ಅರ್ಥ ಅರಿತು ಆಚರಿಸುವ ಕರ್ಮಗಳಿಗೆ ಪೂರ್ಣಫಲ

ಗೋಕರ್ಣದ ಶ್ರೀ ಮಹಾಬಲೇಶ್ವರ ಮಂದಿರದ ಚಂದ್ರಶಾಲೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ ಹೆಗಡೆ ಉಂಚಗಿ ವಿರಚಿತ ಶಬ್ದಾರ್ಥ ಸಹಿತ ಸ್ವಸ್ವರ ಋಗ್ವೇದ ಸಂಹಿತಾ ಗ್ರಂಥ ಬಿಡುಗಡೆ ನಿಮಿತ್ತ ಹಿರಿಯ ವೇದವಿದ್ವಾಂಸ ಆಚಾರ್ಯ ನಾರಾಯಣ ಉಪಾಧ್ಯ ಮತ್ತಿತರ ವಿದ್ವಾಂಸರು ಗ್ರಂಥಕರ್ತರನ್ನು ಸನ್ಮಾನಿಸಿದರು. ದತ್ತಾತ್ರೇಯ ಭಟ್ಟ ವಜ್ರಳ್ಳಿ, ಮಂಜುನಾಥ ಭಟ್ಟ, ಉದಯ ಮಯ್ಯರ್, ಗಣೇಶ ಜೋಶಿ, ಡಾ. ಮಾಲತಿ ಹೆಗಡೆ ಇದ್ದರು.
ಗೋಕರ್ಣದ ಶ್ರೀ ಮಹಾಬಲೇಶ್ವರ ಮಂದಿರದ ಚಂದ್ರಶಾಲೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ ಹೆಗಡೆ ಉಂಚಗಿ ವಿರಚಿತ ಶಬ್ದಾರ್ಥ ಸಹಿತ ಸ್ವಸ್ವರ ಋಗ್ವೇದ ಸಂಹಿತಾ ಗ್ರಂಥ ಬಿಡುಗಡೆ ನಿಮಿತ್ತ ಹಿರಿಯ ವೇದವಿದ್ವಾಂಸ ಆಚಾರ್ಯ ನಾರಾಯಣ ಉಪಾಧ್ಯ ಮತ್ತಿತರ ವಿದ್ವಾಂಸರು ಗ್ರಂಥಕರ್ತರನ್ನು ಸನ್ಮಾನಿಸಿದರು. ದತ್ತಾತ್ರೇಯ ಭಟ್ಟ ವಜ್ರಳ್ಳಿ, ಮಂಜುನಾಥ ಭಟ್ಟ, ಉದಯ ಮಯ್ಯರ್, ಗಣೇಶ ಜೋಶಿ, ಡಾ. ಮಾಲತಿ ಹೆಗಡೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೋಕರ್ಣದಲ್ಲಿ ಅರ್ಥಯುಕ್ತ ವೇದ ಗ್ರಂಥ ಬಿಡುಗಡೆ
ಗೋಕರ್ಣ: ಯಾವ ಕರ್ಮವನ್ನು ಅದರ ಮೂಲಾರ್ಥ ತಿಳಿಯದೆ ಆಚರಿಸಲಾಗವುದೋ, ಯಾವ ಮಂತ್ರವನ್ನು ಮನನ ಮಾಡಿಕೊಳ್ಳದೆ ಉಚ್ಛರಿಸಲಾಗುವುದೋ ಅವುಗಳು ಯೋಜಿತ ಫಲ ನೀಡಲಾರವು ಎಂದು ಕ್ಷೇತ್ರದ ಹಿರಿಯ ವೇದ ವಿದ್ವಾಂಸ ವೇ. ನಾರಾಯಣ ಉಮಾಶಿವ ಉಪಾಧ್ಯ ಹೇಳಿದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ ಸುಬ್ರಾಯ ಹೆಗಡೆ ಉಂಚಗಿ ಅವರು ರಚಿಸಿದ ವಿನೂತನ ಶಬ್ದಾರ್ಥ ಸಹಿತ ಸ್ವಸ್ವರ ಋಗ್ವೇದ ಸಂಹಿತೆ ಮತ್ತಿತರ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
’ಜ್ಞಾತ್ವಾ ಕರ್ಮಾಣಿ ಕುರ್ವೀತ’, ಅಂದರೆ ಸರಿಯಾಗಿ ತಿಳಿದು ಕೈಗೊಳ್ಳುವ ಕರ್ಮ ಮಾತ್ರ ಪೂರ್ಣಫಲ ಅನುಗ್ರಹಿಸುತ್ತದೆ ಎಂದರು.
ಇಂದಿನ ಆಧುನಿಕ ಮುದ್ರಣ ತಂತ್ರಜ್ಞಾನದಿಂದ ಸನಾತನ ವೇದ ಗ್ರಂಥಗಳು ಮತ್ತೆ ಹೊಸ ಆವಿಷ್ಕಾರ ಪಡೆಯುವಂತಾಗಿವೆ. ಆದರೆ, ವೇದಗಳ ಸಮ್ಯಕ್ ಅರ್ಥವನ್ನು ಸಾಮಾನ್ಯರಿಗೆ ತಲುಪಿಸಬಲ್ಲ ಕೃತಿಗಳು ಇವತ್ತಿಗೂ ಅಲಭ್ಯವೂ ಅಪರೂಪವೂ ಆಗಿವೆ. ಶಬ್ದಾರ್ಥ ಸಹಿತವಾಗಿ ಋಗ್ವೇದ ಪರಿಚಯಿಸುವ ವಿನೂತನ ಈ ಗ್ರಂಥ ರಚನೆಯ ಮೂಲಕ ಡಾ. ಹೆಗಡೆ ಅವರು ಸಾರ್ವಕಾಲಿಕವಾಗಿ ಉಳಿಯಬಲ್ಲ ಅಸಾಮಾನ್ಯವಾದ ಮಹತ್ಕಾರ್ಯಕ್ಕೆ ಕಾರಣರಾಗಿ ವಿದ್ವಜ್ಜನ ಅಭಿನಂದನಾರ್ಹರಾಗಿದ್ದಾರೆ ಎಂದರು.
ಪ್ರಾಚಾರ್ಯ ಮಂಜುನಾಥ ಭಟ್ಟ ಮಾತನಾಡಿ, ವಿದ್ಯಾಧ್ಯಯನಕ್ಕೆ ವಯಸ್ಸು ಮತ್ತು ಜ್ಞಾನ ಸಂಗ್ರಹಕ್ಕೆ ಸಮಯ ಬಾಧಿಸದು ಎನ್ನುವ ಶ್ಲೋಕಕ್ಕೆ ಗ್ರಂಥವನ್ನು ರಚಿಸಿದ ಡಾ. ಹೆಗಡೆ ಅವರು ನಿದರ್ಶನವಾಗಿದ್ದಾರೆ ಎಂದರು.
ಡಾ. ಹೆಗಡೆ ಅವರ ಪತ್ನಿ ಡಾ. ಮಾಲತಿ ಹೆಗಡೆ, ವಿದ್ವಾನ್ ಗಣಪತಿ ಶಿವರಾಮ ಹಿರೇ, ದತ್ತಾತ್ರೇಯ ಭಟ್ಟ, ಪ್ರಾಚಾರ್ಯ ವೇ. ಉದಯ ಮಯ್ಯರ್ ಇದ್ದರು. ಕೃತಿಕರ್ತ ಡಾ. ಮಂಜುನಾಥ ಹೆಗಡೆ ದಂಪತಿಯನ್ನು ಸನ್ಮಾನಿಸಲಾಯಿತು.
ಹಿರಿಯ ಕ್ಷೇತ್ರ ಪುರೋಹಿತರಾದ ವೇ. ಭೂಷಣ ಉಪಾಧ್ಯ, ವೇ. ಪರಮೇಶ್ವರ ಶಂಕರಲಿಂಗ ಮತ್ತಿತರರು ಕಾರ್ಯಕ್ರಮ ಉದ್ಘಾಟಿಸಿದರು. ಇಲ್ಲಿನ ಶ್ರೀ ಸಾರ್ವಭೌಮ ವೇದವಿದ್ಯಾ ಪೀಠದ ಪ್ರಾಚಾರ್ಯ ವಿದ್ವಾನ್ ಗಣೇಶ ಜೋಶಿ, ವಿದ್ವಾನ್ ಗಣೇಶ್ವರ ದೀಕ್ಷಿತ್, ವಿದ್ವಾನ್ ಗಂಗಾರಾಮ ಜೋಗಳೇಕರ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net