ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರದ (Yakshagana) ನವೀಕರಣ ಅಡಿಗಲ್ಲು ಸಮಾರಂಭವನ್ನು ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಉದ್ಘಾಟಿಸಿದರು. ಹೊರನಾಡು ಕ್ಷೇತ್ರದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ, ಸಚಿವ ಮಂಕಾಳ ವೈದ್ಯ, ಶಿವಾನಂದ ಹೆಗಡೆ ಇದ್ದರು.
ಹೊನ್ನಾವರ:ಗಂಡುಮೆಟ್ಟಿನ ಕಲೆ ಎನಿಸಿಕೊಂಡಿರುವ ಯಕ್ಷಗಾನ (Yakshagana) ಕಲೆಯು ಇಂದು ನಿರ್ಲಕ್ಷಕ್ಕೆ ಒಳಗಾಗುತ್ತಿದೆ. ಯಕ್ಷಗಾನದ ಪರಿಪೂರ್ಣ ಅಧ್ಯಯನ ನಡೆಯಬೇಕು ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಹೇಳಿದರು.
ತಾಲೂಕಿನ ಗುಣವಂತೆಯಲ್ಲಿ ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ ನವೀಕರಣ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಪಾತ್ರ ದೊಡ್ಡದು. ಯಕ್ಷಗಾನದ ಜೊತೆಗೆ ಉಳಿದೆಲ್ಲ ಕಲೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಇಲ್ಲಿ ನಡೆಯುತ್ತಿದೆ.
ಸಾವಿರಾರು ಜನರು ಯಕ್ಷಗಾನ ಕಲಿತಿರುವ ಕೆರೆಮನೆ ರಂಗಮಂದಿರದಲ್ಲಿ ಎಲ್ಲಾ ಕಲಾಪ್ರಕಾರಗಳಿಗೆ ಮನ್ನಣೆ ಸಿಗುತ್ತಿದ್ದು, ಮುಂದೆ ಇನ್ನೂ ಹೆಚ್ಚಿನ ಕಲಾ ಚಟುವಟಿಕೆಗಳು ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಚಿವ ಮಂಕಾಳ ವೈದ್ಯ ಮಾತನಾಡಿ, ಎಂಥಹ ಕೆಟ್ಟ ಮನುಷ್ಯನನ್ನೂ ಒಳ್ಳೆಯವನನ್ನಾಗಿ ಮಾಡುವ ಶಕ್ತಿ ಯಕ್ಷಗಾನಕ್ಕಿದೆ.
ನಾಲ್ಕು ತಲೆಮಾರಿನಿಂದ ಯಕ್ಷಗಾನವನ್ನು ಉಳಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ ಯಕ್ಷಗಾನಕ್ಕೂ ಅಷ್ಟೇ ಮಹತ್ವವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಪೋಕ್ ಲ್ಯಾಂಡ್ ಅಧ್ಯಕ್ಷ ಜಯರಾಜನ್ ಮಾತನಾಡಿ, ಕಲಾಪ್ರಕಾರಗಳಲ್ಲಿ ಯಕ್ಷಗಾನವು ಪ್ರಮುಖವಾಗಿ ಗುರುತಿಸಿಕೊಂಡಿದೆ.
ಕೆರೆಮನೆ ಮೇಳವು ತಲತಲೆಮಾರಿನಿಂದ ಯಕ್ಷಗಾನವನ್ನು ಉಸಿರಾಗಿಸಿಕೊಂಡಿದ್ದು, ಈ ಕಲೆಯನ್ನು ದೇಶವಿದೇಶದಲ್ಲಿ ಪಸರಿಸಿ ಯುನೆಸ್ಕೋ ಮಾನ್ಯತೆ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.
ಕಲಾಪೋಷಕ ವೆಂಕಟ್ರಮಣ ಹೆಗಡೆ ಕವಲಕ್ಕಿ, ಸಹಕಾರಿ ಧುರೀಣ ಗಣಪಯ್ಯ ಗೌಡ, ಲಕ್ಷ್ಮೀನಾರಾಯಣ ಕಾಶಿ, ನರಸಿಂಹ ಭಟ್ ಕೊಲ್ಲೂರು, ಎನ್. ರಾಮಚಂದ್ರ, ಶಾಮಸುಂದರ ಭಾಗವತ ಇದ್ದರು. ಕೆರೆಮನೆ ಶಿವಾನಂದ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.