ಸರಿಯಾದ ಸಮಯಕ್ಕೆ ಬಸ್‌ ಬಿಡಿ : ಶಾಸಕ ಸತೀಶ ಸೈಲ್‌ ಸೂಚನೆ

ಸತೀಶ ಸೈಲ್‌ ಸಭೆ ನಡೆಸಿದರು.
ಸತೀಶ ಸೈಲ್‌ ಸಭೆ ನಡೆಸಿದರು.
Published on
ಕಾರವಾರ: ಶಾಲೆಗಳ ಮುಖ್ಯಾಧ್ಯಾಪಕರು, ಬಿಇಒ, ಗ್ರಾಪಂ ಪಿಡಿಒಗಳ ಜತೆ ಸಭೆ ನಡೆಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಸಮಯದಲ್ಲಿ ಸುಸಜ್ಜಿತ ಬಸ್ ಬಿಡಲು ಕ್ರಮ ವಹಿಸಿ ಎಂದು ಶಾಸಕ ಸತೀಶ ಸೈಲ್ ಎನ್‌ಡಬ್ಲುಕೆಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಆಡಳಿತದಿಂದ ಚಿತ್ತಾಕುಲಾ(ಸದಾಶಿವಗಡ) ಗ್ರಾಪಂ ಸಭಾಭವನದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನ ವಿವಿಧೆಡೆ ಬಸ್ ಸಮಸ್ಯೆಗಳು ಕೇಳಿ ಬರುತ್ತಿವೆ. ಅವುಗಳನ್ನು ದೂರ ಮಾಡಬೇಕು. ಬಸ್‌ಗಳ ಕೊರತೆ ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧಗಳನ್ನು ದಾಸ್ತಾನು ಇಡಬೇಕು. ಆಂಬುಲೆನ್ಸ್ಗಳನ್ನು ಸುಸ್ಥಿತಿಯಲ್ಲಿಡಲು ಆರೋಗ್ಯಾದಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು. ನಾಯಿಗಳಿಗೆ ಸಂತಾನ ಶಕ್ತಿ ಹರಣ ಮತ್ತು ರೇಬಿಸ್ ವ್ಯಾಕ್ಸಿನೇಶನ್ ನೀಡಬೇಕು ಎಂದು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
100 ಕ್ಕೂ ಹೆಚ್ಚು ಮುಸ್ಲೀಂ ಕುಟುಂಬಗಳು ಮೀನುಗಾರಿಕೆ ಮಾಡುತ್ತಿದ್ದರೂ ಸರ್ಕಾರದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ಮುಸ್ಲೀಂ ಮುಖಂಡರು ಸಮಸ್ಯೆ ತೋಡಿಕೊಂಡರು. ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರತೀಕ ಶೆಟ್ಟಿ ಮಾತನಾಡಿ, ಮೀನುಗಾರರ ಸಂಘ ರಚನೆಗೆ ಸೂಚಿಸಿದ್ದು, ತಕ್ಷಣ ಅದನ್ನು ನೋಂದಣಿ ಮಾಡಿಕೊಂಡು ಸದಸ್ಯರಿಗೆ ಸೌಲಭ್ಯ ನೀಡಲಾಗುವುದು ಎಂದರು.
ಬೀದಿ ದೀಪ ಅಳಡಿಸುವ ಬಗ್ಗೆ, ರಸ್ತೆ, ಚರಂಡಿ ದುರಸ್ತಿ, ಸ್ಮಶಾನ ಅಭಿವೃದ್ಧಿ, ಕಾಯಂ ವೈದ್ಯರ ನೇಮಕಾತಿ, ಪಿಡಿಒ ನೇಮಕಾತಿ, ಕೆರೆ ಅಭಿವೃದ್ಧಿ, ಅಪಘಾತಕ್ಕೆ ಕಾರಣವಾಗುವ ಮರಗಳ ತೆರವು, ಬಸ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಅಂಗನವಾಡಿ ಕಟ್ಟಡ ನಿರ್ಮಾಣ, ಮೀನು ಮಾರುಕಟ್ಟೆ ಅಭಿವೃದ್ಧಿ ಇತರೆ ಸಮಸ್ಯೆಗಳ ಕುರಿತು ದೂರುಗಳನ್ನು ಸ್ವೀಕರಿಸಲಾಯಿತು.
ತಹಸೀಲ್ದಾರ್ ನಿಶ್ಚನ ನರೋನಾ, ತಾಪಂ ಇಒ ವೀರನಗೌಡ ಪಿ. ಏನಗಗೌಡರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ನಾಯ್ಕ ವೇದಿಕೆಯಲ್ಲಿದ್ದರು.

ಸ್ಕ್ರ್ಯಾಪ್‌ ಅಂಗಡಿ ಬಂದ್ ಮಾಡಿ

ಚಿತ್ತಾಕುಲಾದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಸ್ಕ್ರ್ಯಾಪ್‌ ಅಂಗಡಿಗಳು ತಂದು ಹಾಕುವ ವಸ್ತುಗಳಿಂದ ಇಡೀ ಊರೇ ಸ್ವಚ್ಛತೆವಿಲ್ಲವೆಂಬಂತೆ ಭಾಸವಾಗುತ್ತಿದೆ. ಕೂಡಲೇ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ, ಕಪೌಂಡ್ ನಿರ್ಮಿಸಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚಿಸಬೇಕು. ಇಲ್ಲವಾದ್ದಲ್ಲಿ ಅಂಗಡಿ ಬಂದ್ ಮಾಡಿಸಿ ಎಂದು ಪಿಡಿಒ ಪೊಲೀಸ್ ಅಧಿಕಾರಿಗಳಿಗೆ ಶಾಸಕ ಸತೀಶ ಸೈಲ್ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net