ರೀಲ್ಸ್‌ ಹಂಚಿಕೆ ವಿಚಾರ ಸ್ನೇಹಿತರ ನಡುವೆ ಗಲಾಟೆ, ಚಾಕು ಇರಿದು ಕೊಲೆ

ರೋಶನ್‌
ರೋಶನ್‌
Published on

ಪ್ರಮುಖ ಮುಖ್ಯಾಂಶಗಳು

  • ಮಾದಕ ದ್ರವ್ಯ ಸೇವನೆ ಬಗ್ಗೆ ಕ್ರಮ ವಹಿಸಲು ಒತ್ತಾಯ
  • ಕೊಲೆ ನಡೆದಾಗ ಇದ್ದ ಇನ್ನೂ ಇಬ್ಬರನ್ನು ಬಂಧಿಸಲು ಒತ್ತಾಯ
  • ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ
  • ಸ್ನೇಹಿತರ ನಡುವೆ ರೀಲ್ಸ್‌ ಹಂಚಿಕೆ ವಿಚಾರವಾಗಾಗಿ ಗಲಾಟೆ
ಕಾರವಾರ: ನಂದನಗದ್ದಾ ಅಂಬೇಡ್ಕರ್ ಕಾಲನಿಯ ರೋಷನ್ ಪ್ರದೀಪ ಹುಲಸ್ವಾರ್ ಎಂಬ ಯುವಕನಿಗೆ ಚಾಕು ಇರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಇನ್ನೂ ಕೆಲವರಿದ್ದು, ಅವರನ್ನು ಬಂಧಿಸಬೇಕು ಎಂದು ಮೃತನ ತಾಯಿ ಶಕುಂತಲಾ ಹಾಗೂ ಸಹೋದರ ಪ್ರಜ್ವಲ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹೋದ ಪ್ರಜ್ವಲ್‌, ನನ್ನ ಸಹೋದರ ರೋಶನ್ ಜೊತೆ ಬಂಧಿತ ಆರೋಪಿ ಸಂಜಯ ಸತೀಶ ಮಾಂಗ್ರೆಕರ್ ಹಾಗೂ ಇತರರು ಒಟ್ಟಿಗೇ ಕೆಲಸಕ್ಕೆ ತೆರಳುವವರಾಗಿದ್ದರು. ಜೂನ್ 7 ರಂದು ಇನ್ಸ್‌ಸ್ಟಾಗ್ರಾಂ ಹಂಚಿಕೆ ವಿಚಾರವಾಗಿ ಗಲಾಟೆ ನಡೆದಿದೆ. ಆ ಸಂದರ್ಭದಲ್ಲಿ ಚಾಕುವಿನಿಂದ ಇರಿದು, ರೋಷನ್‌ನನ್ನು ಕೊಲೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಇನ್ನೂ ಇಬ್ಬರಿದ್ದರು. ಅವರನ್ನೂ ಬಂಧಿಸಬೇಕು ಎಂದರು. ಶಕುಂತಲಾ ಅವರು ಮಾತನಾಡಿ ನನ್ನ ಮಗನ ಸಾವಿಗೆ ನ್ಯಾಯ ಬೇಕಿದೆ ಎಂದು ದುಖಃ ತೋಡಿಕೊಂಡರು.
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ, ಮಾಲಾ ಹುಲಸ್ವಾರ್ ಮಾತನಾಡಿ, ಶಾಂತಿಯಿಂದ ಕೂಡಿದ ಅಂಬೇಡ್ಕರ್ ಕಾಲನಿಯಲ್ಲಿ ಕೊಲೆಯಂಥ ಘಟನೆ ನಡೆದಿದ್ದು, ಬೇಸರದ ಸಂಗತಿ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಅವರಿಗೆ ರಕ್ಷಣೆ ನೀಡಬೇಕು ಎಂದರು.
ಸಂಘಟನೆಯ ಮುಖಂಡ ಶಾಂತಾರಾಮ ಹುಲಸ್ವಾರ್ ಮಾತನಾಡಿ, ಕುಟುಂಬ ಬಡತನದಲ್ಲಿ ಜೀವನ ನಡೆಸುತ್ತಿದೆ. ಪತಿಯನ್ನು ಕಳೆದುಕೊಂಡ ಶಕುಂತಲಾ ಅವರು ಇಬ್ಬರು ಮಕ್ಕಳೊಂದಿಗೆ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ರೋಶನ್ ಮೇಲೆ ಹಲ್ಲೆ ನಡೆದಿದ್ದರಿಂದ ಚಿಕಿತ್ಸೆಗೆ ಸುಮಾರು 10 ಲಕ್ಷ ರೂ. ಖರ್ಚು ಮಾಡಿದ್ದಾರೆ. ಚಿಕಿತ್ಸೆಗಾಗಿ ಸಾಲ ಮಾಡಿಕೊಂಡಿದ್ದಾರೆ. ಜನರು ಅವರಿಗೆ ನೆರವಾಗಬೇಕು ಎಂದರು.
ನಿವೃತ್ತ ತಹಸೀಲ್ದಾರ್ ವಿನಾಯಕ ಲಾಂಜೇಕರ್ ಮಾತನಾಡಿ, ಬಡ ದಲಿತ ಕುಟುಂಬಕ್ಕೆ ಅನ್ಯಾಯವಾಗಿದೆ. ಅವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದರು. ನಗರಸಭೆ ಮಾಜಿ ಅಧ್ಯಕ್ಷೆ ಲೀಲಾಬಾಯಿ ಠಾಣೆಕರ್ ಮಾತನಾಡಿ, ಅಂಬೇಡ್ಕರ್ ಕಾಲನಿಯಲ್ಲಿ ಎಲ್ಲರೂ ಒಂದೇ ಕುಟುಂಬದಂತೆ ಇದ್ದೇವೆ. ಆದರೆ, ಕೆಟ್ಟ ಕೆಲಸಕ್ಕೆ ಎಂದು ಬೆಂಬಲ ನೀಡುವುದಿಲ್ಲ. ತಪ್ಪು ಕೆಲಸ ಮಾಡಿದವರಿಗೆ ಶಿಕ್ಷೆಯಾಗಬೇಕು. ನಾವು ಸಂತ್ರಸ್ತ ಕುಟುಂಬದ ಜೊತೆ ಇದ್ದೇವೆ ಎಂದರು.
ರಮೇಶ ಮುದ್ಗೇಕರ್, ದೀಪಕ್ ಲಾಂಜೇಕರ್, ಸಂತೋಷ ಪರವಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಮಾದಕ ವಸ್ತುಗಳ ಬಗ್ಗೆ ಗಮನ ಹರಿಸಲಿ
ಅಂಬೇಡ್ಕರ್ ಕಾಲನಿ ಸುತ್ತ ಹಲವು ಕಡೆಗಳಲ್ಲಿ ಯುವಕರು ಮಾದಕ ಪದಾರ್ಥ ಸೇವಿಸುತ್ತಿರುವ ಬಗ್ಗೆ ಪೊಲೀಸರಿಗೆ ಈ ಹಿಂದೆಯೂ ಮಾಹಿತಿ ನೀಡಿದ್ದೆವು. ಈ ಘಟನೆಯ ಹಿಂದೆ ಇಂಥ ಮಾದಕ ದ್ರವ್ಯದ ಜಾಲ ಕಂಡುಬರುತ್ತಿದ್ದು, ಸೂಕ್ತ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಮುಖಂಡ ದೇವಾನಂದ ಠಾಣೆಕರ್ ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net