ಮಳೆಯ ಕೊರತೆ ಮೀನುಗಾರಿಕೆಗೆ ಹಿನ್ನಡೆ

ಕಾರವಾರ ಮಾರುಕಟ್ಟೆಯಲ್ಲಿ ಮೀನು ಮಾರಾಟ(ಸಾಂದರ್ಭಿಕ ಚಿತ್ರ)
ಕಾರವಾರ ಮಾರುಕಟ್ಟೆಯಲ್ಲಿ ಮೀನು ಮಾರಾಟ(ಸಾಂದರ್ಭಿಕ ಚಿತ್ರ)
Published on
ಕಾರವಾರ: ಮಳೆಯ ಕೊರತೆ ಮೀನುಗಾರಿಕೆಯ ಮೇಲೂ ಪರಿಣಾಮ ಬೀರುತ್ತಿದೆ. ಸದ್ಯ ಆಳ ಸಮುದ್ರ ಮೀನುಗಾರಿಕೆಗೆ ತಡೆ ಇದೆ. 10 ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಔಟ್ ಬೋರ್ಡ್ ಇಂಜಿನ್‌ಗಳು ಹಾಗೂ ನಾಡ ದೋಣಿಗಳನ್ನು ಬಳಸಿ ಮೀನುಗಾರಿಕೆ ನಡೆಸಲು ಅವಕಾಶವಿದೆ. ದಡದಿಂದ ನಿಂತು ಏಂಡಿ ಬಲೆ ಹಾಕಿ ಮೀನು ಹಿಡಿಯಲಾಗುತ್ತದೆ.
ಆದರೆ, ಈ ಯಾವ ಪದ್ಧತಿಯಿಂದಲೂ ಈ ಬಾರಿ ಮೀನು ಬರುತ್ತಿಲ್ಲ. ಮುಂಗಾರು ಶುರುವಾದ ನಂತರ ಈ ಎಲ್ಲ ಸಾಂಪ್ರದಾಯಿಕ ಪದ್ಧತಿಯ ಮೀನುಗಾರಿಕೆ ಚುರುಕು ಪಡೆದುಕೊಳ್ಳುತ್ತಿತ್ತು. ಆದರೆ, ಈ ಬಾರಿ ಮುಂಗಾರು ಶುರುವಾಗಿ ತಿಂಗಳು ಕಳೆದರೂ ಸಾಂಪ್ರದಾಯಿಕ ಮೀನುಗಾರಿಗೆ ಖುಷಿ ಸಿಗುತ್ತಿಲ್ಲ.
ಮುಂಗಾರು ಮಾರುತಕ್ಕೂ ಮೀನುಗಾರಿಕೆಗೂ ಸಂಬಂಧವಿದೆ. ಬಿರುಗಾಳಿ (ತೂಫಾನ್) ಬಂದು ಸಮುದ್ರ ಪ್ರಕ್ಷುಬ್ದವಾದಲ್ಲಿ ಮೀನುಗಳು ದಡದತ್ತ ಬರುತ್ತವೆ ಎಂಬುದು ಮೀನುಗಾರರ ನಂಬಿಕೆ. ಆದರೆ, ಈ ಬಾರಿ ಇದುವರೆಗೂ ಗಟ್ಟಿ ತೂಫಾನ್ ಆಗಿಲ್ಲ ಇದರಿಂದ ಏಂಡಿ ಬಲೆ ಹಾಗೂ ನಾಡ ದೋಣಿಗಳಿಗೆ ಸಾಕಷ್ಟು ಮೀನು ಬೀಳುತ್ತಿಲ್ಲ.

ಬೆಲೆ ಹೆಚ್ಚಳ:

ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಮೀನು ಸಿಗದ ಕಾರಣ ಪೂರ್ವ ಕರಾವಳಿಯಿಂದ ಬರುವ ಐಸ್ ಹಾಕಿದ ಮೀನೇ ಸ್ಥಳೀಯ ಮಾರುಕಟ್ಟೆಯಲ್ಲೂ ಮಾರಾಟವಾಗುತ್ತಿದೆ. ಸಾಮಾನ್ಯ ಗಾತ್ರದ ಇಸೋಣ ಮೀನಿನ ಬೆಲೆ 1800 ರವರೆಗೂ ತಲುಪಿದೆ. ಸಾಮಾನ್ಯ ಗಾತ್ರದ ಐದು ಬಾಂಗಡೆ ಮೀನಿನ ಬೆಲೆ 100 ರಿಂದ 200 ರೂ.ಗೆ ಏರಿಕೆಯಾಗಿದೆ. ಶಿಗಡಿ ಬೆಲೆ ಕೆಜಿಗೆ 400 ರೂ. ತಲುಪಿದೆ. ಒಟ್ಟಿನಲ್ಲಿ ಮೀನು ಪ್ರಿಯರ ಕಿಸೆ ಖಾಲಿಯಾಗುತ್ತಿದೆ. ಮೇಲಾಗಿ ತಾಜಾ ಮೀನೂ ಸಿಗುತ್ತಿಲ್ಲ. ಹಾಗಾಗಿ ನದಿಯ ಮೀನಿಗೆ ಈಗ ಬೇಡಿಕೆ ಹೆಚ್ಚಿದೆ.

ಭವಿಷ್ಯವೂ ಕರಾಳ

ಮುಂಗಾರು ಮಾರುತ ಅಬ್ಬರಿಸದೇ ಇರುವುದು ಈಗ ಮಾತ್ರವಲ್ಲ ಭವಿಷ್ಯದ ಮೀನುಗಾರಿಕೆಯ ಮೇಲೂ ಪರಿಣಾಮ ಬೀರಬಹುದು ಎನ್ನುತ್ತಾರೆ. ಸಾಗರ ಜೀವಶಾಸ್ತ್ರಜ್ಞರು.
ಮಳೆಗಾಲದಲ್ಲಿ ಘಟ್ಟಗಳಿಂದ ಕಸ, ಕಡ್ಡಿ, ಸಣ್ಣ ಜೀವಿಗಳು, ಲವಣಯುಕ್ತ ಮಣ್ಣು ಮುಂತಾದವನ್ನು ಕೊಚ್ಚಿಕೊಂಡು ಬರುವ ನದಿಗಳೇ ಹಲವು ಸಮುದ್ರ ಮೀನುಗಳ ಜೀವನಾಧಾರವಾಗಿವೆ. ಮೀನುಗಳು ನದಿಯ ನೀರನ್ನು ಅರಸಿ ದಡದತ್ತ ಬರುತ್ತವೆ. ಸಂತಾನೋತ್ಪತ್ತಿಯನ್ನೂ ಮಾಡುತ್ತವೆ. ಸಾಕಷ್ಟು ಮಳೆಯಾಗದೇ ನದಿಗಳ ನೀರು ಸಮುದ್ರ ಸೇರದೇ ಇದ್ದಲ್ಲಿ ಮೀನುಗಳ ಸಂತಾನೋತ್ಪತ್ತಿಯೂ ಕಡಿಮೆಯಾಗಬಹುದು. ಇದರಿಂದ ಮುಂದಿನ ತಿಂಗಳುಗಳಲ್ಲಿ ಮತ್ಸ÷್ಯ ಕ್ಷಾಮವೂ ಉಂಟಾಗಬಹುದು ಎನ್ನುತ್ತಾರೆ ಸಾಗರ ಜೀವ ಶಾಸ್ತ್ರಜ್ಞರು .
"

ಸಾಮಾನ್ಯವಾಗಿ ಮುಂಗಾರು ಶುರುವಾರ ನಂತರ ಸಮುದ್ರದಲ್ಲಿ ತೂಫಾನ್ ಉಂಟಾಗುತ್ತಿತ್ತು. ಅದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಮೀನುಗಳು ಹೆಚ್ಚು ಬೀಳುತ್ತವೆ ಎಂಬುದು ನಮ್ಮ ಅನುಭವ. ಈ 20 ದಿನಗಳಲ್ಲಿ ಸಮುದ್ರದಲ್ಲಿ ತೂಫಾನ್ ಎದ್ದಿಲ್ಲ. ಸಾಂಪ್ರದಾಯಿಕ ಬಲೆಗಳಿಗೆ ಮೀನೂ ಬಿದ್ದಿಲ್ಲ. ಸದ್ಯ ನಾಲ್ಕು ದಿನಗಳಿಂದ ಸಮುದ್ರದ ವಾತಾವರಣದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಇದರಿಂದ ಬೋಟ್‌ಗಳು ಮೀನು ಹಿಡಿಯಲು ತೆರಳಿಲ್ಲ. ಮುಂದಿನ ವಾರವಾದರೂ ಮೀನು ಬೀಳಲಿದೆಯೇ ಕಾದು ನೋಡಬೇಕು.

ಸದಾನಂದ ಹರಿಕಂತ್ರ ಸಾಂಪ್ರದಾಯಿಕ ಮೀನುಗಾರ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net