ಕರಾವಳಿ ಉತ್ಸವ: ಗಮನಸೆಳೆದ ಮರಳು ಶಿಲ್ಪ, ಗಾಳಿಪಟಗಳು

ಗಾಳಿಪಟ ಉತ್ಸವಕ್ಕೆ ಬಸವರಾಜ ಹೊರಟ್ಟಿ ಚಾಲನೆ ನೀಡಿದರು.
ಗಾಳಿಪಟ ಉತ್ಸವಕ್ಕೆ ಬಸವರಾಜ ಹೊರಟ್ಟಿ ಚಾಲನೆ ನೀಡಿದರು.
Published on
ಕಾರವಾರ:ಸಾರ್ವಜನಿಕರು ತಮ್ಮ ದೈನಂದಿನ ಬದುಕಿನಲ್ಲಿ ಪ್ರತಿ ದಿನವೂ ಅನೇಕ ಒತ್ತಡದ ಕೆಲಸಗಳಲ್ಲಿ
ತೊಡಗುತ್ತಿದ್ದು, ಕರಾವಳಿ ಉತ್ಸವದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಾರ್ವಜನಿಕರು ತಮ್ಮ ದಿನ ನಿತ್ಯದ ಬದುಕಿನ ಜಂಜಾಟಗಳಿಂದ ನೆಮ್ಮದಿ ಪಡೆದುಕೊಳ್ಳಲು ಸಾಧ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಅವರು ಗುರುವಾರ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಕರಾವಳಿ ಉತ್ಸವ -2025 ರ ಅಂಗವಾಗಿ ಆಯೋಜಿಸಲಾದ ಮರುಳು ಶಿಲ್ಪಾ ರಚನೆ ಮತ್ತು ಗಾಳಿಪಟ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾನು 1986 ರಿಂದ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದು, ಜಿಲ್ಲಾಡಳಿತದ ವತಿಯಿಂದ ಪ್ರತಿ ಬಾರಿಯೂ ಕರಾವಳಿ ಉತ್ಸವ
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತದೆ. ಇಲ್ಲಿನ ಜನರ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ ಆದ್ದರಿಂದ ಉತ್ತರ ಕನ್ನಡ ಜಿಲ್ಲೆಗೆ ತಮ್ಮ ನಿಧಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡಲಾಗುವುದು ಎಂದರು.
ಕಾರವಾರದಲ್ಲಿ ಕರಾವಳಿ ಉತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಈ ಕಾರ್ಯದಲ್ಲಿ ಎಲ್ಲಾ ಅಧಿಕಾರಿಗಳು
ಸಿಬ್ಬಂದಿಗಳು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ತಮ್ಮ ಮನೆ ಉತ್ಸವದ ರೀತಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಅಯೋಜಿಸುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಭಾಗವಹಿಸಬೇಕು ಮತ್ತು ಈ ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಶ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಝೂಪಿಶಾನ್ ಹಕ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುನೀಲ್ ಅಂಕೋಲೆಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಗಾಳಿಪಟ ಉತ್ಸವದಲ್ಲಿ ಭಾಗವಹಿಸಿದ್ದ ನೂರಾರು ಸಾರ್ವಜನಿಕರು ವಿವಿಧ ರೀತಿಯ ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸುವುದರ ಮೂಲಕ ಸಮುದ್ರ ತೀರದ ಬಾನಿನಲ್ಲಿ ಆಕರ್ಷಕ ಚಿತ್ತಾರ ಬಿಡಿಸಿದರು. ಮಕ್ಕಳು ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು. ಉಡುಪಿಯ ರಾಘವೇಂದ್ರ ಮತ್ತು ತಂಡದವರು ಸಮುದ್ರತೀರದಲ್ಲಿ ಮರಳಿನಿಂದ ರಚಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಕಲೆ ಸಂಸ್ಕೃತಿ ಬಿಂಬಿಸುವ ಅಕರ್ಷಕ ಮರಳು
ಶಿಲ್ಪ ನೆರದಿದ್ದ ಸಾರ್ವಜನಿಕರನ್ನು ಆಕರ್ಷಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net