ಶಾಲಾ ಕಲಿಕೆ ಜತೆ ಯಕ್ಷಗಾನ (Yakshagana) ಕಲಿಯಿರಿ

ಕುಮಟಾದ ಸರಸ್ವತಿ ಪಿಯು ಕಾಲೇಜಿನಲ್ಲಿ ಹಿರಿಯ ಭಾಗವತ ಸುಬ್ರಾಯ ಹೆಗಡೆ ಕಪ್ಪೆಕೆರೆ ಅವರಿಗೆ ವಿಧಾತ್ರಿ ಸಂಮಾನವಿತ್ತು ಗೌರವಿಸಲಾಯಿತು. ನಟಿ ಉಮಾಶ್ರೀ, ಕಾಸರಗೋಡ ಚಿನ್ನಾ, ಡಾ.ಜಿ.ಎಲ್. ಹೆಗಡೆ, ರಮೇಶ ಪ್ರಭು, ಗುರುರಾಜ ಶೆಟ್ಟಿ, ವಿ.ಎಸ್. ಭಟ್, ದಾಮೋದರ ನಾಯ್ಕ, ಕಿರಣ ಭಟ್ ಇತರರಿದ್ದರು.
ಕುಮಟಾದ ಸರಸ್ವತಿ ಪಿಯು ಕಾಲೇಜಿನಲ್ಲಿ ಹಿರಿಯ ಭಾಗವತ ಸುಬ್ರಾಯ ಹೆಗಡೆ ಕಪ್ಪೆಕೆರೆ ಅವರಿಗೆ ವಿಧಾತ್ರಿ ಸಂಮಾನವಿತ್ತು ಗೌರವಿಸಲಾಯಿತು. ನಟಿ ಉಮಾಶ್ರೀ, ಕಾಸರಗೋಡ ಚಿನ್ನಾ, ಡಾ.ಜಿ.ಎಲ್. ಹೆಗಡೆ, ರಮೇಶ ಪ್ರಭು, ಗುರುರಾಜ ಶೆಟ್ಟಿ, ವಿ.ಎಸ್. ಭಟ್, ದಾಮೋದರ ನಾಯ್ಕ, ಕಿರಣ ಭಟ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾಗವತ ಸುಬ್ರಾಯ ಹೆಗಡೆ ಕಪ್ಪೆಕೆರೆ ಸಲಹೆ
  • ಯಕ್ಷಗಾನ ನಮ್ಮ ಹಕ್ಕು ಹಾಗೂ ನಮ್ಮದೇ ಸೊತ್ತು
  • ಕಲಾಂಜಲಿ ಕಾರ್ಯಕ್ರಮದಲ್ಲಿ ವಿಧಾತ್ರಿ ಸಮ್ಮಾನ ಪ್ರಶಸ್ತಿ
  • ಸಾಧನೆಗೆ ಬೇಕು ಮಗ್ನತೆ ಹಾಗೂ ಬದ್ಧತೆ
ಕುಮಟಾ: ಯಕ್ಷಗಾನ ನಮ್ಮ ಹಕ್ಕು ಹಾಗೂ ನಮ್ಮದೇ ಸೊತ್ತು. ಇದನ್ನು ಬಿಡಬಾರದು. ಯಕ್ಷಗಾನ ಕಲಿಯಲು (Learn Yakshagana) ಈಗ ಹಿಂದಿನಷ್ಟು ಕಷ್ಟಪಡಬೇಕಿಲ್ಲ. ಇಂದಿನ ಪೀಳಿಗೆ ಶಾಲಾ ಕಲಿಕೆಯ ಜತೆಗೆ ಯಕ್ಷಗಾನವನ್ನೂ ಕಲಿತರೆ ವ್ಯಕ್ತಿತ್ವಕ್ಕೆ ವಿಶೇಷ ಮೆರುಗು ಹಾಗೂ ಯಕ್ಷಗಾನ ಪರಂಪರೆ ಮುಂದುವರಿಯುತ್ತದೆ ಎಂದು ಯಕ್ಷಗಾನದ ಹಿರಿಯ ಭಾಗವತ ಸುಬ್ರಾಯ ಹೆಗಡೆ ಕಪ್ಪೆಕೆರೆ ಹೇಳಿದರು.
ಇಲ್ಲಿನ ಕೊಂಕಣ ಎಜುಕೇಷನ್ ಟ್ರಸ್ಟ್, ಮಂಗಳೂರು ವಿಧಾತ್ರಿ ಅಕಾಡೆಮಿ ಸಹಭಾಗಿತ್ವದ ಸರಸ್ವತಿ ಪಿಯು ಕಾಲೇಜ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಲಾಂಜಲಿ ಕಾರ್ಯಕ್ರಮದಲ್ಲಿ ವಿಧಾತ್ರಿ ಸಮ್ಮಾನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಹಿಂದೆ ನಾನು ಮನೆಯಿಂದ 14-15 ಕಿಮೀ ದೂರ ಕಾಲ್ನಡಿಗೆಯಲ್ಲಿ ಪ್ರತಿನಿತ್ಯ ತೆರಳಿ ಕೆರೆಮನೆ ಮಹಾಬಲ ಹೆಗಡೆಯವರಲ್ಲಿ ಕಲಿತ ಯಕ್ಷಗಾನ ನನ್ನ ಜೀವನಕ್ಕೆ ಹೆಮ್ಮೆ ತಂದಿದೆ. ಈಗ ನನ್ನಿಂದ ಕಲಿತವರು ಸರ್ಕಾರ ಹಾಗೂ ಇತರ ಕಡೆಗಳಿಂದ ಪಡೆಯುತ್ತಿರುವ ಪ್ರಶಸ್ತಿ-ಪುರಸ್ಕಾರಗಳು ನನಗೇ ಸಿಕ್ಕಿದಂತೆ ಸಂತಸ ಕೊಟ್ಟಿದೆ ಎಂದರು.
ವಿ.ಪ. ಸದಸ್ಯೆ ಹಾಗೂ ಖ್ಯಾತ ಕಲಾವಿದೆ ಉಮಾಶ್ರೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಓದಿಲ್ಲದ ಎಷ್ಟೋ ಜನ ರಾಷ್ಟ್ರ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾಧನೆಗೆ ಮಗ್ನತೆ ಹಾಗೂ ಬದ್ಧತೆ ಬೇಕು. ಅಂಥ ಬುನಾದಿಯನ್ನು ಇಲ್ಲಿನ ಶಿಕ್ಷಣ ಸಂಸ್ಥೆಗಳು ಹಾಕಿಕೊಡುತ್ತಿವೆ. ಜೀವನದಲ್ಲಿ ವಿದ್ಯೆ ಅತೀ ಮುಖ್ಯ. ಕಲಿಕೆಯ ಜತೆಗೆ ಮಕ್ಕಳಲ್ಲಿ ನೈತಿಕ ಸಂಸ್ಕಾರ ತುಂಬುವ ವಿದ್ಯೆಯ ಅವಶ್ಯಕತೆ ಹೆಚ್ಚುತ್ತಿದೆ ಎಂದರು.
ರಂಗಕರ್ಮಿ ಕಾಸರಗೋಡು ಚಿನ್ನಾ ಮಾತನಾಡಿ, ‘ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಸಾಧನೆ ಕಷ್ಟವಲ್ಲ, ಶಾಲಾ-ಕಾಲೇಜ್ ವಿದ್ಯೆಯಲ್ಲಿ ಮಾತ್ರ ಸಂಪನ್ನರಾದರೆ ಸಾಲದು, ಸಾಂಸ್ಕೃತಿಕವಾಗಿಯೂ ಗಟ್ಟಿಯಾಗಬೇಕು. ಇಂಥ ಕಲಾಂಜಲಿ ಕಾರ್ಯಕ್ರಮಗಳ ಮೂಲಕ ಕುಮಟಾ ಪ್ರತಿಭೆಗಳು ರಾಜ್ಯ-ರಾಷ್ಟ್ರಮಟ್ಟದಲ್ಲಿ ಬೆಳಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾತ್ರಿ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಮುಂದಿನ ವರ್ಷಗಳಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕಲಾಂಜಲಿ ಕಾರ್ಯಕ್ರಮ ನಡೆಸುವುದು ನನ್ನ ಕನಸು ಎಂದರು.
ಕಲಾಂಜಲಿ ಗೌರವವನ್ನು ಸಂಗೀತ ವಾದ್ಯ ತಯಾರಕ ವಿ.ಎಸ್.ಭಟ್ ಹಾಗೂ ನಾಟಕ ಪ್ರಸಾಧನ ತಯಾರಕ ದಾಮೋದರ ನಾಯ್ಕ ಅವರಿಗೆ ಸಮರ್ಪಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕೊಂಕಣ ಎಜುಕೇಷನ್ ಟ್ರಸ್ಟಿನ ಉಪಾಧ್ಯಕ್ಷ ರಮೇಶ ಪ್ರಭು, ಟ್ರಸ್ಟಿ ಡಿ.ಡಿ. ಕಾಮತ, ರಾಮಕೃಷ್ಣ ಗೋಳಿ, ಶೈಕ್ಷಣಿಕ ಸಲಹೆಗಾರ ಆರ್.ಎಚ್. ದೇಶಭಂಡಾರಿ, ಉಪಪ್ರಾಚಾರ್ಯೆ ಸುಜಾತಾ ಹೆಗಡೆ, ಪ್ರಸನ್ನ ಹೆಗಡೆ, ಸತೀಶ ಭಟ್, ಚಿದಾನಂದ ಭಂಡಾರಿ, ಅಕ್ಷಯ ಇತರರಿದ್ದರು.
ವಿದ್ಯಾರ್ಥಿನಿ ಆರಾಧನಾ ಅವರಿಂದ ಭರತನಾಟ್ಯ ಪ್ರದರ್ಶನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕಿರಣ ಭಟ್ ಹುತ್ಗಾರ ಸ್ವಾಗತಿಸಿದರು. ಸರಸ್ವತಿ ಪ್ರಾಥಮಿಕದ ಮುಖ್ಯ ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು. ಬಳಿಕ ಕಲಾಂಜಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net