ಯಲ್ಲಾಪುರ: ಪತ್ರಿಕೆಯ ವರದಿ (NEWS) ಓದುಗರನ್ನು ಕ್ಷಣ ಮಾತ್ರದಲ್ಲಿ ಸೆಳೆಯುವ ಚುರುಕಿನೊಂದಿಗೆ ಚುಟುಕಾಗಿ, ಸ್ಫುಟವಾಗಿದ್ದರೆ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಸವಣಗೇರಿ ಸ.ಹಿ.ಪ್ರಾ ಶಾಲೆಯ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕಾರಂಗದ ಪಾವಿತ್ರ್ಯತೆ ಹಿಂದಿನಂತೆ ಉಳಿದಿಲ್ಲ. ಹಿಂದಿನಂತೆ ರಾಜಕೀಯ ಮೌಲ್ಯವೂ ಈಗಿಲ್ಲ. ವ್ಯಕ್ತಿಯ ವೈಯಕ್ತಿಕ ತೇಜೋವಧೆಗೆ ಇಳಿದರೆ, ಪತ್ರಿಕೆಗಳು ಉಳಿಯಲಾರವು, ಉದ್ಧಾರವೂ ಆಗಲಾರವು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂದ ತಾಲೂಕಾಧ್ಯಕ್ಷ ಸುಬ್ರಾಯ ಗಾಂವ್ಕರ ಮಾತನಾಡಿ, ಪತ್ರಕರ್ತರಿಗೆ ದೊರೆಯುವ ಸಾಮಾಜಿಕ ಮನ್ನಣೆಯನ್ನು ದುರುಪಯೋಗಪಡಿಸಿಕೊಳ್ಳುವವರು ಕೆಲವರಿದ್ದಾರೆ.
ಸಾಮಾಜಿಕ ಧ್ವನಿಯಾಗಬೇಕಾದವರು ತಮ್ಮ ಸ್ವಾರ್ಥಕ್ಕಾಗಿ ವ್ಯವಸ್ಥೆಯ ಕುಲಗೆಡಿಸುವ ಪ್ರವೃತ್ತಿ ಹೊಂದಿರುವ ಅಂಥವರಿಗೆ ಸಮಾಜವೇ ಎಚ್ಚೆತ್ತು ಪಾಠ ಕಲಿಸಬೇಕು ಎಂದರು.
ಹಿರಿಯ ಪತ್ರಕರ್ತರಾದ ನರಸಿಂಹ ಸಾತೋಡ್ಡಿ, ಕೆ.ಎಸ್.ಭಟ್ಟ ಆನಗೋಡ, ನಾಗೇಂದ್ರ ಯಲ್ಲಾಪುರ ಅವರನ್ನು ಸನ್ಮಾನಿಸಸಲಾಯಿತು. ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಅಭಿನಂದನಾ ನುಡಿಗಳನ್ನಾಡಿದರು.
ಹಿರಿಯ ಪತ್ರಕರ್ತ ಬೀರಣ್ಣ ನಾಯಕ ಮೊಗಟಾ ಪತ್ರಿಕೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ವೈಷ್ಣವಿ ಹಾಗೂ ಪವಿತ್ರಾ ಮರಾಠಿ ಪ್ರಾರ್ಥಿಸಿದರು. ಸಂದ ಉಪಾಧ್ಯಕ್ಷ ಶ್ರೆಧರ ಅಣಲಗಾರ, ಖಜಾಂಚಿ ದತ್ತಾತ್ರೇಯ ಕಣ್ಣಿಪಾಲ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಇದಕ್ಕೂ ಮುನ್ನ ಶಾಲೆಯ ಆವಾರದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ವೃಕ್ಷಾರೋಪಣ ನೆರವೇರಿಸಿದರು.