ಸಿದ್ದಾಪುರ:ನಾಡಿಗೆ ದೀಮಂತ ಕಲಾವಿದರನ್ನ, ರಾಜಕೀಯ ಮುತ್ಸದ್ಧಿಗಳನ್ನ ಹಾಗೂ ದಾರ್ಶನಿಕರನ್ನು ನೀಡಿದ ಆರ್ಯ, ಈಡಿಗ, ನಾಮಧಾರಿ, ಬಿಲ್ಲವ ಸಮುದಾಯ ಶಿಕ್ಷಣದ (Education) ಮೂಲಕ ಇನ್ನಷ್ಟು ಸಂಘಟಿತವಾಗಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದ ರಾಘವೇಂದ್ರ ಮಠದಲ್ಲಿ ತಾಲೂಕು ಆರ್ಯ, ಈಡಿಗ, ನಾಮಧಾರಿ, ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಡಾ. ರಾಜಕುಮಾರ, ಪುನೀತ್ ರಾಜಕುಮಾರ, ಶಿವರಾಜಕುಮಾರ, ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಆರ್.ಎಲ್. ಜಾಲಪ್ಪ, ಜನಾರ್ಧನ ಪೂಜಾರಿ ಸೇರಿದಂತೆ ನಾಡಿಗೆ ಧೀಮಂತ ನಾಯಕರು ಹಾಗೂ ದಾರ್ಶನಿಕರನ್ನು ನೀಡಿದ ಸಮಾಜ ನಮ್ಮದಾಗಿದೆ.
ಸಮಾಜವನ್ನು ಸರಿಯಾದ ರೀತಿಯಲ್ಲಿ ಪೋಷಿಸುವುದು ಸಮುದಾಯದಲ್ಲಿ ಹುಟ್ಟಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಮಾಜದ ಪ್ರತಿ ಮಗುವು ಶಿಕ್ಷಣ ಪಡೆಯಲೇಬೇಕು.
ನಮ್ಮ ಸಮುದಾಯದ ಮೇಲೆ ಅಭಿಮಾನ ಹೊಂದುವ ಜತೆಗೆ ಇತರ ಸಮಾಜದವರನ್ನು ಪ್ರೀತಿ-ವಿಶ್ವಾಸದಿಂದ ಕಾಣಬೇಕು ಎಂದರು.
ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ ಎಚ್.ಕೆ. ಮಾತನಾಡಿ, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ತುಂಬಾ ಒಳ್ಳೆಯ ಕೆಲಸ.
ಮೊದಲು ನಮ್ಮ ಸಮುದಾಯದ ಇತಿಹಾಸ ತಿಳಿದುಕೊಂಡು ಸ್ವತಃ ಇತಿಹಾಸ ನಿರ್ಮಿಸಬೇಕು. ಮಕ್ಕಳನ್ನು ಬೇರೆಯವರ ಜತೆ ಹೋಲಿಕೆ ಮಾಡಿ ಜರಿಯಬೇಡಿ ಎಂದರು.
ನಿವೃತ್ತ ಸೈನಿಕರನ್ನು, ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ರವಿ ನಾಯ್ಕ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕೆ.ಜಿ. ನಾಗರಾಜ, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ನಾಯ್ಕ, ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ, ಪ್ರಶಾಂತ ಜಿ.ಎಸ್., ವಿ.ಎನ್. ನಾಯ್ಕ, ಕೆ.ಆರ್. ವಿನಾಯಕ, ವಿನಾಯಕ ನಾಯ್ಕ, ನಾಗರಾಜ ಮಾಳ್ಕೋಡ, ಪಿ.ಡಿ. ನಾಯ್ಕ, ಎಂ.ಕೆ. ನಾಯ್ಕ ಕಡಕೇರಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಜಿ.ಎಲ್. ಶಾಮಸುಂದರ ಸ್ವಾಗತಿಸಿದರು. ಅರುಣ ಸುಂಕತ್ತಿ ಹಾಗೂ ಮೋಹಿನಿ ನಾಯ್ಕ ನಿರ್ವಹಿಸಿದರು.