭಾಗವತರ ಜಂಜಾವಾತದ ಪ್ರಭಾವಕ್ಕೆ ಒಳಗಾಗಿದ್ದರು. ರಂಗಸ್ಥಳದಲ್ಲಿ ಕಲಾವಿದರ ಸಾಮರ್ಥ್ಯವನ್ನು ನೋಡಿ ಕುಣಿಸುತ್ತಿದ್ದರು. ರಂಗಕಲೆಯ ಸಂರಕ್ಷಣೆ, ಸಂವರ್ಧನೆ, ವಿಸ್ತರಣೆಗೆ ಮಾದರಿಯಾದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ನಾನು ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಚಿತನಾಗಲು ಕಡತೋಕ ಮಂಜುನಾಥ ಭಾಗವತರು ಕಾರಣರು. ಪ್ರಶಸ್ತಿಯಿಂದ ಅತೀವ ಸಂತೋಷವಾಗಿದೆ. ಇದನ್ನು ಇಡೀ ಯಕ್ಷಗಾನ ಸಮುದಾಯಕ್ಕೆ ಸಲ್ಲಿಸುತ್ತೇನೆ ಎಂದರು.