ಸಿದ್ದಾಪುರ: ಅಖಿಲ ಹವ್ಯಕ ಮಹಾಸಭಾ ಸಂಘಟಿಸುತ್ತಿರುವ ಪ್ರತಿಬಿಂಬ ಕಾರ್ಯಕ್ರಮ ಹವ್ಯಕರ Havyaka ಮನಸು, ಆತ್ಮ ಹಾಗೂ ಜೀವನದ ಪ್ರತಿಬಿಂಬವೇ ಆಗಿದೆ ಎಂದು ಶ್ರೀ ಮನ್ನೆಲೆಮಾವುಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ಆಯೋಜಿಸಿದ್ದ ಪ್ರತಿಬಿಂಬ ಕಾರ್ಯಕ್ರಮದ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿ, ಸಾಧಕರನ್ನು ಸನ್ಮಾನಿಸಿ ಅವರು ಆಶೀರ್ವಚನ ನೀಡಿದರು.
ಹವ್ಯಕ ಯುವಕರಿಂದು ವೈವಾಹಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಮದುವೆಯೇ ಬೇಡ ಎನ್ನುವ ಹೆಣ್ಣುಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಹವ್ಯಕರಲ್ಲಿ ವಿಚ್ಛೇದನ ಹೆಚ್ಚುತ್ತಿದೆ. ಇಂದು ತಮ್ಮ ಕಾಲಮೇಲೆ ತಾವು ನಿಂತಿದ್ದರಿಂದ ನಾವು ಸ್ವತಂತ್ರವಾಗಿ ಬದುಕಬಲ್ಲೆವು ಎಂಬ ಮನೋಭಾವ ನಮ್ಮ ಹೆಣ್ಣುಮಕ್ಕಳಲ್ಲಿ ಬೆಳೆದಿದೆ ಎಂದರು.
ಕೃಷಿಗೆ ಪೂರಕವಾಗಿ ಗೋವು ಬೇಕು. ಹವ್ಯಕರು ಗೋವನ್ನು ಸಾಕುವ ಮೂಲಕ ಗೋಸೇವೆಯನ್ನೂ ಮಾಡಬೇಕು. ಸಾಧಕರಿಗೆ ಸನ್ಮಾನ ಮಾಡಿದ್ದರಿಂದ ಅವರ ಸಾಧನೆಯ ಕ್ಷೇತ್ರದಲ್ಲಿ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದರು.
ವಕೀಲ ರವಿ ಹೆಗಡೆ ಹೂವಿನಮನೆ ಮಾತನಾಡಿದರು. ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸಿದ್ದರು.
ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್. ಭಟ್ಟ ಉಂಚಳ್ಳಿ, ಬಾಳೇಸರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಿ.ಎನ್. ಹೆಗಡೆ, ನೆಲೆಮಾವುಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಉಪಸ್ಥಿತರಿದ್ದರು.